ಭಾರೀ ಸವಾಲುಗಳನ್ನು ನಿಭಾಯಿಸಿದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

Update: 2020-07-29 06:15 GMT
ಸಿಂಧೂ ರೂಪೇಶ್ ವರ್ಗಾವಣೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಕಂಡುಬಂದ ಪೋಸ್ಟರ್.

ಮಂಗಳೂರು: ದ.ಕ. ಜಿಲ್ಲಾಧಿಕಾರಿ ಯಾಗಿ ಹಲವಾರು ಒತ್ತಡಗಳ ನಡುವೆ ಅಧಿಕಾರ ವಹಿಸಿಕೊಂಡಿದ್ದ ಸಿಂಧೂ ಬಿ. ರೂಪೇಶ್ ತಮ್ಮ ಅಧಿಕಾರದುದ್ದಕ್ಕೂ ಒತ್ತಡ ಹಾಗೂ ಸವಾಲುಗಳೊಂದಿಗೇ ಕಾರ್ಯ ನಿರ್ವಹಿಸಿದ್ದಾರೆ.

ಜಾನುವಾರು ಸಾಗಾಟಗಾರರ ಕುರಿತಂತೆ ಅವರು ಸೋಮವಾರ ನೀಡಿದ ಹೇಳಿಕೆಯ ಬೆನ್ನಲ್ಲೇ ಅವರ ಹತ್ಯೆ ಬೆದರಿಕೆಯು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು. ಈ ನಡುವೆ ಅವರನ್ನು ದಿಢೀರ್ ಆಗಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಕಳೆದ (2019) ಸೆಪ್ಟೆಂಬರ್ 6ರಂದು ದಿಢೀರ್ ರಾಜೀನಾಮೆ ನೀಡಿ ದಾಗ ನೂತನ ಜಿಲ್ಲಾಧಿಕಾರಿಯಾಗಿ ಸಿಂಧೂ ರೂಪೇಶ್ ಅಧಿಕಾರ ವಹಿಸಿಕೊಂಡಿದ್ದರು. ಅದಾಗಲೇ ಜಿಲ್ಲೆಯು ಭಾರೀ ಮಳೆ, ಪ್ರವಾಹ ದಿಂದ ನಲುಗಿ ಹೋಗಿತ್ತು. ಆ ಸವಾಲುಗಳೊಂದಿಗೆ ಅಧಿಕಾರ ವಹಿಸಿಕೊಂಡಿದ್ದ ಅವರು ಪುಟ್ಟ ಮಗುವಿನ ತಾಯಿ ಯಾಗಿದ್ದುಕೊಂಡು ಓರ್ವ ಜಿಲ್ಲಾಧಿಕಾರಿಯಾಗಿ ಒತ್ತಡಗಳ ನಡುವೆಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸರಳ, ಮಿತ ಭಾಷಿ, ನಗುಮೊಗದ ಸಿಂಧೂ ರೂಪೇಶ್ ಅಧಿಕಾರ ವಹಿಸಿಕೊಂಡಾಗ, ಪ್ರವಾಹದಿಂದ ತತ್ತರಿಸಿದ್ದ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ, ಪರಿಹಾರ ವಿತರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದರು. ಆ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಾ ಜಿಲ್ಲೆಯ ವೈವಿಧ್ಯಮಯ ಭೂಭಾಗ, ಇಲ್ಲಿನ ಕಂದಾಯ ವಿಚಾರ, ಇಲ್ಲಿನ ದಲಿತರ ಸಮಸ್ಯೆಗಳನ್ನು ಅವರು ಮನನ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇವೆಲ್ಲದರ ನಡುವೆ, ಇಲ್ಲಿನ ರಾಜಕೀಯ ಮೇಲಾಟ, ಸೌಹಾರ್ದದ ನಡುವೆಯೂ ಕೋಮು ದ್ವೇಷದ ತಾಕಲಾಟವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಜಿಲ್ಲೆಯಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ, ಘರ್ಷಣೆಯಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸವಾಲು, ಒತ್ತಡ ಮುಂದುವರಿಯುತ್ತಿರುವಂತೆಯೇ ಕೊರೋನ ಸೋಂಕು ಅಟ್ಟಹಾಸ ಮೆರೆಯಲಾರಂಭಿತು. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಜತೆಯಲ್ಲೇ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದ್ದಂತೆಯೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಂವಹನದ ಕೊರತೆಯು ಎದುರಾಗಿತ್ತು. ಈ ಸಂದರ್ಭದಲ್ಲೇ ಜಿಲ್ಲಾಧಿಕಾರಿಯ ವರ್ಗಾವಣೆಯ ಮಾತು ಕೇಳಿಬಂದಿತ್ತು. ಬಳಿಕ ಲಾಕ್‌ಡೌನ್ ಸಮಸ್ಯೆ, ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ಜವಾಬ್ಧಾರಿ, ಅವರಿಗೆ ಆಹಾರ ವಿತರಣೆ, ಕೋವಿಡ್ ನಿಯಂತ್ರಣಕ್ಕೆ ಕ್ರಮಗಳು ಸೇರಿದಂತೆ ಹಲವಾರು ಒತ್ತಡಗಳನ್ನು ತಮ್ಮಿಂದಾಗುವಷ್ಟರ ಮಟ್ಟಿಗೆ ನಿಭಾಯಿಸಲು ಅವರು ಪ್ರಯತ್ನಿಸುತ್ತಲೇ ಬಂದರು.

