ಹಾಂಕಾಂಗ್ ಚುನಾವಣೆ ಒಂದು ವರ್ಷ ಮುಂದೂಡಿದ ಚೀನಾ

Update: 2020-08-01 16:13 GMT

ಹಾಂಕಾಂಗ್, ಆ. 1: ಹಾಂಕಾಂಗ್ ಸಂಸತ್ತಿಗೆ ಸೆಪ್ಟಂಬರ್ 6ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ನಗರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್ ಶುಕ್ರವಾರ ಒಂದು ವರ್ಷ ಮುಂದೂಡಿದ್ದಾರೆ ಹಾಗೂ ಇದಕ್ಕೆ ಹೆಚ್ಚುತ್ತಿರುವ ಕೊರೋನ ವೈರಸ್ ಪ್ರಕರಣಗಳ ಕಾರಣ ನೀಡಿದ್ದಾರೆ.

ಈ ಮೂಲಕ ಹಾಂಕಾಂಗ್‌ನ ಆಡಳಿತ ನಡೆಸುತ್ತಿರುವ ಚೀನಾ ಸರಕಾರವು ಪ್ರಜಾಪ್ರಭುತ್ವ ಪರ ಪ್ರತಿಪಕ್ಷಗಳಿಗೆ ದೊಡ್ಡ ಹೊಡೆತ ನೀಡಿದೆ. ಈ ಚುನಾವಣೆಯಲ್ಲಿ ಬೃಹತ್ ವಿಜಯ ಗಳಿಸುವ ಲೆಕ್ಕಾಚಾರವನ್ನು ಪ್ರತಿಪಕ್ಷಗಳು ಹೊಂದಿದ್ದವು.

ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ 12 ಪ್ರಜಾಪ್ರಭುತ್ವ ಪರ ಅಭ್ಯರ್ಥಿಗಳನ್ನು ಅನರ್ಹಗೊಳಿಸಿದ ಬಳಿಕ ಚುನಾವಣೆಯನ್ನೇ ಮುಂದೂಡುವ ನಿರ್ಧಾರವನ್ನು ಹಾಂಕಾಂಗ್‌ನ ಚೀನಾ ಪರ ಆಡಳಿತ ತೆಗೆದುಕೊಂಡಿದೆ. ಈ ಅಭ್ಯರ್ಥಿಗಳು ವಿಚ್ಛಿದ್ರಕಾರಕ ಉದ್ದೇಶಗಳನ್ನು ಹೊಂದಿದ್ದಾರೆ ಹಾಗೂ ನೂತನ ರಾಷ್ಟ್ರೀಯ ಭದ್ರತಾ ಕಾನೂನನ್ನು ವಿರೋಧಿಸುತ್ತಿದ್ದಾರೆ ಎಂಬ ಕಾರಣವನ್ನು ಆಡಳಿತವು ಅವರ ಅನರ್ಹಗೊಳಿಸಿರುವುದಕ್ಕೆ ನೀಡಿದೆ.

ಚೀನಾದ ಸ್ವಾರ್ಥಲೇಪಿತ ಕ್ರಮ: ಹ್ಯೂಮನ್ ರೈಟ್ಸ್ ವಾಚ್ ಹೇಳಿಕೆ

‘‘ಹಾಂಕಾಂಗ್ ಚುನಾವಣೆಯನ್ನು ಒಂದು ವರ್ಷ ಮುಂದೂಡಿರುವುದು, ರಾಜಕೀಯ ತುಮುಲವನ್ನು ನಿಯಂತ್ರಿಸಲು ಚೀನಾ ತೆಗೆದುಕೊಂಡಿರುವ ಸ್ವಾರ್ಥಲೇಪಿತ ಕ್ರಮವಾಗಿದೆ, ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿಲ್ಲ’’ ಎಂದು ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ನಲ್ಲಿ ಚೀನಾ ವಿಷಯಗಳ ನಿರ್ದೇಶಕಿಯಾಗಿರುವ ಸೋಫೀ ರಿಚರ್ಡ್‌ಸನ್ ಹೇಳಿದ್ದಾರೆ.

‘‘ಈ ನಿರ್ಧಾರವು, ತಮ್ಮ ಸರಕಾರವನ್ನು ಆರಿಸುವ ಹಾಂಕಾಂಗ್ ಜನರ ಹಕ್ಕನ್ನು ನಿರಾಕರಿಸಲು ಮುಖ್ಯ ಆಡಳಿತಾಧಿಕಾರಿ ಕ್ಯಾರೀ ಲ್ಯಾಮ್‌ಗೆ ಅವಕಾಶ ನೀಡುತ್ತದೆಯಷ್ಟೆ’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News