ಸುಳ್ಳು ಹೇಳಿದ ಚೀನಾ: ಇನ್ನೂ ಗಡಿಯಲ್ಲಿ ಬಿಟ್ಟಿರುವ ಡ್ರ್ಯಾಗನ್ ಸೇನೆ

Update: 2020-07-30 18:02 GMT

ಹೊಸದಿಲ್ಲಿ,ಜು.30: ಪೂರ್ವ ಲಡಾಕ್‌ನ ವಾಸ್ತವ ಗಡಿನಿಯಂತ್ರಣ ರೇಖೆ (ಎಲ್‌ಎಸಿ) ಯಲ್ಲಿ ಚೀನಾ ತನ್ನ ಮೊಂಡಾಟವನ್ನು ಇನ್ನೂ ಮುಂದುವರಿಸಿದೆ. ಎಲ್‌ಎಸಿಯಿಂದ ಹಿಂದೆ ಸರಿಯಲು ಸಮ್ಮತಿಸಿದ್ದ್ದ ಚೀನಿ ಸೇನೆ, ಇನ್ನೂ ಕೂಡಾ ಅಲ್ಲಿ ಬೀಡುಬಿಟ್ಟಿರುವ ಬಗ್ಗೆ ಭಾರತ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

 ಪೂರ್ವ ಲಡಾಕ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಹುತೇಕ ಪ್ರದೇಶಗಳಿಂದ ಚೀನಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂಬ ಚೀನಾದ ಹೇಳಿಕೆಯನ್ನು ಭಾರತ ವಿದೇಶಾಂಗ ಇಲಾಖೆ ಗುರುವಾರ ತಳ್ಳಿಹಾಕಿದೆ. ಎಲ್‌ಎಸಿಯಿಂದ ಚೀನಿ ಪಡೆಗಳ ಹಿಂದೆ ಸರಿಯುವಿಕೆಯ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲವೆಂದು ಹೇಳಿದೆ.

   ‘‘ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಒಂದಿಷ್ಟು ಪ್ರಗತಿಯಾಗಿದೆ. ಆದರೆ ಈ ಪ್ರಕ್ರಿಯೆಯು ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ’’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ಆನ್‌ಲೈನ್ ಮೂಲಕ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೂರ್ವ ಲಡಾಕ್‌ನ ಎಲ್‌ಎಸಿಯಿಂದ ತನ್ನ ಪಡೆಗಳನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಂಡಿರುವುದಾಗಿ ಚೀನಾ ಮಂಗಳವಾರ ನೀಡಿದ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಗಡಿಪ್ರದೇಶಗಳಲ್ಲಿ ಶಾಂತಿ, ಸಾಮರಸ್ಯವನ್ನು ಕಾಪಾಡುವುದು, ಉಭಯದೇಶಗಳ ದ್ವಿಪಕ್ಷೀಯ ಬಾಂಧವ್ಯಕ್ಕೆ ತಳಹದಿಯಾಗಿದೆ ಎಂದು ಅನುರಾಗ್ ಶ್ರೀವಾಸ್ತವ ತಿಳಿಸಿದರು.

 ‘‘ಸಂಪೂರ್ಣ ಸೇನಾ ವಾಪಸಾತಿ ಹಾಗೂ ಗಡಿಯಲ್ಲಿ ಉದ್ವಿಗ್ನತೆ ಶಮನಕ್ಕಾಗಿ ಚೀನಿಯರು ನಮ್ಮಾಂದಿಗೆ ಶ್ರಮಿಸುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ’’ ಎಂದು ಅವರು ಹೇಳಿದರು.

ಚೀನಾದ ವಿದೇಶಾಂಗ ಸಚಿವರ ವಕ್ತಾ ವಾಂಗ್ ವೆನ್‌ಬಿನ್ ಅವರು ಮಂಗಳವಾರ ಎರಡೂ ದೇಶಗಳ ಮುಂಚೂಣಿ ಪಡೆಗ ಪೂರ್ವ ಲಡಾಕ್‌ನ ಗಡಿ ಭಾಗದ ಬಹುತೇಕ ಸ್ಥಳಗಳಿಂದ ಹಿಂದೆ ಸರಿಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ ಎಂದು ತಿಳಿಸಿದ್ದರು.

  ಪೂರ್ವ ಲಡಾಕ್‌ನಲ್ಲಿ ಉದ್ಭವಿಸಿರುವ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಮಾತುಕತೆ ನಡೆಸಿದ ಬಳಿಕ ಜುಲೈ 6ರಂದು ಚೀನಾ ಹಾಗೂ ಭಾರತ, ಎಲ್‌ಎಸಿಯಿಂದ ತಮ್ಮ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News