ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ವಾಸ್ತವಕ್ಕೆ ಇನ್ನೊಂದಿಷ್ಟು ದೂರ

Update: 2020-08-03 05:50 GMT

ನೂತನ ಶಿಕ್ಷಣ ನೀತಿಗೆ ಇತ್ತೀಚೆಗೆ ಸಂಪುಟ ಅಸ್ತು ಎಂದಿದೆ. ಹೊಸ ಶಿಕ್ಷಣ ನೀತಿ, ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಅಡುಗೆಯ ಇನ್ನೊಂದು ಪ್ರಕಾರದಂತಿದೆ. ಹತ್ತು ಹಲವು ಪ್ರಗತಿ ಪರ ನಿಲುವುಗಳನ್ನು, ಪ್ರಯೋಗಗಳನ್ನು, ಯೋಜನೆಗಳನ್ನು ನೀತಿಯಲ್ಲಿ ಪ್ರಸ್ತಾವಿಸುತ್ತಲೇ, ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ಕುರಿತಂತೆ ವೌನವಾಗಿದೆ. 1967ರ ಕೊಠಾರಿ ಕಮಿಷನ್‌ನಿಂದ ಹಿಡಿದು ಹಲವು ತಜ್ಞರು, ಸಾರ್ವತ್ರಿಕ ಶಿಕ್ಷಣದ ಆಶಯ ಯಶಸ್ವಿಯಾಗಬೇಕಾದರೆ ಸಂಪನ್ಮೂಲಗಳು ಹಲವು ಪಟ್ಟು ಹೆಚ್ಚಬೇಕು ಎನ್ನುವಂತಹ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ. ಈಗಾಗಲೇ ಕಟ್ಟಡಗಳ ಕೊರತೆ, ಶಿಕ್ಷಕರ ಕೊರತೆ, ಇನ್ನಿತರ ಮೂಲಭೂತ ಸೌಕರ್ಯಗಳಿಂದ ನರಳುತ್ತಿರುವ ಖಾಸಗಿ ಶಾಲೆಗಳ ಜೊತೆಗೆ ಸ್ಪರ್ಧಿಸಲು ಸಂಪೂರ್ಣ ವಿಫಲವಾಗಿರುವ ಸರಕಾರಿ ಶಾಲೆಗಳನ್ನು ಮೇಲೆತ್ತಬೇಕಾದರೆ ಮೊತ್ತ ಮೊದಲ ಅಗತ್ಯವೇ ಸಂಪನ್ಮೂಲಗಳ ಹೆಚ್ಚಳವಾಗಿದೆ. ಆದರೆ ಈಗಾಗಲೇ ಸಾಮಾಜಿಕ ವಲಯಗಳನ್ನು ಬಜೆಟ್‌ನಲ್ಲಿ ಸಂಪೂರ್ಣ ತಿರಸ್ಕರಿಸಿರುವ ಕೇಂದ್ರ ಸರಕಾರ, ತನ್ನ ಹೊಸ ನೀತಿಯ ಅನುಷ್ಠಾನಕ್ಕೆ ಎಷ್ಟರಮಟ್ಟಿಗೆ ಹಣವನ್ನು ಮೀಸಲಿಟ್ಟಿದೆ ಎನ್ನುವುದರತ್ತ ಕಣ್ಣು ಹಾಯಿಸಿದಾಗ ನಿರಾಸೆಯಾಗುತ್ತದೆ.

