ಅಂಬಾಲ ವಾಯುನೆಲೆಯಲ್ಲಿ ಲ್ಯಾಂಡ್ ಆದ ಐದು ರಫೇಲ್ ಯುದ್ಧ ವಿಮಾನಗಳು

Update: 2020-07-29 18:11 GMT

ಅಂಬಾಲ,ಜು.29: ಭಾರತೀಯ ವಾಯುಪಡೆಗೆ ಆನೆಬಲವನ್ನ್ನು ನೀಡಲಿರುವ ರಫೇಲ್ ಯುದ್ಧವಿಮಾನಗಳು ಬುಧವಾರ ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿವೆ. ಫ್ರಾನ್ಸ್‌ನ ಬಾರ್ಡೆಕ್ಸ್‌ನ ಮೆರಿಗ್‌ ಯಾಕ್ ವಾಯುನೆಲೆಯಿಂದ ಸುಮಾರು 7 ಸಾವಿರ ಕಿ.ಮೀ.ಗಳ ದೀರ್ಘ ಹಾರಾಟ ನಡೆಸಿದ ಐದು ರಫೇಲ್ ಫೈಟರ್ ಜೆಟ್‌ಗಳು ಹರ್ಯಾಣದ ಅಂಬಾಲದಲ್ಲಿರುವ ವಾಯುಪಡೆ ನೆಲೆಯಲ್ಲಿ ಮಧ್ಯಾಹ್ನ 3:10ರ ವೇಳೆಗೆ ಬಂದಿಳಿದವು.

ಪೂರ್ವ ಲಡಾಕ್‌ನಲ್ಲಿ ಚೀನಾದ ಜೊತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ರಫೇಲ್ ವಿಮಾನಗಳ ಆಗಮನವು ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸುವುದೆಂದು ನಿರೀಕ್ಷಿಸಲಾಗಿದೆ.

ಐದು ರಫೇಲ್ ವಿಮಾನಗಳು ಭಾರತದ ವಾಯುಸೀಮೆಯನ್ನು ಪ್ರವೇಶಿಸು ತ್ತಿದ್ದಂತೆಯೇ ವಾಯುಪಡೆಯ ಎರಡು ಸುಖೋಯ್ 30ಎಂಕೆಐ ವಿಮಾನಗಳು ಬೆಂಗಾವಲು ನೀಡಿದವು. ಅಂಬಾಲದ ವಾಯುನೆಲೆಯಲ್ಲಿ ಇಳಿದ ರಫೇಲ್ ವಿಮಾನಗಳಿಗೆ ‘ವಾಟರ್ ಸೆಲ್ಯೂಟ್’ ಗೌರವ ಸಲ್ಲಿಸಲಾಯಿತು.

ಭಾರತಕ್ಕೆ ಇಂದು ಆಗಮಿಸಿರುವ ರಫೇಲ್ ವಿಮಾನಗಳ ಪೈಕಿ ಮೂರು ವಿಮಾನಗಳು ಏಕ ಆಸನ ವ್ಯವಸ್ಥೆ ಹಾಗೂ ಉಳಿದ ಎರಡು ವಿಮಾನಗಳು ಅವಳಿ ಆಸನ ವ್ಯವಸ್ಥೆಯನ್ನು ಹೊಂದಿವೆ. ಈ ಐದು ವಿಮಾನಗಳು ‘ಗೋಲ್ಡನ್ ಆ್ಯರೋಸ್’ ಎಂದೇ ಕರೆಯಲಾಗುವ ಅಂಬಾಲದ ಭಾರತೀಯ ವಾಯುಪಡೆಯ ನಂ.17 ಸ್ಕ್ವಾಡ್ರನ್‌ಗೆ ಸೇರ್ಪಡೆಗೊಳ್ಳಲಿದೆ.

ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಶನ್ ಕಂಪೆನಿ ಒಟ್ಟು 36 ರಾಫೇಲ್ ವಿಮಾನಗಳನ್ನು ಭಾರತಕ್ಕೆ 2021ರೊಳಗೆ ಪೂರೈಕೆ ಮಾಡಲಿದ್ದು, ಅದರ ಮೊದಲ ಕಂತಾಗಿ ಈ ಐದು ವಿಮಾನಗಳು ಆಗಮಿಸಿವೆ.

