×
Ad

ಅಮೆರಿಕದ ವಿವಿಧೆಡೆ ಹಿಂಸಾಚಾರಕ್ಕೆ ತಿರುಗಿದ ಬ್ಲಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನೆ

Update: 2020-07-26 21:55 IST

ಸಿಯಾಟಲ್, ಜು.26: ಅಮೆರಿಕದ ವಿವಿಧೆಡೆ ಶನಿವಾರ ನಡೆದ ಬ್ಲಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನಾ ರ್ಯಾಲಿಯು ಹಿಂಸಾರೂಪವನ್ನು ತಾಳಿದೆ. ಜನಾಂಗೀಯವಾದ ವಿರೋಧಿ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆ ಪ್ರಕರಣಗಳು ವರದಿಯಾಗಿವೆ.

ಪೋರ್ಟ್‌ಲ್ಯಾಂಡ್ ನಗರದಲ್ಲಿ ಪ್ರತಿಭಟನಕಾರರು ನಗರದ ಫೆಡರಲ್ ಕೋರ್ಟ್ ಕಚೇರಿಯ ಸುತ್ತಲೂ ಸ್ಥಾಪಿಸಿದ್ದ ತಡೆಬೇಲಿಯನ್ನು ಮುರಿದು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಆದಾಗ್ಯೂ ಪ್ರತಿಭಟನಕಾರರು ಹಲವಾರು ರಸ್ತೆಗಳಿಗೆ ತಡೆಯೊಡ್ಡಿದ್ದಾರೆ. ಹಲವಾರು ಮಂದಿಯ ಬಂಧನವಾಗಿದೆ.

ಪೋರ್ಟ್‌ಲ್ಯಾಂಡ್‌ನಲ್ಲಿ ಕಳೆದ ವಾರ ಫೆಡರಲ್ ಪೊಲೀಸರು ಹಾಗೂ ಜನಾಂಗೀಯವಾದ ವಿರೋಧಿ ಹೋರಾಟಗಾರರ ನಡುವೆ ಭಾರೀ ಘರ್ಷಣೆ ನಡೆದ ಬಳಿಕ ಅಮೆರಿಕಾದ್ಯಂತ ಪ್ರತಿಭಟನೆ ತೀವ್ರಗೊಂಡಿದೆ.

ಪ್ರತಿಭಟನಕಾರರನ್ನು ನಿಯಂತ್ರಿಸಲು ಟ್ರಂಪ್ ಆಡಳಿತವು ವಿಶೇಷ ಫೆಡರಲ್ ಪೊಲೀಸರನ್ನು ನಿಯೋಜಿಸುತ್ತಿರುವುದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಓಮಾಹಾ ನಗರದಲ್ಲಿ ಬಿಳಿಯ ಜನಾಂಗೀಯ ಬಾರ್ ಮಾಲಕನೊಬ್ಬ, ಕಪ್ಪು ಜನಾಂಗೀಯ ಜೇಮ್ಸ್ ಸ್ಕರ್ಲಾಕ್‌ನನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆಯ ವಿರುದ್ಧ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಲಾಸ್‌ ಏಂಜಲೀಸ್‌ನಲ್ಲೂ ನ್ಯಾಯಾಲಯದ ಮುಂದೆ ಪ್ರತಿಭಟನಾ ನಿರತರ ಬ್ಲಾಕ್‌ಲೈವ್ಸ್ ಮ್ಯಾಟರ್ ಹೋರಾಟಗಾರರನ್ನು ಚದುರಿಸಲು ಪೊಲೀಸರು ರಬ್ಬರ್ ಬುಲೆಟ್‌ಗಳನ್ನು ಬಳಸಿದರು. ಸಿಯಾಟಲ್‌ನಲ್ಲಿ ಕ್ಯಾಪಿಟಲ್‌ಹಿಲ್ ವಸತಿ ಪ್ರದೇಶದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಸಿದರು. ಪ್ರತಿಭಟನಕಾರರು ಬಾಲಪರಾಧಿಗಳ ಕೇಂದ್ರದ ಸಮೀಪದಲ್ಲೇ ಇರುವ ಕಟ್ಟಡಕ್ಕೆ ಬೆಂಕಿ ಹಚ್ಚಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು, ಲಾಠಿ ಪ್ರಹಾರ ಮಾಡಿ ಅವರನ್ನು ಚದುರಿಸಿದ್ದಾರೆ. ಉದ್ರಿಕ್ತ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುಗಳು, ಬಾಟಲ್ ಹಾಗೂ ಸಿಡಿಮದ್ದುಗಳನ್ನು ಎಸೆದಿದ್ದಾರೆ.

ಶಿಕಾಗೊದಲ್ಲಿ ಶನಿವಾರ ರಾತ್ರಿ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಕೆಲವೇ ದಿನಗಳ ಹಿಂದೆ ಶಿಕಾಗೊದಲ್ಲಿದ್ದ ಐತಿಹಾಸಿಕ ನಾವಿಕ ಕ್ರಿಸ್ಟೋಫರ್ ಕೊಲಂಬಸ್‌ನ ಪ್ರತಿಮೆಯನ್ನು ಬ್ಲಾಕ್‌ಲೈವ್ಸ್ ಮ್ಯಾಟರ್ ಪ್ರತಿಭಟನಕಾರರು ತೆರವುಗೊಳಿಸಿದ್ದರು.

ನ್ಯೂಯಾರ್ಕ್ ನಗರದಲ್ಲಿಯೂ ಪ್ರತಿಭಟನೆ ಹಿಂಸಾರೂಪ ತಾಳಿದ್ದು, ಉದ್ರಿಕ್ತ ಜನರು ಪೊಲೀಸರೊಂದಿಗೆ ಬೀದಿ ಕಾಳಗ ನಡೆಸಿರುವುದಾಗಿ ವರದಿಯಾಗಿದೆ.

ಜಾರ್ಜ್ ಫ್ಲಾಯ್ಡ್ ಪೊಲೀಸರ ವಶದಲ್ಲಿ ಮೃತಪಟ್ಟ ಬಳಿಕ ಅಮೆರಿಕದಲ್ಲಿ ಜನಾಂಗೀಯವಾದ ವಿರೋಧಿ ಬ್ಲಾಕ್‌ಲೈವ್ಸ್ ಮ್ಯಾಟರ್ ಚಳವಳಿ ತೀವ್ರ ರೂಪ ತಾಳಿದೆ.

ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ನ್ಯೂಯಾರ್ಕ್ ನಗರದಲ್ಲಿಯೂ ವಿಶೇಷ ಫೆಡರಲ್ ಪೊಲೀಸರನ್ನು ನಿಯೋಜಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News