ಹಾಂಕಾಂಗ್ ಜೊತೆಗಿನ ಗಡಿಪಾರು ಒಪ್ಪಂದವನ್ನು ಸ್ಥಗಿತಗೊಳಿಸಿದ ನ್ಯೂಝಿಲ್ಯಾಂಡ್

Update: 2020-07-28 17:31 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಜು. 28: ಹಾಂಕಾಂಗ್ ಜೊತೆಗಿನ ಗಡಿಪಾರು ಒಪ್ಪಂದವನ್ನು ನ್ಯೂಝಿಲ್ಯಾಂಡ್ ಅಮಾನತಿನಲ್ಲಿಟ್ಟಿದೆ ಎಂದು ನ್ಯೂಝಿಲ್ಯಾಂಡ್‌ನ ವಿದೇಶ ವ್ಯವಹಾರಗಳ ಸಚಿವ ವಿನ್‌ಸ್ಟನ್ ಪೀಟರ್ಸ್ ಮಂಗಳವಾರ ತಿಳಿಸಿದರು. ಚೀನಾವು ಹಾಂಕಾಂಗ್ ಮೇಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಿದ ಬಳಿಕ ಅದು ಈ ಕ್ರಮ ತೆಗೆದುಕೊಂಡಿದೆ.

''ಹಾಂಕಾಂಗ್‌ನ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಚೀನಾದ ನಿಯಂತ್ರಣದಿಂದ ಸ್ವತಂತ್ರವಾಗಿದೆ ಎಂಬುದಾಗಿ ನ್ಯೂಝಿಲ್ಯಾಂಡ್ ಇನ್ನು ಮುಂದೆ ಭಾವಿಸುವುದಿಲ್ಲ'' ಎಂದು ಪೀಟರ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

''ಭವಿಷ್ಯದಲ್ಲಿ ಚೀನಾವು 'ಒಂದು ದೇಶ-ಎರಡು ವ್ಯವಸ್ಥೆ' ಒಡಂಬಡಿಕೆಗೆ ಮರಳಿದರೆ, ಆಗ ನಮ್ಮ ನಿರ್ಧಾರವನ್ನು ಪುನರ್‌ಪರಿಶೀಲಿಸಬಹುದಾಗಿದೆ'' ಎಂದು ಅವರು ಹೇಳಿದರು.

ಈಗಾಗಲೇ ಆಸ್ಟ್ರೇಲಿಯ, ಕೆನಡ ಮತ್ತು ಬ್ರಿಟನ್‌ಗಳು ಹಾಂಕಾಂಗ್ ಜೊತೆಗಿನ ಗಡಿಪಾರು ಒಪ್ಪಂದವನ್ನು ಸ್ಥಗಿತಗೊಳಿಸಿವೆ. ಅದೇ ವೇಳೆ, ಹಾಂಕಾಂಗ್ ನೀಡಲಾಗಿದ್ದ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News