27 ವರ್ಷಗಳಿಂದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ : ತುಂಬೆ ಪಿಯು ಕಾಲೇಜಿನ ಇಬ್ಬರು ಉಪನ್ಯಾಸಕರ ಸಾಧನೆ

Update: 2020-08-03 06:40 GMT

ಬಂಟ್ವಾಳ: ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡುವ ವಿದ್ಯಾರ್ಥಿಗಳ ಬಗ್ಗೆ ನಾವು ಕೇಳುತ್ತೇವೆ. ಆದರೆ ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿ ಹಗಲು ರಾತ್ರಿ ಎನ್ನದೆ ಪರಿಶ್ರಮ ಪಡುವ ಶಿಕ್ಷಕರ ಬಗ್ಗೆ ಹೆಚ್ಚಿನವರಿಗೆ ಅರಿವೇ ಇರುವುದಿಲ್ಲ. ಮೂರು ದಶಕದಷ್ಟು ಕಾಲ ತಾವು ಬೋಧಿಸುವ ವಿಷಯದಲ್ಲಿ ಒಂದೇ ಒಂದು ವಿದ್ಯಾರ್ಥಿ ಅನುತ್ತೀರ್ಣನಾಗದಂತೆ ಎಚ್ಚರ ವಹಿಸಿದ ಇಬ್ಬರು ಉಪನ್ಯಾಸಕರ ಯಶೋಗಾಥೆ ಇಲ್ಲಿದೆ.

ಬಿ.ಅಹ್ಮದ್ ಹಾಜಿ ತುಂಬೆ ಅವರ ಸಾರಥ್ಯದ ಮುಹಿ ಯುದ್ದೀನ್ ಎಜುಕೇಶನಲ್ ಟ್ರಸ್ಟ್‌ನ ಅಧೀನದ ತುಂಬೆ ಪಪೂ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಮತ್ತು ಲೆಕ್ಕಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕವಿತಾ ಎಂಬಿಬ್ಬರ ಸಾಧನೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ, ವಿದ್ಯಾರ್ಥಿಗಳು, ಪೋಷಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಈ ಉಪನ್ಯಾಸಕರ ಸಾಧನೆ ಕಾಲೇಜಿನ ಘನತೆಯನ್ನೂ ಹೆಚ್ಚಿಸಿದೆ. 1992ರಲ್ಲಿ ತುಂಬೆ ಪಪೂ ಕಾಲೇಜು ಆರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಮಾಜಶಾಸ್ತ್ರ (Sociology), ಲೆಕ್ಕಶಾಸ್ತ್ರ (Accountancy), ವಾಣಿಜ್ಯಶಾಸ್ತ್ರ (Business studies)ದಲ್ಲಿ ಈ ಕಾಲೇಜಿನ ಒಬ್ಬನೇ ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾಗಿಲ್ಲ.