ಜೊತೆಗೆ ಸಂಪನ್ಮೂಲ ಸಂಗ್ರಹಕ್ಕೆ ಪರೋಕ್ಷವಾಗಿ ಖಾಸಗಿ ಸಂಸ್ಥೆಗಳಿಗೆ ಹಸಿರು ನಿಶಾನೆ ನೀಡಿದೆ. ಅಂದರೆ, ಶುಲ್ಕಗಳನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸುವ ಅನುಮತಿಯನ್ನು ಈ ಶಿಕ್ಷಣ ನೀತಿ ಖಾಸಗಿ ಸಂಸ್ಥೆಗಳಿಗೆ ನೀಡಿದೆ. ಉಳಿದಂತೆ, ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಎನ್ನುವ ನಿರ್ಧಾರದ ಕುರಿತಂತೆ ನಾಡಿನ ಆಯ್ದ ಪ್ರಗತಿಪರರು ಸಂಭ್ರಮಿಸಿದ್ದಾರೆ. ಇಂಗ್ಲಿಷ್ ಮಾಧ್ಯಮದಿಂದ ಅಥವಾ ಇಂಗ್ಲಿಷ್ ಭಾಷೆಯಿಂದ ಸಕಲ ಪ್ರಯೋಜನಗಳನ್ನು ಪಡೆದಿರುವ ಈ ವರ್ಗ, ದೇಶದ ಹಿಂದುಳಿದ, ದಲಿತ ವರ್ಗ ಇಂಗ್ಲಿಷ್ ಕಲಿಯುವುದರ ವಿರುದ್ಧ ಹೋರಾಟವೊಂದನ್ನು ರೂಪಿಸಿಕೊಂಡು ಬಂದಿದೆ. ಪ್ರಾದೇಶಿಕ ಭಾಷೆಯನ್ನು ಉಳಿಸುವುದಕ್ಕಾಗಿ ಈ ಶೋಷಿತ ವರ್ಗವನ್ನು ‘ಕೆರೆಗೆ ಹಾರ’ವಾಗಿಸುವ ಪ್ರಯತ್ನದ ಭಾಗವಾಗಿ, ಐದನೇ ತರಗತಿಯವರೆಗೆ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣಕ್ಕೆ ಹೊಸ ನೀತಿಯನ್ನು ಸೇರಿಸಲಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಬಲವಂತವಾಗಿ ಪ್ರಾದೇಶಿಕ ಭಾಷೆಗಳನ್ನು ಹೇರುವ, ಸಂಸ್ಕೃತ, ಹಿಂದಿಗಳನ್ನು ಹಿಂದಿನಿಂದ ತುರುಕುವ ದುರುದ್ದೇಶವನ್ನು ಈ ನಿರ್ಧಾರ ಹೊಂದಿದೆ.

ಯಾಕೆಂದರೆ, ಐದನೇ ತರಗತಿಯವರೆಗೆ ಕಡ್ಡಾಯವಾಗಿ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಎನ್ನುವುದು ಈ ದೇಶದ ಎಲ್ಲಾ ಶಾಲೆಗಳಿಗೂ ಸಮನಾಗಿ ಅನುಷ್ಠಾನಗೊಳಿಸುವ ಉದ್ದೇಶವೇನೂ ಇಲ್ಲ. ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಮತ್ತು ಸರಕಾರಿ ಶಾಲೆಯ ಮಕ್ಕಳ ನಡುವಿನ ಅಂತರವನ್ನು ಇದು ಹೆಚ್ಚಿಸಲಿದೆ ಮತ್ತು ಇದು ಪರೋಕ್ಷವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಮೇಲೆ ದುಷ್ಪರಿಣಾಮವನ್ನು ಬೀರಲಿದೆ ಹೊರತು, ಸರ್ವರಿಗೂ ಸಮಾನ ಶಿಕ್ಷಣವೆನ್ನುವ ಆಶಯಕ್ಕೆ ಇದು ಪೂರಕವಾಗಿಲ್ಲ. ಇಂದು ಆಂಧ್ರ, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸುವ ಹೊಸ ಯೋಜನೆಗಳನ್ನು ರೂಪಿಸಿವೆ. ಇದರಿಂದಾಗಿ ಮೂಲೆಗುಂಪಾಗಿರುವ ಸರಕಾರಿ ಶಾಲೆಗಳು ಮತ್ತೆ ಜೀವ ಪಡೆದುಕೊಳ್ಳುತ್ತಿವೆ. ಸರಕಾರಿ ಶಾಲೆಗಳ ಪ್ರಮುಖ ಉದ್ದೇಶವೇ, ಸರ್ವರಿಗೂ ಶಿಕ್ಷಣ ದೊರಕುವಂತೆ ಮಾಡುವುದೇ ಹೊರತು, ಪ್ರಾದೇಶಿಕ ಭಾಷೆಗಳನ್ನು ಉದ್ಧರಿಸುವುದಲ್ಲ. ಸಾರ್ವಜನಿಕ ಬದುಕಿನಲ್ಲಿ ಇಂಗ್ಲಿಷ್ ಅನಿವಾರ್ಯವಾಗುತ್ತಾ ಹೋದಂತೆ, ಹಳ್ಳಿ ಹಳ್ಳಿಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ತೆರೆಯಲಾರಂಭಿಸಿದವು. ಪರಿಣಾಮವಾಗಿ ಸರಕಾರಿ ಶಾಲೆಗಳು ಮುಚ್ಚುತ್ತಾ, ಬಡ ಶೋಷಿತ ಸಮುದಾಯ ಶಿಕ್ಷಣದಿಂದಲೇ ವಂಚಿತವಾಗುವಂತಹ ಸನ್ನಿವೇಶ ನಿರ್ಮಾಣವಾಯಿತು.

