ದಿಲ್ಲಿ ಪೊಲೀಸರು ಸೂಚಿಸಿದ ವಕೀಲರ ತಂಡವನ್ನು ತಿರಸ್ಕರಿಸಿದ ಕೇಜ್ರಿವಾಲ್ ಸಚಿವ ಸಂಪುಟ

Update: 2020-07-29 11:35 GMT

ಹೊಸದಿಲ್ಲಿ: ಫೆಬ್ರವರಿ ತಿಂಗಳಿನಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಕುರಿತು ದಿಲ್ಲಿ ಪೊಲೀಸರು ನಡೆಸುತ್ತಿರುವ  ತನಿಖೆಯ ಪ್ರಾಮಾಣಿಕತೆಯ ಕುರಿತು ನ್ಯಾಯಾಲಯಗಳೇ ಗಂಭೀರ ಪ್ರಶ್ನೆಗಳನ್ನೆತ್ತಿವೆ ಎಂದು ಹೇಳಿರುವ ದಿಲ್ಲಿ ಸಚಿವ ಸಂಪುಟ ದಿಲ್ಲಿ ಪೊಲೀಸರು ಶಿಫಾರಸು ಮಾಡಿದ ವಕೀಲರ ಸಮಿತಿಯನ್ನು ಮಂಗಳವಾರ ತಿರಸ್ಕರಿಸಿದೆ.

ಹಿಂಸಾಚಾರ ಕುರಿತ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ ನಲ್ಲಿ ವಾದಿಸಲು ವಕೀಲರ ಸಮಿತಿ ನೇಮಕಾತಿ ಕುರಿತ ಚರ್ಚೆಗಾಗಿ ನಡೆಸಲಾದ ಸಂಪುಟ ಸಭೆಯಲ್ಲಿ ‘ದಿಲ್ಲಿ ಪೊಲೀಸರು ಆರಿಸಿದ ವಕೀಲರ ಸಮಿತಿಯಿಂದ ನಿಷ್ಪಕ್ಷಪಾತವಾದ ಮಂಡನೆ ಸಾಧ್ಯವಿಲ್ಲ’ ಎಂದು ಅಭಿಪ್ರಾಯ ಪಡಲಾಗಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಅವರನ್ನೊಳಗೊಂಡ ಆರು ಹಿರಿಯ ವಕೀಲರ ತಂಡವನ್ನು ನೇಮಕಗೊಳಿಸುವ ಪ್ರಸ್ತಾವವನ್ನು ದಿಲ್ಲಿ ಪೊಲೀಸರು ಸರಕಾರದ ಮುಂದಿಟ್ಟಿದ್ದರು.

ಈ ಪ್ರಸ್ತಾವವನ್ನು ತಿರಸ್ಕರಿಸಿರುವ ಅರವಿಂದ್ ಕೇಜ್ರಿವಾಲ್ ಅವರ ಸರಕಾರ ದಿಲ್ಲಿ ಸರಕಾರಿ ವಕೀಲ ರಾಹುಲ್ ಮೆಹ್ರಾ ಮತ್ತವರ ತಂಡ ಈ ಪ್ರಕರಣಗಳಲ್ಲಿ ನ್ಯಾಯವೊದಗಿಸಲು ಸಮರ್ಥವಾಗಿದೆ ಎಂದು ಹೇಳಿದೆ. ನಂತರದ ಬೆಳವಣಿಗೆಯಲ್ಲಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ದಿಲ್ಲಿ ಗೃಹ ಸಚಿವರು ಸಲ್ಲಿಸಿದ ಪ್ರಸ್ತಾವಕ್ಕೆ ಅಸಮ್ಮತಿ ಸೂಚಿಸಿ ತಮ್ಮ ವಿಶೇಷಾಧಿಕಾರ ಬಳಸಿ ಕಡತ ತಮಗೆ ನೀಡುವಂತೆ ಸೂಚಿಸಿದ್ದಾರೆ.

ನಂತರ ದಿಲ್ಲಿ ಗೃಹ ಸಚಿವ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಈ ವಿಚಾರ ಚರ್ಚೆಗೆ ಸಭೆ ನಡೆದರೂ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ನಂತರ ಬೈಜಾಲ್ ಅವರು ಕೇಜ್ರಿವಾಲ್‍ ಗೆ ಪತ್ರ ಬರೆದು ದಿಲ್ಲಿ ಸಚಿವ ಸಂಪುಟ ಈ ಕುರಿತು ನಿರ್ಧರಿಸಬೇಕೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News