ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸೋಮನ್ ಮಿತ್ರಾ ನಿಧನ

Update: 2020-07-30 03:37 GMT

ಕೊಲ್ಕತ್ತಾ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷ ಸೋಮನ್ ಮಿತ್ರಾ ಗುರುವಾರ ನಸುಕಿನಲ್ಲಿ ಇಲ್ಲಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಟ್ವಿಟ್ಟರ್ ನಲ್ಲಿ ಇದನ್ನು ಪ್ರಕಟಿಸಿರುವ ಪಶ್ಚಿಮ ಬಂಗಾಳ ಯುವ ಕಾಂಗ್ರೆಸ್, ಹಿರಿಯ ಮುಖಂಡನ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದೆ.

“ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸೋಮನ್ ಮಿತ್ರಾ ಕೆಲ ಕ್ಷಣ ಹಿಂದೆ ಕೊನೆಯುಸಿರೆಳೆದಿದ್ದಾರೆ. ಅವರ ಸಾವು ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ. ದಾದಾ ಅವರ ಕುಟುಂಬದ ಪರವಾಗಿ ನಾವು ಪ್ರಾರ್ಥಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪಶ್ಚಿಮ ಬಂಗಾಳ ಯುವ ಕಾಂಗ್ರೆಸ್ ಟ್ವೀಟ್ ಮಾಡಿದೆ.

15ನೇ ಲೋಕಸಭೆಗೆ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. 2008 ಜುಲೈನಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಪ್ರಗತಿಶೀಲ ಇಂದಿರಾ ಕಾಂಗ್ರೆಸ್ ಎಂಬ ನೂತನ ಪಕ್ಷ ರಚಿಸಿದ್ದರು.

ಅವರ ಪಕ್ಷ 2009ರಲ್ಲಿ ಟಿಎಂಸಿಯಲ್ಲಿ ಅಧಿಕೃತವಾಗಿ ವಿಲೀನವಾಯಿತು. 2014ರಲ್ಲಿ ಅವರು ಮತ್ತೆ ಕಾಂಗ್ರೆಸ್ ಪಕ್ಷ ಸೇರಿ 2018ರಲ್ಲಿ ಪಕ್ಷದ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದರು. ಕೊನೆಯವರೆಗೂ ಅವರು ಈ ಹುದ್ದೆಯಲ್ಲಿದ್ದರು.

ಹೃದಯ ಮತ್ತು ವಯೋಸಂಬಂಧಿ ಸಮಸ್ಯೆಯಿಂಧಾಗಿ ಇತೀಚೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ 1.30ರ ವೇಳೆಗೆ ಅವರು ಕೊನೆಯುಸಿರೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News