ಎರಡೇ ದಿನದಲ್ಲಿ ಸುಮಾರು ಒಂದು ಲಕ್ಷ ಕೋವಿಡ್-19 ಸೋಂಕಿತರು ಗುಣಮುಖ

Update: 2020-08-03 03:53 GMT

ಹೊಸದಿಲ್ಲಿ : ಇದೇ ಮೊದಲ ಬಾರಿಗೆ ಎರಡು ದಿನದಲ್ಲಿ ಸುಮಾರು ಒಂದು ಲಕ್ಷ ಮಂದಿ ಕೋವಿಡ್-19 ಸೋಂಕಿತರು ವೈರಾಣು ಮುಕ್ತರಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಮಾರಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 11 ಲಕ್ಷ ದಾಟಿದೆ.

ರಾಜ್ಯಗಳಿಂದ ಪಡೆದ ಮಾಹಿತಿ ಪ್ರಕಾರ ಶನಿವಾರ 51,845 ಮಂದಿ ಹಾಗೂ ರವಿವಾರ 40,449 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಪೈಕಿ ಗುಣಮುಖರಾದವರ ಪ್ರಮಾಣ 65.76%ಕ್ಕೆ ಹೆಚ್ಚಿದೆ. ರವಿವಾರ ವೇಳೆಗೆ ಭಾರತದ ಒಟ್ಟು ಸೋಂಕಿತರ ಸಂಖ್ಯೆ 18,03,267 ಆಗಿದ್ದು, 38,159 ಮಂದಿ ಇದುವರೆಗೆ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಪೈಕಿ ಸಾವಿನ ಪ್ರಮಾಣ 2.12% ಆಗಿದೆ. ಅಂತೆಯೇ ದೇಶದಲ್ಲಿ ವೈರಸ್ ಸೋಂಕು ದ್ವಿಗುಣದ ಅವಧಿ 21.2 ದಿನಗಳಷ್ಟಿದೆ.

ಪರಿಣಾಮಕಾರಿ ಕಂಟೈನ್ಮೆಂಟ್ ಕಾರ್ಯತಂತ್ರ, ತೀವ್ರ ಪರೀಕ್ಷೆ ಮತ್ತು ನಿಗದಿತ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರಗಳ ಸಮನ್ವಯಿತ ಅನುಷ್ಠಾನದಿಂದಾಗಿ ಗುಣಮುಖರಾಗುತ್ತಿರುವವರ ಪ್ರಮಾಣ ನಿಯತವಾಗಿ ಹೆಚ್ಚುತ್ತಿದೆ. ಈ ಮೂಲಕ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ.

ಸಾಮಾಜಿಕ ಮಟ್ಟ ಹಾಗೂ ಆಸ್ಪತ್ರೆಗಳ ಮಟ್ಟದಲ್ಲಿ ಆರೈಕೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದ್ದು, ಈ ಪ್ರವೃತ್ತಿಯಿಂದ ಸಾಂಕ್ರಾಮಿಕಕ್ಕೆ ಭಾರತದ ಸ್ಪಂದನೆ ಪರಿಣಾಮಕಾರಿಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಹಾಗೂ ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದ್ದಾರೆ.

ನಮ್ಮ ಪಾಸಿಟಿವ್ ಪ್ರಕರಣಗಳ ಬಗ್ಗೆ ನಾವು ಕಾಳಜಿ ವಹಿಸುತ್ತಿದ್ದೇವೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಎಷ್ಟು ಶೀಘ್ರವಾಗಿ ಸ್ಪಂದಿಸಬೇಕು; ಯಾವುದು ಕೆಲಸ ಮಾಡುತ್ತದೆ; ಯಾವುದು ಮಾಡುವುದಿಲ್ಲ ಎನ್ನುವುದನ್ನು ನಾವು ಅರಿತುಕೊಂಡಿದ್ದೇವೆ. ಕ್ಲಿನಿಕಲ್ ಕ್ಷೇತ್ರದಲ್ಲಿ ನಾವು ಸಂಘಟಿತ ಹಾಗೂ ವ್ಯವಸ್ಥಿತ ಚಿಕಿತ್ಸೆ ನೀಡುತ್ತಿದ್ದೇವೆ. ದಿನದಿಂದ ದಿನಕ್ಕೆ, ರೋಗಿಯಿಂದ ರೋಗಿಗೆ ಕೋವಿಡ್-19 ನಿರ್ವಹಣೆಯನ್ನು ನಾವು ಕಲಿಯುತ್ತಿದ್ದೇವೆ ಎಂದು ಪಾಲ್ ವಿವರಿಸಿದ್ದಾರೆ.

ಇದೇ ಪ್ರವೃತ್ತಿ ಮುಂದುವರಿದರೆ ದೇಶದಲ್ಲಿ ಗುಣಮುಖರಾದವರ ಪ್ರಮಾಣ ಶೇಕಡ 90ನ್ನು ಮೀರಲಿದೆ. ಸಾವಿನ ದರ 2-3% ಆಗಲಿದೆ. ಪ್ರಸ್ತುತ ಜರ್ಮನಿಯಲ್ಲಿ 2 ಲಕ್ಷಕ್ಕೂ ಅಧಿಕ ಪ್ರಕರಣ ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8300 ಇದೆ. ಆದ್ದರಿಂದ ಗುಣಮುಖರಾದವರ ಪ್ರಮಾಣ ಶೇಕಡ 92ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News