ಮಕ್ಕಳಿಗೆ ಪಾಠ ಬೋಧಿಸುವ ಮೊದಲು ಆ ಪಾಠದ ಬಗ್ಗೆ ನಾವು ಅಧ್ಯಯನ ನಡೆಸಬೇಕು. ತರಗತಿಯ ಮೇಲೆ ನಿಗಾವಹಿಸುವ ಜೊತೆಗೆ ಪ್ರತೀ ವಿದ್ಯಾರ್ಥಿಗಳ ಬಗ್ಗೆ ವೈಯುಕ್ತಿಕವಾಗಿ ನಿಗಾ ವಹಿಸಬೇಕು. ಯಾವ ವಿದ್ಯಾರ್ಥಿಗೂ ನೀನು ದಡ್ಡ, ನಿನ್ನಿಂದ ಅಸಾಧ್ಯ ಎನ್ನುವ ಪ್ರಮಾಣ ಪತ್ರ ಕೊಡಬಾರದು. ನಿನ್ನಿಂದ ಸಾಧ್ಯ ಎಂದು ಪ್ರೋತ್ಸಾಹಿಸಿದರೆ ಕಲಿಕೆಯಲ್ಲಿ ಎಷ್ಟೇ ಹಿಂದುಳಿದ ವಿದ್ಯಾರ್ಥಿಯೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುತ್ತಾರೆ ಎನ್ನುವುದು ಈ ಉಪನ್ಯಾಸಕರ ಅಭಿಪ್ರಾಯ. ನವೆಂಬರ್, ಡಿಸೆಂಬರ್ ತಿಂಗಳ ಒಳಗೆ ಎಲ್ಲಾ ಪಾಠಗಳನ್ನು ಮುಗಿಸುತ್ತೇವೆ. ಬಳಿಕ ಎಲ್ಲಾ ಪಾಠವನ್ನು ಮತ್ತೊಮ್ಮೆ ಪುನರಾವ ರ್ತಿಸುತ್ತೇವೆ. ಆ ಬಳಿಕ ಮೂರು ತಿಂಗಳು ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನೂ ಮಧ್ಯೆದಲ್ಲಿ ಕಿರು ಪರೀಕ್ಷೆ ಮಾಡುತ್ತೇವೆ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳನ್ನು ಮತ್ತಷ್ಟು ಉತ್ತಮವಾಗಿ ಕಲಿಯಲು ಪ್ರೋತ್ಸಾಹಿಸಿದರೆ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ನಿಗಾ ವಹಿಸಿ ಕಲಿಕೆಯಲ್ಲಿ ಮುಂದೆ ಬರುವಂತೆ ಕಾಳಜಿ ವಹಿಸುತ್ತೇವೆ ಎನ್ನುವುದು ಈ ಉಪನ್ಯಾಸಕರ ಸಾಧನೆಯ ಹಿಂದಿನ ಗುಟ್ಟು. ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದ ಕಾರಣಕ್ಕೆ ಆ ವಿದ್ಯಾರ್ಥಿಗಳು ದಡ್ಡರೆಂದು ಅವರನ್ನು ಗಣನೆಗೆ ತೆಗೆಯದೆ ಮತ್ತಷ್ಟು ದೂರ ಮಾಡುವುದರಲ್ಲಿ ಅರ್ಥವಿಲ್ಲ. ಅವರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಪ್ರೋತ್ಸಾಹಿಸಬೇಕು. ಕಲಿಯುವುದರಲ್ಲಿ ಮುಂದಿರುವ ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಸಾಧನೆ ಅಲ್ಲ. ಕಲಿಯುವುದರಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಉತ್ತೀ ರ್ಣರಾಗುವಂತೆ ಮಾಡುವುದು ಸಾಧನೆ. ಅದಕ್ಕೆ ಸಂಯಮ ಬೇಕು. ವಿದ್ಯಾರ್ಥಿಗಳ ಹೆತ್ತವರನ್ನು ಕರೆಸಿ ಅವರೊಂದಿಗೆ ಚರ್ಚಿಸಬೇಕು. ಹೆಚ್ಚಿನ ವಿದ್ಯಾರ್ಥಿಗಳು ಅವರ ಭವಿಷ್ಯದ ಬಗ್ಗೆ ಚಿಂತಿಸುವುದೇ ಇಲ್ಲ. ಚಿಂತಿಸುವ ವಯಸ್ಸು ಅವರದ್ದಾಗಿ ರುವುದಿಲ್ಲ. ಎಲ್ಲವನ್ನೂ ತಮಾಷೆಯಾಗಿ, ಮನರಂಜನೆಯಾಗಿ ನೋಡುತ್ತಾರೆ. ಅಂಥಹ ವಿದ್ಯಾರ್ಥಿಗಳನ್ನು ಪ್ರೀತಿ, ನಯವಾದ ಮಾತುಗಳಿಂದ ಮೊದಲು ವಿಶ್ವಾಸಕ್ಕೆ ತೆಗೆಯಬೇಕು. ಬಳಿಕ ಅವರಿಗೆ ಭವಿಷ್ಯದ ಬಗ್ಗೆ, ಗುರಿಯ ಬಗ್ಗೆ ವಿವರಿಸಬೇಕು. ಹೀಗೆ ಮಾಡಿದಾಗ ಕಲಿಕೆಯಲ್ಲಿ ಎಷ್ಟು ಹಿಂದಿರುವ ವಿದ್ಯಾರ್ಥಿ ಕೂಡ ಉತ್ತಮ ಅಂಕ ಪಡೆದು ಉತ್ತೀರ್ಣರಾಗಬಹುದು. ಅಂತಹ ಹಲವಾರು ನಿದರ್ಶನಗಳು ನಮ್ಮಲ್ಲಿ ಇವೆ ಎಂದು ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಹೇಳುತ್ತಾರೆ. ಇದು ತಂತ್ರಜ್ಞಾನದ ಯುಗ. ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಂಡರೆ ಕಲಿಯಲೂ, ಕಲಿಸಲೂ ಹೆಚ್ಚಿನ ಸಹಕಾರಿ ಆಗುತ್ತದೆ. ಅಂದಿನ ಪಾಠವನ್ನು ಅಂದೇ ಮನೆಯಲ್ಲಿ ಅಭ್ಯಾಸ ಮಾಡುವುದು ಕಲಿಕೆಯ ಉತ್ತಮ ವಿಧಾನ. ಇದಕ್ಕಾಗಿ ನಮ್ಮ ಮೊಬೈಲ್ ಫೋನ್ ನಂಬರ್ ಮಕ್ಕಳಿಗೆ ನೀಡುತ್ತೇವೆ. ಮನೆಯಲ್ಲಿ ಅಭ್ಯಾಸ ಮಾಡುವಾಗ ಏನಾದರೂ ಸಂಶಯ ಇದ್ದರೆ ಕೂಡಲೇ ಕರೆ ಮಾಡಿ ನಿವಾರಿಸಬಹುದು. ಯಾವ ರಾತ್ರಿ ಕರೆ ಮಾಡಿದರೂ ಸ್ವೀಕರಿಸಿ ಮಕ್ಕಳಿಗೆ ನೆರವಾಗುತ್ತೇವೆ. ಇಂಥದ್ದೇ ಸಮಯದಲ್ಲಿ ಕರೆ ಮಾಡಬೇಕು ಇಂಥ ಸಮಯದಲ್ಲಿ ಕರೆ ಮಾಡಬಾರದು ಎಂಬ ನಿಬಂಧನೆಗಳು ಇಲ್ಲ. ಹಾಗಾಗಿ ಮಕ್ಕಳು ಅವರಿಗೆ ಅಗತ್ಯ ಇದ್ದ ಸಂದರ್ಭದಲ್ಲಿ ನಿರ್ಭೀತಿಯಿಂದ ಕರೆ ಮಾಡಿ ಪಠ್ಯದ ಬಗ್ಗೆ ಇರುವ ಸಂಶಯ ನಿವಾರಿಸುತ್ತಾರೆ ಎಂದು ಹೇಳುತ್ತಾರೆ ಉಪನ್ಯಾಸಕಿ ಕವಿತಾ.

