ಕೇರಳ: ಕೊರೋನದಿಂದ ಮೃತ ವೃದ್ಧನ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ಬಿಜೆಪಿ ಕೌನ್ಸಿಲರ್

Update: 2020-07-27 15:23 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಜು.27: ಕೊರೋನ ಸೋಂಕಿನಿಂದ ಮೃತಪಟ್ಟಿದ್ದ 83 ವರ್ಷದ ವೃದ್ಧ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದ ಘಟನೆ ಕೊಟ್ಟಾಯಂನಲ್ಲಿ ನಡೆದಿದ್ದು, ಸ್ಥಳೀಯರು ಹಾಗೂ ಬಿಜೆಪಿ ಕೌನ್ಸಿಲರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುರಸಭೆಯ ಸ್ಮಶಾನದಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ವಿರೋಧಿಸಿದ್ದರು. ಈ ಸಂದರ್ಭ ಅಲ್ಲಿದ್ದ ಬಿಜೆಪಿ ಕೌನ್ಸಿಲರ್ ಟಿಎನ್ ಹರಿಕುಮಾರ್ ಸರಕಾರಿ ಸಿಬ್ಬಂದಿಗಳತ್ತ ರೇಗಾಡಿ, ನಿಮ್ಮ ಮನೆಗೆ ಮೃತದೇಹ ಸಾಗಿಸಿ ಎಂದು ಕೂಗಾಡಿದ್ದರು. ಆಗ ಮಹಿಳೆಯರೂ ಸೇರಿದಂತೆ ಸ್ಥಳೀಯರು ನೆಲದ ಮೇಲೆ ಕುಳಿತು ಸ್ಮಶಾನ ಪ್ರವೇಶಕ್ಕೆ ತಡೆಯೊಡ್ಡಿದ್ದರು.

ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಅಲ್ಲಿಂದ ತೆರಳಿದ್ದ ಸಿಬ್ಬಂದಿ, ರಾತ್ರಿ 11 ಗಂಟೆಗೆ ಬಿಗು ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿ ಮೃತದೇಹದ ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಕ್ರಮವಾಗಿ ಗುಂಪು ಸೇರಿದ್ದು ಹಾಗೂ ಕೊರೋನ ಶಿಷ್ಟಾಚಾರ(ನಿಯಮಾವಳಿ)ಯನ್ನು ಉಲ್ಲಂಘಿಸಿದ್ದಕ್ಕೆ ಹರಿಕುಮಾರ್ ಹಾಗೂ ಸ್ಥಳೀಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಹರಿಕುಮಾರ್, ಸ್ಥಳೀಯರಿಗೆ ಅಥವಾ ತನಗೆ ಮಾಹಿತಿ ನೀಡದೆ ಮೃತದೇಹದ ಅಂತ್ಯಸಂಸ್ಕಾರಕ್ಕೆ ಸಿಬ್ಬಂದಿಗಳು ಆಗಮಿಸಿದ್ದರು. ಸ್ಥಳೀಯರು ಪ್ರತಿಭಟನೆ ಆರಂಭಿಸಿದಾಗ ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಜನರಿಗೆ ನಿಯಮ ಕಲಿಸಲು ಮುಂದಾದರು. ಇದು ನಿಯಮದ ಬಗ್ಗೆ ಹೇಳುವ ಸಮಯವೇ? ಆದ್ದರಿಂದ, ಮೃತದೇಹ ನಿಮ್ಮ ಮನೆಗೇ ಕೊಂಡೊಯ್ಯಿರಿ ಎಂದು ಹೇಳಿದ್ದೇನೆ ಎಂದಿದ್ದಾರೆ.

‘ಕೊರೋನ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಕಾಂಗ್ರೆಸ್ ಮತ್ತು ಬಿಜೆಪಿ ದುರ್ಬಲಗೊಳಿಸುತ್ತಿದೆ ಎಂದು ತಾನು ಈ ಹಿಂದೆ ಹೇಳಿದ್ದಾಗ ಪಕ್ಷಪಾತಿ ಎಂದು ಕೆಲವರು ಹೇಳಿದ್ದರು. ಆದರೆ ಇತ್ತೀಚಿನ ಘಟನೆಯಲ್ಲಿ ಬಿಜೆಪಿ ಕೌನ್ಸಿಲರ್, ಸಾರ್ವಜನಿಕ ಚಿತಾಗಾರದಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ ಸ್ಥಳೀಯರನ್ನು ಪ್ರೇರೇಪಿಸಿದ್ದಾರೆ. ಹೊಗೆಯಿಂದ ಕೂಡಾ ಕೊರೋನ ಸೋಂಕು ಹರಡುತ್ತದೆ ಎಂಬ ಕಾರಣ ನೀಡಲಾಗಿದೆ’ ಎಂದು ಕೇರಳ ಸಚಿವ ಥಾಮಸ್ ಇಸಾಕ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕ ಟಿ. ರಾಧಾಕೃಷ್ಣನ್ ಅವರೂ ಘಟನೆಯನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News