ಪರಿಷ್ಕೃತ ನಕ್ಷೆಯನ್ನು ಭಾರತಕ್ಕೆ ನೀಡಲು ನೇಪಾಳ ನಿರ್ಧಾರ

Update: 2020-08-02 17:24 GMT

 ಕಠ್ಮಂಡು,ಆ.2: ಇತ್ತೀಚೆಗೆ ತಾನು ಪರಿಷ್ಕರಿಸಿರುವ ತನ್ನ ದೇಶದ ನೂತನ ನಕ್ಷೆಯನ್ನು ವಿಶ್ವಸಂಸ್ಥೆ, ಶೋಧಜಾಲತಾಣ ಗೂಗಲ್ ಹಾಗೂ ಭಾರತ ಸಹಿತ ಅಂತಾರಾಷ್ಟ್ರೀಯ ಸಮುದಾಯಕ್ಕೆ ಆಗಸ್ಟ್ ಮಧ್ಯದೊಳಗೆ ಕಳುಹಿಸಿಕೊಡಲು ನಿರ್ಧರಿಸಿರುವುದಾಗಿ ನೇಪಾಳ ಸರಕಾರ ರವಿವಾರ ತಿಳಿಸಿದೆ. ನೇಪಾಳದ ಈ ವಿವಾದಾತ್ಮಕ ನಕ್ಷೆಯಲ್ಲಿ ಭಾರತಕ್ಕೆ ಸೇರಿದ ಲಿಪಿಯಾಧುರಾ, ಲಿಪುಲೇಖ್ ಹಾಗೂ ಕಾಲಾಪಾನಿ ಪ್ರದೇಶಗಳು ಒಳಗೊಂಡಿವೆ.

ನೇಪಾಳದ ಭೂನಿರ್ವಹಣೆ ಸಚಿವ ಪದ್ಮ ಆರ್ಯಾಲ್ ರವಿವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ ‘‘ಕಾಲಾಪಾನಿ, ಲಿಪುಲೇಖ್ ಹಾಗೂ ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ನೇಪಾಳದ ನೂತನ ನಕ್ಷೆಯನ್ನು ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳಿಗೆ ಹಾಗೂ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸಿಕೊಡಲಾಗುವುದು’’ ಎಂದು ತಿಳಿಸಿದ್ದಾರೆ. ಆಗಸ್ಟ್ ತಿಂಗಳ ಮಧ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ನೇಪಾಳದ ನವೀಕೃತ ನಕಾಶೆಯ ನಾಲ್ಕು ಸಾವಿರ ಪ್ರತಿಗಳನ್ನು ಮುದ್ರಿಸುವಂತೆ ಮಾಪನ ಇಲಾಖೆಗೆ ಸೂಚನೆ ನೀಡಿದೆಯೆಂದು ಭೂನಿರ್ವಹಣಾ ಸಚಿವಾಲಯ ತಿಳಿಸಿದೆ. ನೇಪಾಳದ ನವೀಕೃತ ನಕಾಶೆಯ ಇಂಗ್ಲೀಷ್ ಭಾಷೆಯಲ್ಲಿರುವುದೆಂದು ಅವರು ತಿಳಿಸಿದರು.

ಈಗಾಗಲೇ ಮಾಪನ ಇಲಾಖೆಯು, ನೇಪಾಳದ ನೂತನ ನಕಾಶೆಯ 25 ಸಾವಿರ ಪ್ರತಿಗಳನ್ನು ಮುದ್ರಿಸಿದ್ದು ಅದನ್ನು ದೇಶಾದ್ಯಂತ ವಿತರಿಸಲಾಗಿದೆ. ಎಲ್ಲಾ ಸಾರ್ವಜನಿಕ ಕಚೇರಿಗಳಿಗೂ ನಕಾಶೆಯನ್ನು ಉಚಿತವಾಗಿ ನೀಡಲಾಗುವುದು. ಜನರು 50 ನೇಪಾಳಿ ರೂ.ಗಳನ್ನು ಕೊಟ್ಟು ಖರೀದಿಸಬಹುದಾಗಿದೆಯೆಂದು ನೇಪಾಳ ಮಾಪನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News