ವಿದ್ಯಾರ್ಥಿಗಳ ಕಲಿಕಾ ಶಕ್ತಿ ಅವರು ತಿನ್ನುವ ಆಹಾರ ಮತ್ತು ಜೀವನ ಶೈಲಿಯನ್ನೂ ಅವಲಂಬಿಸಿರುತ್ತದೆ. ಪರೀಕ್ಷಾ ಸಮಯದಲ್ಲಿ ಜಡತ್ವ ಉಂಟು ಮಾಡುವ ಆಹಾರ ಸೇವಿಸಬಾರದು. ಮಿತ ಅಹಾರ ಸೇವಿಸಬೇಕು. ಒಂದಷ್ಟು ಹೊತ್ತು ವ್ಯಾಯಾಮ ಮಾಡಬೇಕು. ಮುಂಜಾನೆ 5 ಗಂಟೆಗೆ ಎದ್ದೇಳಬೇಕು ಹಾಗೂ ಸಂಜೆ 6ರಿಂದ ರಾತ್ರಿ 9ರ ವರೆಗೆ ಓದಲು ಉತ್ತಮ ಸಮಯ. ಒಂದು ಬಾರಿ ಬರೆದು ಕಲಿಯುವುದು ಹತ್ತು ಬಾರಿ ಓದಿ ಕಲಿಯುವುದಕ್ಕೆ ಸಮ. ಇವೆಲ್ಲದರ ಬಗ್ಗೆ ಹೆಚ್ಚಿನ ಮಕ್ಕಳಿಗೆ, ಪೋಷಕರಿಗೆ ಗೊತ್ತಿರುವುದಿಲ್ಲ. ಅದನ್ನು ಅವರಿಗೆ ತಿಳಿಸಿ ಕೊಡಬೇಕು. ಪ್ರೀತಿ, ವಿಶ್ವಾಸದಿಂದ ಮಕ್ಕಳ ಮನಸ್ಸನ್ನು ಗೆದ್ದು ಅವರನ್ನು ಕಲಿಯುವಂತೆ ಮಾಡಬೇಕು. ಹೀಗಾಗಿಯೇ 28 ವರ್ಷಗಳಿಂದ ತನ್ನ ವಿಷಯವಾದ ಸಮಾಜಶಾಸ್ತ್ರದಲ್ಲಿ ಒಬ್ಬ ವಿದ್ಯಾರ್ಥಿಯೂ ಅನುತ್ತೀರ್ಣನಾಗದಂತೆ ನೋಡಿಕೊಂಡಿರುವೆನು.