 ದಾರಿಮಧ್ಯೆ ಯುಎಇನ ಅಬುದಾಬಿಯಲ್ಲಿರುವ ಅಲ್‌ದಾಫ್ರಾ ವಾಯುನೆಲೆಯಲ್ಲಿ ಐದು ವಿಮಾನಗಳು ಇಳಿದಿದ್ದವು. ಬಳಿಕ ಮೂರೂವರೆ ತಾಸುಗಳ ಪ್ರಯಾಣದ ಬಳಿಕ ಭಾರತದಲ್ಲಿ ಬಂದಿಳಿದವು.

ರಫೇಲ್ ಆಗಮನದ ಹಿನ್ನೆಲೆಯಲ್ಲಿ ಅಂಬಾಲ ವಾಯುನೆಲೆಯಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ರಫೇಲ್ ಜೊತೆ ಫ್ರಾನ್ಸ್ ವಾಯುಪಡೆಯ ಎರಡು ಎ330 ಫೀನಿಕ್ಸ್ ಎಂಆರ್‌ಟಿಟಿ ಇಂಧನ ಮರುಪೂರಣ ವಿಮಾನಗಳು, ಕೊರೋನ ವಿರುದ್ಧ ಹೋರಾಟಕ್ಕಾಗಿ 70 ವೆಂಟಿಲೇರ್‌ಗಳು, 1 ಸಾವಿರ ಕೊರೋನ ಕಿಟ್‌ಗಳು ಹಾಗೂ 10 ತಜ್ಞರನ್ನೊಳಗೊಂಡ ಫ್ರೆಂಚ್ ವಾಯುಪಡೆಯ ವಿಮಾನ ಕೂಡಾ ಬಂದಿಳಿದಿದೆ.

ದೇಶದ ಏಕತೆಗೆ ಬೆದರಿಕೆಯೊಡ್ಡುವವರಿಗೆ ಆತಂಕವುಂಟಾಗಲಿದೆ: ರಾಜ್‌ನಾಥ್

ರಫೇಲ್ ವಿಮಾನಗಳ ಆಗಮನದ ಬಳಿಕ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರು, ‘‘ ಉಕ್ಕಿನ ಹಕ್ಕಿಗಳು ಸುರಕ್ಷಿತವಾಗಿ ಅಂಬಾಲದಲ್ಲಿ ಇಳಿದಿವೆ ’ಎಂದು ಟ್ವೀಟಿಸಿದ್ದಾರೆ.

ಲಡಾಕ್ ಗಡಿಯಲ್ಲಿ ಅತಿಕ್ರಮಣಕ್ಕೆ ಯತ್ನಿಸುತ್ತಿರುವ ಚೀನಾದ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿರುವ ಅವರು ‘ನಮ್ಮ ಪ್ರಾಂತೀಯ ಏಕತೆಗೆ ಬೆದರಿಕೆಯೊಡ್ಡಲು ಬಯಸುವವರಿಗೆ ಭಾರತೀಯ ವಾಯುಪಡೆಯ ಈ ನೂತನ ಯುದ್ಧವಿಮಾನಗಳ ಸಾಮರ್ಥ್ಯ ಆತಂಕವುಂಟು ಮಾಡಲಿದೆ ಎಂದರು. ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳ ಆಗಮನವು ನಮ್ಮ ಮಿಲಿಟರಿ ಇತಿಹಾಸದಲ್ಲೇ ನೂತನ ಶಕೆಯ ಆರಂಭವಾಗಲಿದೆ. ಭಾರತೀಯ ವಾಯುಪಡೆಯ ಸಾಮರ್ಥ್ಯದಲ್ಲಿ ಹೊಸ ಕ್ರಾಂತಿಯಾಗಲಿದೆ’’ ಎಂದು ರಾಜ್‌ನಾಥ್ ಟ್ವೀಟಿಸಿದಾರೆ.