ಒಂದೆಡೆ ಸರಕಾರಿ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ನಡುವಿರುವ ಅಂತರ, ಮಗದೊಂದೆಡೆ, ಶಾಲೆಗಳೇ ಮುಚ್ಚುತ್ತಿರುವ ಕಾರಣದಿಂದ ಶಿಕ್ಷಣದಿಂದಲೇ ವಂಚಿತರಾಗುವ ಒಂದು ಸಮುದಾಯ. ಇವೆರಡನ್ನೂ ಏಕಕಾಲದಲ್ಲಿ ಇಲ್ಲವಾಗಿಸುವಲ್ಲಿ ‘ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ’ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು. ಆದರೆ ನೂತನ ನೀತಿ, ಮತ್ತೆ ಪ್ರಾದೇಶಿಕ ಭಾಷೆಯ ಕುರಿತಂತೆ ಕಾಳಜಿ ತೋರಿಸುತ್ತಲೇ ಹಿಂಬಾಗಿಲಲ್ಲಿ ಸಂಸ್ಕೃತ, ಹಿಂದಿಯನ್ನು ಹೇರುವ ಪ್ರಯತ್ನ ನಡೆಸುತ್ತಿದೆ. ಈ ನೀತಿಯ ಹಿಂದೆ ಶಿಕ್ಷಣ ಸಮಿತಿಯ ಅಧ್ಯಕ್ಷ ಕಸ್ತೂರಿ ರಂಗನ್ ಅವರಿದ್ದಾರೆ. ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಅಧ್ಯಕ್ಷರಾಗಿದ್ದವರು. ಇವರು ಅತ್ಯಾಧುನಿಕ ಯುದ್ಧ ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿಯೂ ಪರಿಣಿತರು. ಆದರೆ ಭಾರತದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಅವರು ತಜ್ಞರೇನಲ್ಲ. ಕಸ್ತೂರಿ ರಂಗನ್ ಅವರು ಕೊಚ್ಚಿಯ ರಾಜಕುಟುಂಬವು ಸ್ಥಾಪಿಸಿದ್ದ ಕೊಚ್ಚಿಯ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಈಸ್ಟ್ ಇಂಡಿಯಾ ಕಂಪೆನಿಯ ಆಳ್ವಿಕೆಯ ಸಂದರ್ಭದಲ್ಲಿ ಮೆಕಾಲೆ ಪರಿಚಯಿಸಿದಂತಹ ಶಿಕ್ಷಣ ನೀತಿಯನ್ನು ಆಧರಿಸಿ ಈ ಶಾಲೆ ನಿರ್ಮಾಣವಾಗಿತ್ತು.

