ಯುಎಇಯ 3 ಸ್ಥಳಗಳಲ್ಲಿ ಐಪಿಎಲ್‌ನ ಎಸಿಯು ಕಾರ್ಯಾಚರಣೆ ಸುಲಭ: ಅಜಿತ್ ಸಿಂಗ್

Update: 2020-07-26 17:18 GMT

ಹೊಸದಿಲ್ಲಿ, ಜು.26:ಐಪಿಎಲ್‌ನ್ನು ಯುಎಇಗೆ ಕೊಂಡೊಯ್ಯುವುದು ಪಂದ್ಯಾವಳಿ ಆಯೋಜಕರಿಗೆ ಸವಾಲಾಗಿದೆ. ಆದರೆ ಐಪಿಎಲ್ ಕೇವಲ ಮೂರು ಸ್ಥಳಗಳಿಗೆ ಸೀಮಿತವಾಗಿರುವುದರಿಂದ ಎಸಿಯು ಕಾರ್ಯಾಚರಣೆ ಹೆಚ್ಚು ಕಷ್ಟವಿಲ್ಲ ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.

ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ನವೆಂಬರ್ 8ರಂದು ನಡೆಯಲಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿನ ಮೂರು ಕ್ರೀಡಾಂಗಣಗಳಲ್ಲಿ 51 ದಿನಗಳ ಕಾಲ 60 ಪಂದ್ಯಗಳನ್ನು ಆಯೋಜಿಸಲಾಗುವುದು.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಯುಎಇ 2014ರಲ್ಲಿ ಐಪಿಎಲ್‌ನ ಮೊದಲ ಹಂತದ ಪಂದ್ಯಾವಳಿಯನ್ನು ಆಯೋಜಿಸಿತ್ತು.

ಪ್ರಸ್ತುತ ಬಿಸಿಸಿಐ ವೇತನ ಪಡೆಯುವವರಲ್ಲಿ ಎಂಟು ಎಸಿಯು ಅಧಿಕಾರಿಗಳು ಇದ್ದಾರೆ ಎಂದು ಸಿಂಗ್ ಹೇಳಿದರು.

‘‘ಯಾವ ರೀತಿಯ ಜೈವಿಕ-ಸುರಕ್ಷತಾ ಕ್ರಮಗಳನ್ನು ರಚಿಸಲಾಗುವುದು ಎಂಬುದನ್ನು ನಾವು ಮೊದಲು ಪರಿಶೀಲಿಸಬೇಕಾಗಿರುವುದರಿಂದ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಲು ಈಗ ಸಾಧ್ಯವಿಲ್ಲ. ಅಲ್ಲಿನ ಪರಿಸ್ಥಿತಿಯನ್ನ್ನು ನಾವು ಮೊದಲು ನೋಡಬೇಕು ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ಅಧಿಕಾರಿಗಳನ್ನು ನಿಯೋಜಿಸುತ್ತೇವೆ’’ ಎಂದು ಸಿಂಗ್ ಹೇಳಿದರು.

‘‘ಒಂದು ವೇಳೆ ನಮಗೆ ಸಿಬ್ಬಂದಿಯ ಅಗತ್ಯವಿದ್ದರೆ, ನಾವು ಅವರನ್ನು ನೇಮಿಸಿಕೊಳ್ಳುತ್ತೇವೆ ’’ಎಂದರು.

ಐಸಿಸಿ ಪ್ರಧಾನ ಕಚೇರಿ ದುಬೈನಲ್ಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ, ಅಗತ್ಯವಿದ್ದರೆ ಎಸಿಯು ಅಧಿಕಾರಿಗಳ ಬೃಹತ್ ತಂಡವನ್ನು ಹೊಂದಿರುವ ಜಾಗತಿಕ ಸಂಸ್ಥೆಯ ಸಹಾಯವನ್ನು ತೆಗೆದುಕೊಳ್ಳಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಯಮಗಳ ಪ್ರಕಾರ ಪ್ರತಿ ತಂಡದಲ್ಲೂ ‘ಸಮಗ್ರತೆ ಅಧಿಕಾರಿ’ಇರುತ್ತಾರೆ. ಐಪಿಎಲ್ ಅವಧಿಯಲ್ಲಿ ಪ್ರತಿ ತಂಡಕ್ಕೆ ಒಬ್ಬ ಸಮಗ್ರತೆ ಅಧಿಕಾರಿಗಳನ್ನು ನೇಮಿಸುವುದು ಬಿಸಿಸಿಐ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯುಎಇಯಲ್ಲಿ ನಡೆಯುವ ಪಂದ್ಯಗಳಿಗೆ ಬುಕ್ಕಿಗಳು ಮತ್ತು ಫಿಕ್ಸರ್ಸ್‌ಗಳ ಭೀತಿ ಬಹಳ ಹಿಂದಿನಿಂದಲೂ ಇದೆ. ಈ ಪಂದ್ಯಾವಳಿಯ ಬದಲಾವಣೆಯಿಂದ ಗುಪ್ತಚರ ವಿಭಾಗಕ್ಕೆ ಅಡ್ಡಿಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಸಿಂಗ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News