 ರಫೇಲ್ ಫೈಟರ್ ಜೆಟ್ ಅತ್ಯುತ್ತಮ ಹಾರಾಟ ಸಾಮರ್ಥ್ಯವನ್ನು ಪಡೆದಿದೆ. ಅದು ಹೊಂದಿರುವ ಶಸ್ತ್ರಾಸ್ತ್ರಗಳು, ರಾಡಾರ್ ಮತ್ತಿತರ ಸೆನ್ಸರ್‌ಗಳು ಹಾಗೂ ಇಲೆಕ್ಟ್ರಾನಿಕ್ ಸಮರ ಕೌಶಲ ಸಾಮರ್ಥ್ಯವು ಜಗತ್ತಿನಲ್ಲೇ ಅತ್ಯುತ್ಕೃಷ್ಟವಾಗಿದೆ. ಈ ಸಮರ ವಿಮಾನದ ಆಗಮನದೊಂದಿಗೆ ನಮ್ಮ ದೇಶಕ್ಕೆ ಎದುರಾಗಿರಬಹುದಾದ ಯಾವುದೇ ಬೆದರಿಕೆಯನ್ನು ಹಿಮ್ಮೆಟ್ಟಿಸಲು ವಾಯುಪಡೆಯನ್ನು ಬಲಶಾಲಿಯಾಗಿ ಮಾಡಿದೆ ಎಂದವರು ಹೇಳಿದ್ದಾರೆ.

59 ಸಾವಿರ ಕೋಟಿ ರೂ.ಗೆ 36 ರಫೇಲ್ ಖರೀದಿ

ಡಸ್ಸಾಲ್ಟ್ ಏವಿಯೇಶನ್ ಕಂಪೆನಿಯಿಂದ 36 ರಫೇಲ್ ಜೆಟ್‌ಗಳನ್ನು ಖರೀದಿಸುವ 59 ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ಎನ್‌ಡಿಎ ಸರಕಾರವು 2016ರ ಸೆಪ್ಟೆಂಬರ್ 23ರಂದು ಸಹಿಹಾಕಿತ್ತು. ಯುಪಿಎ ಸರಕಾರದ ಅವಧಿಯಲ್ಲೇ ಅತ್ಯಾಧುನಿಕ 126 ಮಿಡಿಯಂ ರೋಲ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಂಎಂಆರ್‌ಸಿಎ) ಗಳನ್ನು ಖರೀದಿಸು ಬಗ್ಗೆ ಏಳು ವರ್ಷಗಳ ಕಾಲ ಪ್ರಕ್ರಿಯೆಗಳು ನಡೆದಿತ್ತಾರೂ, ಅದು ಕಾರ್ಯಗತಗೊಂಡಿರಲಿಲ್ಲ.

ಕೇಂದ್ರ ಸರಕಾರವು ಸೋಮವಾರ ನೀಡಿದ ಹೇಳಿಕೆಯೊಂದರಲ್ಲಿ, ಭಾರತಕ್ಕೆ ಈಗ ಒಟ್ಟು 10 ರಫೇಲ್ ಯುದ್ಧವಿಮಾನಗಳನ್ನು ಪೂರೈಕೆ ಮಾಡಲಾಗಿದ್ದು, ಅವುಗಳಲ್ಲಿ ಐದು ಫ್ರಾನ್ಸ್‌ನಲ್ಲಿ ತರಬೇತಿಗಾಗಿ ಉಳಿದುಕೊಂಡಿದ್ದು, ಉಳಿದ ಐದು ವಿಮಾನಗಳು ಭಾರತಕ್ಕೆ ಆಗಮಿಸಿವೆ ಎಂದು ತಿಳಿಸಿದೆ.

23 ವರ್ಷಗಳ ಬಳಿಕ ಮಹತ್ವದ ಸಮರ ವಿಮಾನ ಖರೀದಿ

ಸುಖೋಯ್ ಸಮರ ಜೆಟ್ ವಿಮಾನಗಳನ್ನು ಭಾರತವು ರಶ್ಯದಿಂದ ಆಮದುಮಾಡಿಕೊಂಡ 23 ವರ್ಷಗಳ ಬಳಿಕ ಭಾರತವು ಮೊದಲ ಬಾರಿಗೆ ನಡೆಸಿರುವ ಮಹತ್ವದ ಯುದ್ಧವಿಮಾನಗಳ ಖರೀದಿಗೆ ಇದಾಗಿದೆ.

ಹೀಗಿದೆ ರಾಫೇಲ್ ಸಾಮರ್ಥ್ಯ

► ರಫೇಲ್ ಗಂಟೆಗೆ 2222.6 ಕಿ.ಮೀ. ವೇಗದಲ್ಲಿ ಹಾರಬಲ್ಲದು.

