ಭಾರತ, ಚೀನಾ ಪಡೆಗಳು ಗಡಿಯ ಹೆಚ್ಚಿನ ಸ್ಥಳಗಳಲ್ಲಿ ಸಂಪೂರ್ಣ ಹಿಂದಕ್ಕೆ: ಚೀನಾ

Update: 2020-07-28 17:21 GMT

ಬೀಜಿಂಗ್, ಜು. 28: ಭಾರತ ಮತ್ತು ಚೀನಾದ ಮುಂಚೂಣಿ ಪಡೆಗಳು ಗಡಿಯ ಹೆಚ್ಚಿನ ಭಾಗಗಳಲ್ಲಿ ಸಂಪೂರ್ಣವಾಗಿ ಹಿಂದಕ್ಕೆ ಸರಿದಿವೆ ಎಂದು ಚೀನಾ ಮಂಗಳವಾರ ಹೇಳಿದೆ. ಉಳಿದ ವಿವಾದಗಳನ್ನು ಬಗೆಹರಿಸಲು ಮುಂದಿನ ಸುತ್ತಿನ ಸೇನಾ ಮಟ್ಟದ ಮಾತುಕತೆಗಳಿಗಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಅದು ತಿಳಿಸಿದೆ.

ಶುಕ್ರವಾರ ನಡೆದ ಗಡಿ ವ್ಯವಹಾರಗಳ ಕುರಿತ ಸಮಾಲೋಚನೆ ಮತ್ತು ಸಮನ್ವಯ ಸಮಿತಿಯ ಮೂರು ಗಂಟೆಗಳ ಸಭೆಯ ಬಳಿಕ ಚೀನಾದ ವಿದೇಶ ಸಚಿವಾಲಯವು ಈ ಮಾಹಿತಿಯನ್ನು ನೀಡಿದೆ.

ಸೇನಾ ಹಿಂದೆಗೆತಕ್ಕೆ ಸಂಬಂಧಿಸಿ ಎರಡು ದೇಶಗಳ ಹಿರಿಯ ಸೇನಾ ಕಮಾಂಡರ್‌ಗಳ ನಡುವೆ ಏರ್ಪಟ್ಟ ಒಡಂಬಡಿಕೆಯನ್ನು 'ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವಂತೆ' ಭಾರತವು ಚೀನಾಕ್ಕೆ ಸೂಚಿಸಿದ ಬಳಿಕ, ಹಿಂದೆಗೆತ ಪ್ರಕ್ರಿಯೆ ಬಗ್ಗೆ ಭಾರತ ಮತ್ತು ಚೀನಾಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು.

ಗಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಹಿಂದೆಗೆತ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿದ್ದಾರೆಯೇ ಎಂಬ ಪ್ರಶ್ನೆಯೊಂದಕ್ಕೆ ಮಂಗಳವಾರ ಉತ್ತರಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಹೆಚ್ಚಿನ ಪ್ರದೇಶಗಳಲ್ಲಿ ಸೇನಾ ವಾಪಸಾತಿ ಕಾರ್ಯ ಪೂರ್ಣಗೊಂಡಿದೆ ಎಂದರು.

''ಇತ್ತೀಚೆಗೆ ಚೀನಾ ಮತ್ತು ಭಾರತಗಳು ಸೇನಾ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಹನ ನಡೆಸಿವೆ. ನಾವು ನಾಲ್ಕು ಸುತ್ತುಗಳ ಕಮಾಂಡರ್ ಮಟ್ಟದ ಮಾತುಕತೆಗಳನ್ನು ಹಾಗೂ ಸಮಾಲೋಚನೆ ಮತ್ತು ಸಮನ್ವಯ ಸಮಿತಿಯ ಮೂರು ಸಭೆಗಳನ್ನು ನಡೆಸಿದ್ದೇವೆ'' ಎಂದು ವಾಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News