ಉಮರ್ ಅಕ್ಮಲ್ ನಿಷೇಧ 18 ತಿಂಗಳುಗಳಿಗೆ ಇಳಿಕೆ

Update: 2020-07-30 05:29 GMT

ಕರಾಚಿ: ಈ ವರ್ಷದ ಆರಂಭದಲ್ಲಿ ಬುಕ್ಕಿ ಸಂಪರ್ಕ ಮಾಡಿರುವುದನ್ನು ವರದಿ ಮಾಡಲು ವಿಫಲವಾದ ಆರೋಪದಲ್ಲಿ ಕ್ರಿಕೆಟ್‌ನಿಂದ ಮೂರು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದ ಪಾಕಿಸ್ತಾನ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ನಿಷೇಧವನ್ನು ಬುಧವಾರ 18 ತಿಂಗಳುಗಳಿಗೆ ಇಳಿಸಲಾಗಿದೆ.

 ಸ್ವತಂತ್ರ ನ್ಯಾಯಾಧೀಶ ಫಕೀರ್ ಮುಹಮ್ಮದ್ ಖೋಖರ್ ಶಿಕ್ಷೆಯನ್ನು ಕಡಿಮೆಗೊಳಿಸಿದ ನಂತರ ಅಕ್ಮಲ್ ಅವರ ನಿಷೇಧವು ಫೆಬ್ರವರಿ 2020ರಿಂದ ಆಗಸ್ಟ್ 2021ರವರೆಗೆ ಇರುತ್ತದೆ. ಬ್ಯಾಟ್ಸ್‌ಮನ್ ಅಕ್ಮಲ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿ ಸಿದರು. ಮತ್ತೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು.

 ‘‘ನನ್ನಂತೆ ಅನೇಕ ಕ್ರಿಕೆಟಿಗರು ಭ್ರಷ್ಟಾಚಾರವನ್ನು ಮಾಡಿದ್ದಾರೆ ಆದರೆ ಅವರಲ್ಲಿ ಯಾರಿಗೂ ನನ್ನಷ್ಟು ಕಠಿಣ ಶಿಕ್ಷೆಯನ್ನು ನೀಡಲಾಗಿಲ್ಲ. ನನ್ನ ಶಿಕ್ಷೆಯನ್ನು ಕಡಿಮೆ ಮಾಡಲು ಮತ್ತೊಮ್ಮೆ ಮನವಿ ಮಾಡುತ್ತೇನೆ ’’ಎಂದು ಅಕ್ಮಲ್ ಹೇಳಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್‌ಗೆ ಮುಂಚಿತವಾಗಿ ಈ ಪ್ರಕರಣದ ವರದಿ ಮಾಡಲು ವಿಫಲವಾದ ಕಾರಣ ಅಕ್ಮಲ್‌ಗೆ ಎಪ್ರಿಲ್‌ನಲ್ಲಿ ಮೂರು ವರ್ಷಗಳ ನಿಷೇಧ ಹೇರಲಾಯಿತು. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡರು. ಆದರೆ ಅವರ ನಿಲುವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು.

   ಅಕ್ಮಲ್ ಕೊನೆಯ ಬಾರಿ 2009ರ ಕೊನೆಯಲ್ಲಿ ಪಾಕಿಸ್ತಾನ ಪರ ಟೆಸ್ಟ್ ಆಡಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಟ್ವೆಂಟಿ-20ಸರಣಿಯಲ್ಲಿ ಆಡಿರುವುದು ಅವರ ಇತ್ತೀಚಿನ ಅಂತರ್‌ರಾಷ್ಟ್ರೀಯ ಪ್ರದರ್ಶನವಾಗಿತ್ತು.

2020ರ ಪಿಎಸ್‌ಎಲ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ಸೂಪರ್ ಲೀಗ್ ತಂಡ ಕ್ವೆಟ್ಟಾ ಗ್ಲಾಡಿಯೇಟರ್ಸ್ ಇಸ್ಲಾಮಾಬಾದ್ ವಿರುದ್ಧ ಆಡುವ ಕೆಲವೇ ಗಂಟೆಗಳ ಮೊದಲು ಅಕ್ಮಲ್‌ರನ್ನು ತಾತ್ಕಾಲಿಕವಾಗಿ ಅಮಾನತು ಗೊಳಿಸಲಾಗಿತ್ತು. ಉಮರ್ ಅಕ್ಮಲ್ ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಅವರ ಕಿರಿಯ ಸಹೋದರರಾಗಿದ್ದು,ಪಾಕಿಸ್ತಾನ ಪರ 53 ಟೆಸ್ಟ್, 58 ಟ್ವೆಂಟಿ 20 ಮತ್ತು 157 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈಗಿನ ಪಾಕ್ ನಾಯಕ ಬಾಬರ್ ಆಝಮ್‌ರ ಸೋದರಸಂಬಂಧಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News