×
Ad

ಸಹಾಯ ಯಾಚಿಸಿದರೂ ತಿರುಗಿ ನೋಡದ ಜನರು: ಆ್ಯಂಬುಲೆನ್ಸ್ ಗೆ ಹತ್ತಲಾಗದೆ ರಸ್ತೆಯಲ್ಲೇ ಕೊನೆಯುಸಿರೆಳೆದ ವೃದ್ಧ

Update: 2020-07-26 22:51 IST

ಕೊಲ್ಕತ್ತಾ: ಅನಾರೋಗ್ಯಪೀಡಿತ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಗೆ ಹತ್ತಿಸಲು ಪತ್ನಿ ಅಂಗಲಾಚಿದರೂ ಯಾರೊಬ್ಬರೂ ಸಹಾಯಕ್ಕೆ ಬಾರದೆ, ಕೊನೆಗೆ ಆ ವ್ಯಕ್ತಿ ರಸ್ತೆಯಲ್ಲೇ ಕೊನೆಯುಸಿರೆಳೆದ ಘಟನೆ ಪಶ್ಚಿಮ ಬಂಗಾಳದ ಬೋಂಗೌನ್ ನಲ್ಲಿ ನಡೆದಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 68 ವರ್ಷದ ಮಾಧವ್ ನಾರಾಯಣ್ ರನ್ನು ಇಲ್ಲಿನ ಆಸ್ಪತ್ರೆಯೊಂದಕ್ಕೆ ಸಂಜೆಯ ವೇಳೆ ಕರೆತರಲಾಗಿತ್ತು. ಅವರನ್ನು ಅಲ್ಲಿ ಶಂಕಿತ ಕೊರೋನ ರೋಗಿಗಳ ವಾರ್ಡ್ ಗೆ ದಾಖಲಿಸಲಾಗಿತ್ತು.

ಸುಮಾರು 8 ಗಂಟೆಯ ವೇಳೆಗೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಹೇಳಿದರು. ಈ ಆಸ್ಪತ್ರೆ ಸುಮಾರು 80 ಕಿ.ಮೀ. ದೂರದಲ್ಲಿತ್ತು. ಕೂಡಲೇ ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದರೂ ಅದಕ್ಕೆ ಹತ್ತಲು ಮಾಧವ್ ರಿಗೆ ಸಾಧ್ಯವಾಗಲಿಲ್ಲ. ಅವರನ್ನು ಆ್ಯಂಬುಲೆನ್ಸ್ ಗೆ ಹತ್ತಿಸಲು ಪತ್ನಿ  ನಾನಾ ಯತ್ನಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆಕೆ ಸ್ಥಳದಲ್ಲಿದ್ದವರಲ್ಲಿ ತನ್ನ ಪತಿಯನ್ನು ಆಸ್ಪತ್ರೆಗೆ ಹತ್ತಿಸುವಂತೆ ಕೇಳಿಕೊಂಡರು. ಆದರೆ ಯಾರೊಬ್ಬರೂ ಮುಂದೆ ಬರಲಿಲ್ಲ.

ಆ್ಯಂಬುಲೆನ್ಸ್ ಏರಲು ದಂಪತಿ ಕಷ್ಟಪಡುತ್ತಿರುವುದನ್ನು ಜನರು ನೋಡುತ್ತಿದ್ದರೂ, ಯಾರೂ ಸಹಾಯಕ್ಕೆ ಮುಂದಾಗಲಿಲ್ಲ. ಸ್ಥಳದಲ್ಲೇ ಪಿಪಿಇ ಸೂಟು ಧರಿಸಿದ್ದ ಆ್ಯಂಬುಲೆನ್ಸ್ ಚಾಲಕನೂ ಇದ್ದ. ‘ದಾದಾ, ನೀನು ಪಿಪಿಇ ಧರಿಸಿದ್ದಿ. ದಯವಿಟ್ಟು ಸಹಾಯ ಮಾಡು” ಎಂದು ಮಹಿಳೆ ಗೋಗರೆದರೂ ಅವನ ಕಿವಿಗೆ ಬೀಳಲಿಲ್ಲ.

ಸುಮಾರು 30 ನಿಮಿಷಗಳು ಹೀಗೆಯೇ ಕಳೆದು ಆ್ಯಂಬುಲೆನ್ಸ್ ಏರಲಾಗದೆ ಮಾಧವ್ ರಸ್ತೆಯಲ್ಲೇ ಕೊನೆಯಿಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News