-ವಿ.ಸುಬ್ರಹ್ಮಣ್ಯ ಭಟ್, ಸಮಾಜಶಾಸ್ತ್ರ ಉಪನ್ಯಾಸಕರು

ವಿದ್ಯಾರ್ಥಿಗಳಿಗೆ ಕಲಿಯಲು ಹಾಗೂ ಕಲಿಸಲು ಕಾಲೇಜಿನಲ್ಲಿ ಉತ್ತಮ ವ್ಯವಸ್ಥೆ ಮತ್ತು ಉತ್ತಮ ವಾತಾವರಣ ಬೇಕು. ಇದನ್ನು ನಮ್ಮ ಕಾಲೇಜಿನ ಆಡಳಿತ ಮಂಡಳಿ ಮಾಡಿ ಕೊಟ್ಟಿದೆ. ನಿರಂತರ 27 ವರ್ಷಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನನ್ನ ವಿಷಯಗಳಲ್ಲಿ ಯಾವುದೇ ವಿದ್ಯಾರ್ಥಿ ಅನುತ್ತೀರ್ಣನಾಗದಿರಲು ನಮ್ಮ ಪ್ರಾಂಶುಪಾಲ, ಸಹೋದ್ಯೋಗಿಗಳು ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ನೀಡಿದ ಸಹಕಾರವೇ ಕಾರಣ.

-ಕವಿತಾ, ಲೆಕ್ಕಶಾಸ್ತ್ರ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ

ನಮ್ಮ ಕಾಲೇಜಿನ ಉಪನ್ಯಾಸಕರಾದ ವಿ.ಸುಬ್ರಹ್ಮಣ್ಯ ಭಟ್ ಮತ್ತು ಕವಿತಾ, ಬೋಧಿಸುವ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ವಿಷಯಗಳಲ್ಲಿ 1993ರಿಂದ 2020ರ ಪಿಯುಸಿ ಫಲಿತಾಂಶದವರೆಗೆ ನಡೆದ ಪ್ರತೀ ಪರೀಕ್ಷೆಯಲ್ಲೂ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 27 ವರ್ಷ ತಮ್ಮ ವಿಷಯಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಕೂಡ ಅನುತ್ತೀರ್ಣನಗದಂತೆ ಎಚ್ಚರವಹಿಸಿರುವುದು ಅವರ ಮಾದರಿ ಬೋಧನೆಯ ಶೈಲಿಯನ್ನು ತೋರಿಸುತ್ತದೆ. ಇದು ಸಣ್ಣ ಸಾಧನೆ ಅಲ್ಲ. ಇದು ನಮ್ಮ ಸಂಸ್ಥೆಯ ಘನತೆಯನ್ನೂ ಹೆಚ್ಚಿಸಿದೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕರೆದು ಉತ್ತಮವಾಗಿ ಕಲಿಯುವಂತೆ ಪ್ರೋತ್ಸಾಹಿಸುವುದು, ಪೋಷಕರನ್ನು ಕರೆದು ಅವರ ಜೊತೆ ಚರ್ಚಿಸುವುದು ಈ ಉಪನ್ಯಾಸಕರ ಬೋಧನೆಯ ಮಾದರಿಯಾಗಿದೆ. ಸುಬ್ರಹ್ಮಣ್ಯ ಭಟ್, ಸಮಾಜಶಾಸ್ತ್ರದ ಜೊತೆ ಸಾಹಿತ್ಯದಲ್ಲೂ ಆಸಕ್ತಿಯನ್ನು ಹೊಂದಿದ್ದಾರೆ. ಮೂರು ಪುಸ್ತಕಗಳನ್ನು ಬರೆದಿರುವ ಅವರು ಮಕ್ಕಳಿಗೆ ಸಾಹಿತ್ಯ ಕಮ್ಮದ ಏರ್ಪಡಿಸುವ ಮೂಲಕ ಮಕ್ಕಳಲ್ಲೂ ಸಾಹಿತ್ಯ ಅಭಿರುಚಿ ಮೂಡಿಸುತ್ತಿದ್ದಾರೆ.

-ಗಂಗಾಧರ ಆಳ್ವ, ತುಂಬೆ ಕಾಲೇಜಿನ ಪ್ರಾಂಶುಪಾಲ

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News