ಕೊಚ್ಚಿಯ ಶ್ರೀ ರಾಮವರ್ಮಾ ಸರಕಾರಿ ಮಾದರಿ ಹೈಸ್ಕೂಲ್, ದೇಶದ ಅತ್ಯಂತ ಹಳೆಯದಾದ ಆಂಗ್ಲ ಮಾಧ್ಯಮ ಶಾಲೆಗಳಲ್ಲೊಂದಾಗಿದೆ. ಯಾಕೆಂದರೆ ಕೇರಳ ಹಾಗೂ ತಮಿಳುನಾಡಿನ ಬ್ರಾಹ್ಮಣರ ಇಂಗ್ಲಿಷ್ ಮೇಲಿನ ಆಸಕ್ತಿಯ ನೆಲೆಯಲ್ಲಿ ಈ ಶಾಲೆ ನಿರ್ಮಾಣವಾಗಿತ್ತು. ಕಸ್ತೂರಿರಂಗನ್ ಸಂಸ್ಕೃತದೊಂದಿಗೆ ನೇರ ಸಂಬಂಧ ಇರುವ ಕುಟುಂಬವಾದರೂ, ಅವರು ಸಂಸ್ಕೃತದಲ್ಲಿ ವಿಶೇಷ ಆಸಕ್ತಿಯೇನೂ ತಾಳಲಿಲ್ಲ. ಆದರೆ ಅವರು ಮಾತೃಭಾಷೆಯನ್ನು ತೊರೆದು ಆಂಗ್ಲ ಭಾಷಾ ಮಾಧ್ಯಮ ಶಾಲೆಯಲ್ಲಿ ಕಲಿತರು. ಬ್ರಿಟಿಷರ ಆಗಮನದ ಬಳಿಕ ಮೇಲ್ಜಾತಿಗಳು ಇಂಗ್ಲಿಷ್ ಕಲಿಯುವ ಮೂಲಕವೇ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡವು ಎನ್ನುವುದು ವಾಸ್ತವ. ಆಧುನಿಕ ಭಾರತ ತೆರೆದುಕೊಂಡದ್ದೇ ಮೆಕಾಲೆ ಶಿಕ್ಷಣದ ಮೂಲಕ. ಅದರ ಮೂಲಕವೇ ಶೋಷಿತ ಸಮುದಾಯ ಮೇಲ್ಜಾತಿಗಳ ಶೋಷಣೆಯನ್ನು ಪ್ರಶ್ನಿಸಲಾರಂಭಿಸಿತು.

ಮೆಕಾಲೆ ಶಿಕ್ಷಣವನ್ನು ತಿರಸ್ಕರಿಸುವ ಇದೇ ಮೇಲ್ಜಾತಿಯ ಬಹುತೇಕ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳನ್ನು ಸೇರಿಕೊಂಡಿದ್ದಾರೆ ಮತ್ತು ಮೆಕಾಲೆ ಶಿಕ್ಷಣದಿಂದ ಈಗಷ್ಟೇ ಕಣ್ಣು ತೆರೆಯುತ್ತಿರುವ ಶೂದ್ರ, ದಲಿತರ ಮಕ್ಕಳಿಗೆ ಭಾರತೀಯ ಗುರುಕುಲ ಶಿಕ್ಷಣವನ್ನು ಉಳಿಸುವ ಹೊಣೆಗಾರಿಕೆಗಳನ್ನು ನೀಡಲು ಹೊರಟಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ನೂತನ ಶಿಕ್ಷಣ ನೀತಿ, ಶಿಕ್ಷಣವನ್ನು ಉದ್ಯಮವಾಗಿಸಿ ಅದನ್ನು ಉಳ್ಳವರಿಗಷ್ಟೇ ಸೀಮಿತಗೊಳಿಸುವ ಖಾಸಗಿ ಶಕ್ತಿಗಳಿಂದ ಬಿಡುಗಡೆಗೊಳಿಸುವ ಕುರಿತಂತೆ ವೌನವಾಗಿದೆ. ಈ ದೇಶದಲ್ಲಿ ಶಿಕ್ಷಣ ರಾಷ್ಟ್ರೀಕರಣಗೊಳ್ಳುವುದು ಕನಸಿನ ಮಾತು. ಅಲ್ಲಿಯವರೆಗೆ, ಬಡವರಿಗೆ, ಶೋಷಿತರಿಗಷ್ಟೇ ಮಾತೃಭಾಷೆ, ಪ್ರಾದೇಶಿಕ ಭಾಷೆಯನ್ನು ಹೇರುವುದು ಅಸಮಾನತೆಗೆ ವೌನ ಸಮ್ಮತಿಯನ್ನು ನೀಡಿದಂತೆ. ಆದುದರಿಂದ, ಈ ದೇಶದ ಹಿಂದುಳಿದವರ್ಗ, ದಲಿತ ವರ್ಗ ನೂತನ ಶಿಕ್ಷಣ ನೀತಿಯ ಕುರಿತಂತೆ ಅತ್ಯಂತ ಎಚ್ಚರದಿಂದ ಪ್ರತಿಕ್ರಿಯಿಸುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News