► 100 ಕಿ.ಮಿ.ಗೂ ಅಧಿಕ ದೂರದ ವ್ಯಾಪ್ತಿಯಲ್ಲಿ ಒಂದೇ ಕಾಲದಲ್ಲಿ 40 ಗುರಿಗಳನ್ನು ಪತ್ತೆಹಚ್ಚಬಲ್ಲ ಬಹುದಿಕ್ಕುಗಳ ರಾಡಾರ್ ವ್ಯವಸ್ಥೆಯಿದೆ.

► ಶತ್ರುಗಳ ರಾಡಾರ್ ಸಿಗ್ನಲ್‌ಗಳನ್ನು ಜ್ಯಾಮ್ ಮಾಡಬಲ್ಲ ಸಂಯೋಜಿತ ಸ್ಪೆಕ್ಟ್ರಾ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.

► ಶತ್ರು ಗುರಿಯ ಮೇಲೆ ದಾಳಿ ನಡೆಸಲು ರಾಫೇಲ್ ಭಾರತದ ವಾಯುಸೀಮೆಯನ್ನು ದಾಟುವ ಅಗತ್ಯವಿರುವುದಿಲ್ಲ. ಭಾರತೀಯ ವಾಯುಸೀಮೆಯಲ್ಲಿದ್ದುಕೊಂಡೇ ಅದು ಶತ್ರುವಿನ 600 ಕಿ.ಮೀ. ಪ್ರದೇಶದೊಳಗೆ ದಾಳಿ ನಡೆಸಬಹುದಾಗಿದೆ.

► 9500 ಕೆ.ಜಿ. ಬಾಂಬ್‌ಗಳನ್ನು ಒಯ್ಯುವ ಸಾಮರ್ಥ್ಯ ಪಡೆದಿದೆ.

► ಕಣ್ಣಿಗೆ ಕಾಣದಷ್ಟು ದೂರದಿಂದಲೇ ಶತ್ರು ಪಾಳಯದ ಗುರಿಗಳ ಮೇಲೆ ದಾಳಿ ನಡೆಸಬಲ್ಲದು.

► ಅತ್ಯಂತ ಶಕ್ತಿಯುತ ಹಾಗೂ ಭಾರವಾದ ಶಸ್ತ್ರಾಸ್ತ್ರಗಳನ್ನು ಒಯ್ಯಬಲ್ಲ ಸಾಮರ್ಥ್ಯ ಪಡೆದಿದೆ.

► ಆಗಸದಿಂದ ಆಗಸಕ್ಕೆ ಎಸೆಯಬಲ್ಲಂತಹ ಕ್ಷಿಪಣಿಗಳು, ಸ್ಕಾಲ್ಪ್ ಕ್ರೂಸ್ ಕ್ಷಿಪಣಿ ಹಾಗೂ ಎಂಐಸಿಎ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ರಫೇಲ್‌ಜೆಟ್‌ನಲ್ಲಿ ಅಳವಡಿಸಬಹುದಾಗಿದೆ.

► ರಫೇಲ್‌ನಲ್ಲಿ ಅಳವಡಿಸಬಹುದಾದ ಆಗಸದಿಂದ ನೆಲಕ್ಕೆ ಎಸೆಯ ಬಲ್ಲಂತಹ ಮಧ್ಯಮ ದೂರ ವ್ಯಾಪ್ತಿಯ ಹ್ಯಾಮರ್ ಕ್ಷಿಪಣಿಗಳನ್ನು ಕೂಡಾ ಭಾರತವು ಫ್ರಾನ್ಸ್‌ನಿಂದ ಖರೀದಿಸಲಿದೆ.

► ಅಣ್ವಸ್ತ್ರ ಸಿಡಿತಲೆಗಳನ್ನು ಉಡ್ಡಯನ ಮಾಡುವ ಸಾಮರ್ಥ್ಯ ಕೂಡಾ ಹೊಂದಿದೆ.

► ಚೀನಾದ ಅತ್ಯಾಧುನಿಕ ಜಿ-20 ಯುದ್ಧ ವಿಮಾನಕ್ಕಿಂತಲೂ ರಫೇಲ್ ಬಲಿಷ್ಠವಾಗಿದೆಯೆಂದು ಹೇಳಲಾಗುತ್ತಿದೆ.

