ಸರಕಾರಗಳನ್ನು ಉರುಳಿಸುವ ರಾಜೀನಾಮೆ ನಾಟಕಗಳು ನಿಲ್ಲಲೇಬೇಕು

Update: 2020-08-02 12:53 GMT

ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಶಾಸನಬದ್ಧ ಹಕ್ಕೇ ವಿನಃ ಒಂದು ಮೂಲಭೂತ ಹಕ್ಕಲ್ಲ. ಆದ್ದರಿಂದ ಅವರು ರಾಜೀನಾಮೆ ನೀಡಿದ ದಿನಾಂಕದಿಂದ ಕನಿಷ್ಠ ಐದು ವರ್ಷಗಳವರೆಗಾದರೂ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಯಾವುದೇ ಸರಕಾರಿ ಹುದ್ದೆಯನ್ನು ಹೊಂದಲು ಅನರ್ಹರು ಎಂದು ಕಾನೂನು ರೀತ್ಯ ಘೋಷಿಸುವ ಮೂಲಕ ಇಂಥ ‘ವಲೆಂಟರಿ’ ರಾಜೀನಾಮೆಗಳನ್ನು ನಿಯಂತ್ರಿಸುವುದು, ತಡೆಯುವುದು ನ್ಯಾಯೋಚಿತ ಹಾಗೂ ತಾರ್ಕಿಕವಾಗಿದೆ. ಅಲ್ಲದೆ, ಅವರು ಅಸೆಂಬ್ಲಿ ಅಥವಾ ವಿಧಾನ ಪರಿಷತ್ತಿಗೆ ನಾಮಕರಣಗೊಳ್ಳಲು ಕೂಡ ಅನರ್ಹರು ಎಂದು ಕಾನೂನು ಮಾಡಬೇಕು.


ವಿಶ್ವಾದ್ಯಂತ ಯಶಸ್ವಿ ಪ್ರಜಾಸತ್ತಾತ್ಮಕ ವ್ಯವಸ್ಥೆಗಳಲ್ಲಿ ಎಲ್ಲ ನಾಗರಿಕರಿಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕ ಹಾಗೂ ನ್ಯಾಯಯುತ ಚುನಾವಣೆಗಳಲ್ಲಿ ಭಾಗವಹಿಸುವ ಸಮಾನ ಅವಕಾಶ ಮತ್ತು ಚುನಾಯಿತ ಸರಕಾರಕ್ಕೆ ಸುಭದ್ರತೆ ಇದೆ. ಆದರೆ ಭಾರತದಲ್ಲಿ ಚುನಾಯಿತ ಜನಪ್ರತಿನಿಧಿಗಳ ಪಕ್ಷಾಂತರ ಅಥವಾ ರಾಜೀನಾಮೆಯಿಂದಾಗಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ರಾಜ್ಯ ಸರಕಾರಗಳು ಆಗಾಗ ಉರುಳುತ್ತಿರುತ್ತದೆ. ಶಾಸಕರ ವೈಯಕ್ತಿಕ ಮಹತ್ವಾಕಾಂಕ್ಷೆ ಅಥವಾ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆಗೆದುಕೊಳ್ಳುವ ಮಿತ್ರಪಕ್ಷಗಳ ನಿರ್ಧಾರ ಇದಕ್ಕೆ ಕಾರಣ. ಇಂತಹ ನಿರ್ಧಾರಗಳಿಗೆ ‘ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು’ ಕಾರಣವೆಂದು ಹೇಳಲಾಗುತ್ತಿದ್ದರೂ ಜನಪ್ರತಿನಿಧಿಗಳ ನಿಜವಾದ ಉದ್ದೇಶಗಳು ಯಾವತ್ತೂ ಬಹಿರಂಗವಾಗುವುದಿಲ್ಲ.

ರಾಜ್ಯ ಅಸೆಂಬ್ಲಿಗಳಲ್ಲಿ ರಾಜಕೀಯ ಪಕ್ಷಾಂತರ ಹೊಸತೇನೂ ಅಲ್ಲ. ಅದು ನಮ್ಮ ಪ್ರಜಾಪ್ರಭುತ್ವದಷ್ಟೇ ಹಳೆಯದು. 1950ರಲ್ಲಿ ಉತ್ತರ ಪ್ರದೇಶದಲ್ಲಿ 23 ಮಂದಿ ಶಾಸಕರು ಕಾಂಗ್ರೆಸ್‌ನಿಂದ ಹೊರ ನಡೆದು ಜನ ಕಾಂಗ್ರೆಸ್ ರಚಿಸಿಕೊಂಡರು. 1953ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ ನಾಯಕ ಪ್ರಕಾಶಂ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ ಆಂಧ್ರಪ್ರದೇಶದಲ್ಲಿ ಸರಕಾರ ರಚಿಸಿದರು. 1956ರಲ್ಲಿ ಮೈಸೂರು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯನವರ ಪಕ್ಷದ 21 ಮಂದಿ ಚುನಾಯಿತ ಪ್ರತಿನಿಧಿಗಳು ಅವರ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು.