ಕೊರೋನ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವಂತೆಯೇ ದ.ಕ. ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟದ ನೆಪದಲ್ಲಿ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ಪ್ರಕರಣಗಳು ನಡೆಯಲಾರಂಭಿಸಿತು.

ಹಲ್ಲೆ ನಡೆದರೆ ಕಾನೂನು ಕ್ರಮ ಎಂಬ ಹೇಳಿಕೆಯೇ ಮುಳುವಾಯಿತೇ?

ಇವೆಲ್ಲದರ ನಡುವೆ ಜು.27ರಂದು ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಾನುವಾರು ಸಾಗಾಟಕ್ಕೆ ಸಂಬಂಧ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸಭೆ ನಡೆಸಿದ್ದರು.

ಸಭೆಯಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು/ ಮುಖ್ಯ ಪಶು ವೈದ್ಯಾಧಿಕಾರಿ ಹಾಗೂ ಮೇಲ್ಮಟ್ಟದ ಅಧಿಕಾರಿಗಳು ಜಾನುವಾರು ಸಾಗಣೆಗೆ ಪರವಾನಿಗೆ ನೀಡಬಹುದಾಗಿದ್ದು, ಈ ಬಗ್ಗೆ ಗಮನಹರಿಸಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಬಕ್ರೀದ್ ಅಥವಾ ಇತರ ಹಬ್ಬಗಳ ಸಂದರ್ಭ ಅಕ್ರಮವಾಗಿ ಗೋವು/ ಕರುಗಳು, ಒಂಟೆ ಮತ್ತು ಇತರ ಜಾನುವಾರಗಳ ಸಾಗಾಟ ಅಥವಾ ವಧೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಜತೆಗೆ, ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಿದ್ದರು. ಅಕ್ರಮ ಅಥವಾ ಅನಧಿಕೃತ ಜಾನುವಾರು ಸಾಗಾಟದ ಸಂದರ್ಭ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳದೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಕಾನೂನು ಉಲ್ಲಂಘಿಸಿ ಜಾನುವಾರ ಸಾಗಾಟ ಮಾಡುವ ವಾಹನ ಅಥವಾ ಜನರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸಭೆಯಲ್ಲಿ ಸ್ಪಷ್ಟ ಎಚ್ಚರಿಕೆ ನೀಡಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿ ವಾಟ್ಸ್ ಆ್ಯಪ್ ಗ್ರೂಪ್‌ವೊಂದರಲ್ಲಿ ವ್ಯಕ್ತಿಯೊಬ್ಬ ನೇರವಾಗಿ ಜಿಲ್ಲಾಧಿಕಾರಿಯನ್ನು ಹತ್ಯೆಗೈಯುವ ಬೆದರಿಕೆಯನ್ನೂ ಒಡ್ಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಆಕ್ರೋಶ, ವಿರೋಧ ವ್ಯಕ್ತವಾಗಿರುವಂತೆಯೇ ಜಿಲ್ಲಾಧಿಕಾರಿ ವರ್ಗಾವಣೆಯಾಗಿದೆ.

ದ.ಕ. ಜಿಲ್ಲೆಯ ದ್ವಿತೀಯ ಮಹಿಳಾ ಜಿಲ್ಲಾಧಿಕಾರಿ!

ಸಿಂಧೂ ಬಿ. ರೂಪೇಶ್ ದ.ಕ. ಜಿಲ್ಲೆಯ ದ್ವಿತೀಯ ಮಹಿಳಾ ಜಿಲ್ಲಾಧಿಕಾರಿ. 1989ರಲ್ಲಿ ರಂಜನಿ ಶ್ರೀ ಕುಮಾರ್ ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು. 2011ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಸಿಂಧೂ ರೂಪೇಶ್ ಉಡುಪಿ ಜಿಪಂ ಸಿಇಒ ಆಗಿ ಕಾರ್ಯನಿರ್ವಹಿಸಿದವರು. ಮೈಸೂರಿನ ಎನ್‌ಐಇಯಿಂದ ಬಿಇ (ಇ ಆ್ಯಂಡ್ ಸಿ) ಪದವೀಧರೆ ಸಿಂಧೂ, 2011ನೇ ಸಾಲಿನ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News