ಕೊರೋನಾ ಸಾವಿನಲ್ಲಿ ಭಾರತಕ್ಕೀಗ ವಿಶ್ವದಲ್ಲಿ ಐದನೇ ಸ್ಥಾನ!
ಹೊಸದಿಲ್ಲಿ, ಜು.31: ಭಾರತದಲ್ಲಿ ಗುರುವಾರ ಮತ್ತೆ ದಾಖಲೆ ಸಂಖ್ಯೆಯ ಅಂದರೆ 54 ಸಾವಿರಕ್ಕೂ ಅಧಿಕ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 786 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾಂಕ್ರಾಮಿಕದಿಂದ ಮೃತಪಟ್ಟವರ ಸಂಖ್ಯೆ 35 ಸಾವಿರವನ್ನು ದಾಟಿದೆ. ಈ ಪೈಕಿ ಐದು ಸಾವಿರ ಸಾವು ಕಳೆದ ಒಂದು ವಾರದಲ್ಲೇ ವರದಿಯಾಗಿದೆ.
ಇದೀಗ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಮಂದಿ ಮೃತಪಟ್ಟ ದೇಶಗಳ ಪೈಕಿ ಭಾರತ ಐದನೇ ಸ್ಥಾನಕ್ಕೇರಿದೆ. ಇದುವರೆಗೆ 35132 ಮಂದಿ ಮೃತಪಟ್ಟ ಇಟೆಲಿ ದೇಶ ಐದನೇ ಸ್ಥಾನದಲ್ಲಿತ್ತು. ಗುರುವಾರ ರಾತ್ರಿ ವೇಳೆಗೆ ಭಾರತದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 35748. ಈ ಪೈಕಿ 18356 ಮಂದಿ ಜುಲೈ ತಿಂಗಳಲ್ಲೇ ಬಲಿಯಾಗಿದ್ದಾರೆ. ಇದು ಹಿಂದಿನ ತಿಂಗಳವರೆಗೆ ಬಲಿಯಾದ ಒಟ್ಟು ಸಂಖ್ಯೆಗಿಂತ ಅಧಿಕ.
ಗುರುವಾರ ದೇಶದಲ್ಲಿ 54211 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಭಾರತದ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 16 ಲಕ್ಷವನ್ನು ದಾಟಿದೆ. ಮಹಾರಾಷ್ಟ್ರದಲ್ಲಿ ಇದುವರೆಗಿನ ಗರಿಷ್ಠ ಅಂದರೆ 11147 ಪ್ರಕರಣಗಳು ವರದಿಯಾಗಿವೆ. ಆಂಧ್ರಪ್ರದೇಶ 10167 ಪ್ರಕರಣಗಳನ್ನು 24 ಗಂಟೆಗಳಲ್ಲಿ ದಾಖಲಿಸಿದೆ.
ಈ ಹಿಂದೆ ಒಂದೇ ದಿನ ಗರಿಷ್ಠ ಅಂದರೆ 781 ಮಂದಿ ಮೃತಪಟ್ಟಿದ್ದರು. ಈ ದಾಖಲೆ ಗುರುವಾರ ಅಳಿಸಿ ಹೋಗಿದ್ದು, 786 ಮಂದಿ ಮೃತಪಟ್ಟಿದ್ದಾರೆ. ಅಮೆರಿಕ (1.5 ಲಕ್ಷ)ಮ, ಬ್ರೆಜಿಲ್ (90 ಸಾವಿರ), ಬ್ರಿಟನ್ (45999) ಮತ್ತು ಮೆಕ್ಸಿಕೋ (45361) ದೇಶಗಳಲ್ಲಿ ಮಾತ್ರ ಭಾರತಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸೋಂಕಿತರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 411798ಕ್ಕೇರಿದೆ. ಉಳಿದಂತೆ ಕರ್ನಾಟಕ (6128), ಉತ್ತರ ಪ್ರದೇಶ (3765), ಗುಜರಾತ್ (1159), ರಾಜಸ್ಥಾನ (1156), ಗೋವಾ (215) ಕೂಡಾ ದಿನದ ಗರಿಷ್ಠ ಸಂಖ್ಯೆಯನ್ನು ದಾಖಲಿಸಿವೆ. ತೆಲಂಗಾಣದಲ್ಲಿ ಜುಲೈ 8ರ ಬಳಿಕ ಮೊಟ್ಟಮೊದಲ ಬಾರಿಗೆ 1811 ಪ್ರಕರಣಗಳು ದಾಖಲಾಗಿವೆ.