ಸಂವಿಧಾನದ 52ನೇ ಮತ್ತು 91ನೇ ತಿದ್ದುಪಡಿಗಳು ಜನಪ್ರತಿನಿಧಿಗಳ ಪಕ್ಷಾಂತರವನ್ನು ತಡೆಯುವ ನಿಷೇಧಗಳನ್ನು ಹೇಳಿವೆಯಾದರೂ, ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸರಕಾರವನ್ನು ಅಸ್ಥಿರಗೊಳಿಸುವ ಹೊಸ ಹಾದಿಗಳನ್ನು, ವಿಧಾನಗಳನ್ನು ಕಂಡುಕೊಂಡಿದ್ದಾರೆ. ಉದಾಹರಣೆಗೆ 2018ರ ಮೇ 23ರಂದು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜೊತೆಗೂಡಿ ಸಮ್ಮಿಶ್ರ ಸರಕಾರವೊಂದನ್ನು ರಚಿಸಿದ್ದು ಆ ಬಳಿಕ ಸಮ್ಮಿಶ್ರ ಸರಕಾರದ ಎರಡೂ ಪಕ್ಷಗಳಲ್ಲಿ ಯಾವ ಒಂದು ಪಕ್ಷವೂ ತನ್ನ ಬೆಂಬಲವನ್ನು ಹಿಂದೆ ಪಡೆಯಲೂ ಇಲ್ಲ, ಅವುಗಳಲ್ಲಿ ಯಾವ ಪಕ್ಷ ಕೂಡ ಇಬ್ಭಾಗವಾಗಲೂ ಇಲ್ಲ. ಹಾಗೆಯೇ ಯಾವ ಒಂದು ಪಕ್ಷದ ಶಾಸಕ ಪಕ್ಷಾಂತರ ಮಾಡಲೂ ಇಲ್ಲ.

ಆದರೂ ಕೂಡ 2019ರ ಜುಲೈ 23ರಂದು ಸರಕಾರವನ್ನು ಬಹುಮತವಿಲ್ಲದ ಅಲ್ಪಮತದ ಸರಕಾರವಾಗಿ ಮಾಡಲಾಯಿತು. ಯಾಕೆಂದರೆ ಎರಡೂ ಪಕ್ಷಗಳ 17 ಮಂದಿ ಶಾಸಕರು ತಮ್ಮ ಅಸೆಂಬ್ಲಿ ಸ್ಥಾನಕ್ಕೆ ‘ಸ್ವಇಚ್ಛೆ’ಯಿಂದ ರಾಜೀನಾಮೆ ನೀಡಿದರು. ಏನು ಕಾರಣವೆಂದು ತಿಳಿಸದೆ ಅವರು ನೀಡಿದ ರಾಜೀನಾಮೆಯಿಂದಾಗಿ ಜೆಡಿಎಸ್- ಕಾಂಗ್ರೆಸ್ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಧಿಕಾರಕ್ಕೇರಿತ್ತು. ಮಧ್ಯಪ್ರದೇಶದಲ್ಲಿ 2020ರ ಮಾರ್ಚ್ 10ರಂದು ಕಮಲ್‌ನಾಥ್ ಸರಕಾರದ ಐವರು ಸಚಿವರು ಸೇರಿದಂತೆ 22 ಮಂದಿ ಕಾಂಗ್ರೆಸ್ ಶಾಸಕರು ಅಜ್ಞಾತ ಕಾರಣಗಳಿಗಾಗಿ ತಮ್ಮ ಅಸೆಂಬ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪರಿಣಾಮವಾಗಿ ಕಾಂಗ್ರೆಸ್ ಸರಕಾರ ಪತನಗೊಂಡು ಈಗಿನ ಬಿಜೆಪಿ ಸರಕಾರ ಅಲ್ಲಿ ಅಸ್ತಿತ್ವಕ್ಕೆ ಬಂತು. ಈಗ ರಾಜಸ್ಥಾನದಲ್ಲಿ ಕೆಲವು ಮಂದಿ ಶಾಸಕರು ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿರುವುದರಿಂದ ಅಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ಜುಲೈ 12ರಿಂದ ಬಿಕ್ಕಟ್ಟಿನಲ್ಲಿದೆ.