► ರಾಫೇಲ್‌ನಲ್ಲಿ ಅಳವಡಿಸಲಾಗುವ ಅತ್ಯಾಧುನಿಕ ಮಿಟಿಯೊರ್ ಕ್ಷಿಪಣಿಯು ವಾಯು ಸಮರದಲ್ಲೇ ಅತ್ಯಂತ ಕ್ರಾಂತಿಕಾರಿ ಬದಲಾವಣೆಯುಂಟು ಮಾಡಲಿದೆ.

► ಯುರೋಪ್‌ನ ಎಂಬಿಡಿಎ ಕ್ಷಿಪಣಿ ತಯಾರಕ ಸಂಸ್ಥೆಯು ವಿನ್ಯಾಸಗೊಳಿಸಿರುವ ಈ ಕ್ಷಿಪಣಿಯಲ್ಲಿ ವಿಶಿಷ್ಟವಾದ ರಾಕೆಟ್ ಜ್ಯಾಮರ್ ಮೋಟಾರ್ ಇದ್ದು, ಇದರಿಂದಾಗಿ ಇತರ ಯಾವುದೇ ಕ್ಷಿಪಣಿಗಿಂತ ಹೆಚ್ಚಿನ ಎಂಜಿನ್ ಶಕ್ತಿ ಅದಕ್ಕೆ ದೊರೆಯಲಿದೆ.

ಚೀನಾದ ಉದ್ದಟತನಕ್ಕೆ ಉತ್ತರವಾಗಿ ರಫೇಲ್‌ನ ತುರ್ತು ನಿಯೋಜನೆ?

ಪೂರ್ವ ಲಡಾಕ್‌ನಲ್ಲಿ ಭಾರತದ ಜೊತೆಗಿನ ಗಡಿವಿವಾದಕ್ಕೆ ಸಂಬಂಧಿಸಿ ಚೀನಾವು ಉದ್ಧಟತನದಿಂದ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ರಾಫೇಲ್ ಯುದ್ಧ ವಿಮಾನಗಳನ್ನು ತುರ್ತಾಗಿ ನಿಯೋಜಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ವಾಯುಪಡೆಯ ಹಲವಾರು ಯುದ್ಧ ವಿಮಾನಗಳು ಈಗ ಅವಧಿಯನ್ನು ಮೀರಿರುವುದರಿಂದ, ರಫೇಲ್‌ನ ತುರ್ತು ನಿಯೋಜನೆಯು ಹೆಚ್ಚಿನ ಮಹತ್ವವನ್ನು ಪಡೆದಿದೆ.

ದೇಶ ರಕ್ಷಣೆಗಿಂತ ಶ್ರೇಷ್ಠ ಕಾರ್ಯ ಬೇರೊಂದಿಲ್ಲ: ಪ್ರಧಾನಿ ಟ್ವೀಟ್..

ರಫೇಲ್ ಫೈಟರ್ ಜೆಟ್‌ಗಳ ಭಾರತ ಆಗಮನಕ್ಕೆ ಶುಭ ಕೋರಿರುವ ಪ್ರಧಾನಿ ದೇಶವನ್ನು ರಕ್ಷಿಸುವ ಹೊಣೆಗಾರಿಕೆಗಿಂತ ದೊಡ್ಡ ಅಶೀರ್ವಾದ ಬೇರೊಂದಿಲ್ಲ ಎಂದಿದ್ದಾರೆ. ಸಂಸ್ಕೃತ ಭಾಷೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘‘ದೇಶದ ರಕ್ಷಣೆಯು ಹೆಮ್ಮೆಯ ಕೆಲಸವಾಗಿದೆ ಹಾಗೂ ಶ್ರೇಷ್ಠವಾದ ಯಜ್ಞವಾಗಿದೆ. ಇದಕ್ಕಿಂತ ಉನ್ನತವಾದುದು ಬೇರೇನೂ ಇಲ್ಲ. ವೈಭವಯುತವಾಗಿ ಗಗನವನ್ನು ಸ್ಪರ್ಶಿಸಿರಿ’’ ಎಂದವರು ವಾಯುಪಡೆ ಸೇನಾನಿಗಳಿಗೆ ಶುಭಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News