‘ಪಿಎಂ ಕೇರ್ಸ್‌ ಫಂಡ್’ ಹಣ ಎನ್‌ಡಿಆರ್‌ಎಫ್‌ಗೆ ವರ್ಗಾವಣೆಗೆ ಮನವಿ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Update: 2020-07-27 16:13 GMT

ಹೊಸದಿಲ್ಲಿ, ಜು. 27: ಕೊರೋನ ಹಿನ್ನೆಲೆಯಲ್ಲಿ ‘ಪಿಎಂ ಕೇರ್ಸ್‌ ಫಂಡ್’ ಅಡಿಯಲ್ಲಿ ಸಂಗ್ರಹಿಸಲಾದ ಎಲ್ಲಾ ಹಣವನ್ನು ರಾಷ್ಟ್ರೀಯ ವಿಪತ್ತು ಸ್ಪಂದನ ನಿಧಿ (ಎನ್‌ಡಿಆರ್‌ಎಫ್)ಗೆ ವರ್ಗಾಯಿಸಬೇಕು ಎಂದು ಕೋರಿದ ಮನವಿಯ ಮೇಲಿನ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಕಾದಿರಿಸಿದೆ.

ಕೇಂದ್ರ ಸರಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಪಿಎಂ ಕೇರ್ಸ್ ಫಂಡ್’ ಒಂದು ಸ್ವಯಂಪ್ರೇರಿತ ನಿಧಿ. ಬಜೆಟ್ ಮಂಜೂರು ಮೂಲಕ ಈ ಫಂಡ್ ಅನ್ನು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠಕ್ಕೆ ತಿಳಿಸಿದರು.

ದೂರುದಾರ ಸರಕಾರೇತರ ಸಂಸ್ಥೆ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್’ ಪರ ಹಾಜರಾದ ಹಿರಿಯ ವಕೀಲ ದುಷ್ಯಂತ ದವೆ, ಯಾರೊಬ್ಬರ ಪ್ರಮಾಣಿಕತೆ ಬಗ್ಗೆ ಅನುಮಾನಿಸುತ್ತಿಲ್ಲ. ಆದರೆ, ‘ಪಿಎಂ ಕೇರ್ಸ್ ಫಂಡ್’ ಸ್ಥಾಪನೆಯು ವಿಪತ್ತು ನಿರ್ವಹಣಾ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.

ಎನ್‌ಡಿಆರ್‌ಎಫ್‌ನ ಲೆಕ್ಕ ಪರಿಶೋಧನೆಯನ್ನು ಮಹಾಲೇಖಪಲರು ಮಾಡುತ್ತಾರೆ. ಆದರೆ, ‘ಪಿಎಂ ಕೇರ್ಸ್ ಫಂಡ್’ನ ಲೆಕ್ಕ ಪರಿಶೋಧನೆಯನ್ನು ಖಾಸಗಿ ಲೆಕ್ಕ ಪರಿಶೋಧಕರು ಮಾಡುತ್ತಾರೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ ಎಂದು ಅವರು ಪ್ರತಿಪಾದಿಸಿದರು.

 ‘ಪಿಎಂ ಕೇರ್ಸ್ ಫಂಡ್’ ಅಡಿಯಲ್ಲಿ ಸಂಗ್ರಹಿಸಲಾದ ಹಣವನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವುದಕ್ಕೆ ಸಂಬಂಧಿಸಿದ ದೂರಿನಲ್ಲಿ ಎತ್ತಲಾದ ವಿಚಾರಕ್ಕೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ಕಾದಿರಿಸಿತು. ಕೊರೋನ ಸಾಂಕ್ರಾಮಿಕ ರೋಗಕ್ಕಾಗಿ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ಸಂಗ್ರಹಿಸಲಾದ ಎಲ್ಲ ದೇಣಿಗೆಯನ್ನು ‘ಪಿಎಂ ಕೇರ್ಸ್ ಫಂಡ್’ಗೆ ಬದಲಾಗಿ ಎನ್‌ಡಿಆರ್‌ಎಫ್‌ಗೆ ವರ್ಗಾಯಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಮನವಿ ಕುರಿತು ಪ್ರತಿಕ್ರಿಯ ಸಲ್ಲಿಸುವಂತೆ ಜೂನ್ 17ರಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News