ಇವೆಲ್ಲದರ ಹಿಂದಿರುವ ತರ್ಕ ಸರಳವಾಗಿದೆ. ಆಳುವ ಪಕ್ಷದ ಒಂದಷ್ಟು ಮಂದಿ ಶಾಸಕರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದಾಗ ಆ ಪಕ್ಷವು ಬಹುಮತ ಕಳೆದುಕೊಳ್ಳುತ್ತದೆ. ಚುನಾವಣೆಯಲ್ಲಿ ಆ ಪಕ್ಷಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದ್ದ ಪಕ್ಷವು ಬಹುಮತ ಪಡೆದು ಸರಕಾರ ರಚಿಸುತ್ತದೆ. ಹೀಗೆ ರಾಜೀನಾಮೆಗಳ ಮೂಲಕ ಆಳುವ ಸರಕಾರವನ್ನು ಅಸ್ಥಿರ/ಅತಂತ್ರಗೊಳಿಸುವುದನ್ನು ತಡೆಯಲು ಭಾರತದ ಸಂವಿಧಾನದಲ್ಲಾಗಲಿ ಅಥವಾ 1951ರ ಜನತಾ ಪ್ರಾತಿನಿಧ್ಯ ಕಾನೂನಿನಲ್ಲಾಗಲಿ ಪರಿಹಾರವಿಲ್ಲ. ಅಸೆಂಬ್ಲಿಗೆ ರಾಜೀನಾಮೆ ನೀಡಿದಾಗ ಐದು ವರ್ಷಗಳ ಅವಧಿಗೆ ಚುನಾಯಿತನಾದ ಓರ್ವ ಜನಪ್ರತಿನಿಧಿ ಮರು ಚುನಾವಣೆಯಲ್ಲಿ ಸ್ಪರ್ಧಿಸಲು ಯಾಕೆ ಅನರ್ಹ ಎಂಬುದನ್ನು ಕಾನೂನು ವಿವರಿಸುವುದಿಲ್ಲ. ಮರುಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ವೇಳೆ ಆತ ಸೋತರೂ ಕೂಡ ಅಸೆಂಬ್ಲಿಗೆ ಅಥವಾ ವಿಧಾನ ಪರಿಷತ್ತಿಗೆ ನಾಮಕರಣಗೊಳ್ಳುವ ಮೂಲಕ ಸಚಿವನಾಗಬಲ್ಲ ಅಥವಾ ಇನ್ಯಾವುದೋ ಮಂಡಳಿಯ ಅಧ್ಯಕ್ಷಗಿರಿ ಪಡೆದು ಸಂಭ್ರಮಿಸ ಬಲ್ಲ.

ಹಾಗಾದರೆ ಮುಂದೇನು?
ಆಳುವ ಪಕ್ಷದ ಚುನಾಯಿತ ಪ್ರತಿನಿಧಿಗಳು ಸ್ವ ಇಚ್ಛೆಯಿಂದ ತಾವಾಗಿಯೇ ನೀಡುವ ರಾಜೀನಾಮೆಯ ಮೂಲಕ ಚುನಾಯಿತ ಸರಕಾರಗಳನ್ನು ಉರುಳಿಸಬಹುದು ಎಂದು ಸಂಸತ್ ಕೂಡ ಊಹಿಸಿರಲಾರದು. ಆದ್ದರಿಂದ 52ನೇ ಅಥವಾ 91ನೇ ತಿದ್ದುಪಡಿಯಲ್ಲಾಗಲಿ ಶಾಸಕರು ಹೀಗೆ ರಾಜೀನಾಮೆ ನೀಡಿದಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳ್ಳುತ್ತಾರೆಂಬ ನಿಯಮವನ್ನು ಸೇರಿಸಲಿಲ್ಲ.

ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಶಾಸನಬದ್ಧ ಹಕ್ಕೇ ವಿನಃ ಒಂದು ಮೂಲಭೂತ ಹಕ್ಕಲ್ಲ. ಆದ್ದರಿಂದ ಅವರು ರಾಜೀನಾಮೆ ನೀಡಿದ ದಿನಾಂಕದಿಂದ ಕನಿಷ್ಠ ಐದು ವರ್ಷಗಳ ವರೆಗಾದರೂ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಯಾವುದೇ ಸರಕಾರಿ ಹುದ್ದೆಯನ್ನು ಹೊಂದಲು ಅನರ್ಹರು ಎಂದು ಕಾನೂನು ರೀತ್ಯ ಘೋಷಿಸುವ ಮೂಲಕ ಇಂಥ ‘ವಲೆಂಟರಿ’ ರಾಜೀನಾಮೆಗಳನ್ನು ನಿಯಂತ್ರಿಸುವುದು, ತಡೆಯುವುದು ನ್ಯಾಯೋಚಿತ ಹಾಗೂ ತಾರ್ಕಿಕವಾಗಿದೆ. ಅಲ್ಲದೆ, ಅವರು ಅಸೆಂಬ್ಲಿ ಅಥವಾ ವಿಧಾನ ಪರಿಷತ್ತಿಗೆ ನಾಮಕರಣಗೊಳ್ಳಲು ಕೂಡ ಅನರ್ಹರು ಎಂದು ಕಾನೂನು ಮಾಡಬೇಕು.

ಕೃಪೆ: deccanherald
(ಲೇಖಕರು ಓರ್ವ ರಾಜಕೀಯ ವಿಶ್ಲೇಷಕರು)

Writer - ಜಿ. ಪಿ. ನಾಯ್ಕ್

contributor

Editor - ಜಿ. ಪಿ. ನಾಯ್ಕ್

contributor

Similar News