ವಿಶ್ವನಾಥನ್ ಆನಂದ್‌ಗೆ ಸತತ ಐದನೇ ನೇರ ಸೋಲು

Update: 2020-07-26 17:16 GMT

ಚೆನ್ನೈ, ಜು.26: ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಲೆಜೆಂಡ್ಸ್ ಆಫ್ ಚೆಸ್ ಆನ್‌ಲೈನ್ ಪಂದ್ಯಾವಳಿಯಲ್ಲಿ ಐದನೇ ನೇರ ಸೋಲನ್ನು ಅನುಭವಿಸಿದರು.

ವಿಶ್ವನಾಥನ್ ಆನಂದ್ ಅವರು ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಹಂಗೇರಿಯದ ಪೀಟರ್ ಲೇಕೊ ವಿರುದ್ಧ 2-3 ಅಂತರದಿಂದ ಸೋಲು ಅನುಭವಿಸಿದರು. ಮಾಜಿ ವಿಶ್ವ ಚಾಂಪಿಯನ್ ಆನಂದ್ ಅವರ ಆರಂಭ ಚೆನ್ನಾಗಿತ್ತು.ಬೆಸ್ಟ್ ಆಫ್ ಫೋರ್ ಮಾದರಿಯ ಸ್ಪರ್ಧೆಯ ಮೊದಲ ಗೇಮ್‌ನ್ನು ಗೆದ್ದರು. ಎರಡು ಮತ್ತು ಮೂರನೇ ಗೇಮ್‌ಗಳು ಡ್ರಾನಲ್ಲಿ ಕೊನೆಗೊಂಡಿತು. ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಲೇಕೊ ಸಮಬಲ ಸಾಧಿಸಿದರು.

ಟೈ-ಬ್ರೇಕರ್‌ನಲ್ಲಿ ಲೇಕೊ ಅವರು ಆನಂದ್‌ಗೆ ಸೋಲುಣಿಸಿದರು.

ಮ್ಯಾಗ್ನಸ್ ಕಾರ್ಲ್‌ಸನ್ ಚೆಸ್ ಈವೆಂಟ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಆನಂದ್ ಈ ಹಿಂದೆ ಪೀಟರ್ ಸ್ವಿಡ್ಲರ್, ಮ್ಯಾಗ್ನಸ್ ಕಾರ್ಲ್‌ಸನ್, ವ್ಲಾಡಿಮಿರ್ ಕ್ರಾಮ್ನಿಕ್ ಮತ್ತು ಅನೀಶ್ ಗಿರಿ ವಿರುದ್ಧ ಸೋತಿದ್ದರು.

ಪಂದ್ಯಾವಳಿ ಮ್ಯಾಗ್ನಸ್ ಕಾರ್ಲ್‌ಸನ್ ಚೆಸ್ ಟೂರ್ನಿಯ ಭಾಗವಾಗಿದೆ. ಈ ಸ್ಪರ್ಧೆಯ ವಿಜೇತರು ಆಗಸ್ಟ್ 9ರಿಂದ 20 ರವರೆಗೆ ನಿಗದಿಯಾಗಿರುವ ಗ್ರಾಂಡ್ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. 5ನೇ ಸುತ್ತಿನ ಫಲಿತಾಂಶಗಳು: ಪೀಟರ್ ಲೇಕೊ ವಿರುದ್ಧ ವಿಶ್ವನಾಥನ್ ಆನಂದ್‌ಗೆ 2-3 ಸೋಲು, ಮ್ಯಾಗ್ನಸ್ ಕಾರ್ಲ್‌ಸನ್‌ಗೆ ವಾಸಿಲ್ ಇವಾಂಚುಕ್ 3-2 ಜಯ, ವ್ಲಾಡ್ಮಿರ್ ಕ್ರಾಮ್ನಿಕ್ ಅವರು ಡಿಂಗ್ ಲಿರೆನ್‌ರನ್ನು 2.5-1.5ರಿಂದ ಸೋಲಿಸಿದರು, ಅನೀಶ್ ಗಿರಿ ಅವರಿಗೆ ಬೋರಿಸ್ ಗೆಲ್ಫ್ಯಾಂಡ್ ವಿರುದ್ಧ 2.5-1.5 ಜಯ, ಇಯಾನ್ ನೆಪೋಮಿನಿಯಾಚ್ಚಿ ಅವರು ಪೀಟರ್ ಸ್ವಿಡ್ಲರನ್ನು 3-1 ಅಂತರಂದ ಸೋಲಿಸಿದರು.

ಇದೀಗ ಪಾಯಿಂಟ್ಸ್ ಪಟ್ಟಿಯಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News