ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ: ಆ. 5ರಂದು ಒಂದು ವರ್ಷ

Update: 2020-08-03 14:02 GMT

ಹೊಸದಿಲ್ಲಿ, ಆ.3: ಕಳೆದ ವರ್ಷದ ಆ.5ರಂದು ಜಮ್ಮು-ಕಾಶ್ಮೀರದಲ್ಲಿ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ರಾಜ್ಯ ಆಡಳಿತವು 444 ಜನರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ)ಯನ್ನು ಹೇರಿದ್ದು, ಈ ಪೈಕಿ ಸುಮಾರು 300 ಜನರನ್ನು ಈವರೆಗೆ ಬಿಡುಗಡೆ ಗೊಳಿಸಲಾಗಿದೆ. ಇವರಲ್ಲಿ 51 ಜನರನ್ನು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ಆದೇಶಗಳ ಮೇಲೆ ಬಿಡುಗಡೆಗೊಳಿಸಿದ್ದರೆ, ಆಡಳಿತಾತ್ಮಕ ಪುನರ್‌ಪರಿಶೀಲನೆಗಳ ಬಳಿಕ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡಕೂಡದು ಎಂಬ ಷರತ್ತಿನ ಮೇಲೆ ಇತರರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ತನ್ಮಧ್ಯೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ವಿರುದ್ಧ ಹೇರಲಾಗಿರುವ ಪಿಎಸ್‌ಎ ಅನ್ನು ಇನ್ನೂ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. 1978ರಲ್ಲಿ ಜಾರಿಗೊಂಡಿದ್ದ ಜಮ್ಮು-ಕಾಶ್ಮೀರ ಪಿಎಸ್‌ಎ ರಾಜಕೀಯ ನಾಯಕರು, ಪ್ರತ್ಯೇಕತಾವಾದಿಗಳನ್ನು ಬಂಧಿಸಲು ಪ್ರಮುಖ ಅಸ್ತ್ರವಾಗಿ ಪೊಲೀಸರಿಂದ ಬಳಕೆಯಾಗುತ್ತಿದೆ.

ರಾಜಕೀಯ ಕೈದಿಗಳ ಬಿಡುಗಡೆಯ ಬೆನ್ನಲ್ಲೇ ಕೇಂದ್ರವು ಕೇಂದ್ರ ಸರಕಾರವು ಜಮ್ಮು-ಕಾಶ್ಮೀರ ರಾಜ್ಯ ಶಾಸಕಾಂಗ ಸದಸ್ಯರ ಪಿಂಚಣಿ ಕಾಯ್ದೆ, 1984ಕ್ಕೆ ತಿದ್ದುಪಡಿಗಳನ್ನು ತಂದಿದ್ದು,ಶಾಸಕರ ಪಿಂಚಣಿಯನ್ನು 75,000 ರೂ.ಗೇರಿಸಲಾಗಿದೆ. ಆದರೆ ಮಾಜಿ ಮುಖ್ಯಮಂತ್ರಿಗಳಿಗೆ ಬಾಡಿಗೆ ರಹಿತ ವಸತಿ ಸೌಲಭ್ಯ, ಗೃಹ ಪೀಠೋಪಕರಣಗಳಿಗೆ ವೆಚ್ಚ ಪಾವತಿ, ಉಚಿತ ದೂರವಾಣಿ ಕರೆಗಳು, ಉಚಿತ ವಿದ್ಯುತ್, ಕಾರು, ಪೆಟ್ರೋಲ್, ವೈದ್ಯಕೀಯ ಸೌಲಭ್ಯಗಳು, ಚಾಲಕ ಹಾಗೂ ಆಪ್ತ ಸಹಾಯಕ ಸೌಲಭ್ಯಗಳನ್ನು ಹಿಂದೆಗೆದುಕೊಳ್ಳಲಾಗಿದೆ.

ಗೃಹ ಸಚಿವಾಲಯದ ಅಭಿಪ್ರಾಯದಂತೆ ಈ ವರ್ಷದ ಪೂರ್ವಾರ್ಧದಲ್ಲಿ ಜಾರಿಗೊಳಿಸಲಾದ ಆಂತರಿಕ ನಿಯಮಗಳು ಪಶ್ಚಿಮ ಪಾಕಿಸ್ತಾನಿ ನಿರಾಶ್ರಿತರು, ಗೂರ್ಖಾಗಳು, ಸಫಾಯಿ ಕರ್ಮಚಾರಿಗಳು ಮತ್ತು ರಾಜ್ಯದ ಹೊರಗೆ ವಿವಾಹವಾದ ಮಹಿಳೆಯರು ಸೇರಿದಂತೆ ತಾರತಮ್ಯಕ್ಕೊಳಗಾಗಿದ್ದ ವರ್ಗಗಳನ್ನು ಉದ್ಯೋಗಗಳು ಮತ್ತು ವಿದ್ಯಾರ್ಥಿ ವೇತನಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅರ್ಹರನ್ನಾಗಿಸುವಲ್ಲಿ ನೆರವಾಗಿವೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಜಮ್ಮು-ಕಾಶ್ಮೀರವನ್ನು ರಾಜ್ಯವನ್ನಾಗಿ ಘೋಷಿಸುವುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕಳೆದ ವರ್ಷದ ಆ.5ರಂದು ಸಂಸತ್ತಿನಲ್ಲಿ ತನ್ನ ಭಾಷಣದ ಸಂದರ್ಭ ಭರವಸೆ ನೀಡಿದ್ದರು.

ಜಮ್ಮು-ಕಾಶ್ಮೀರದಲ್ಲಿದ್ದ 354 ರಾಜ್ಯ ಕಾನೂನುಗಳ ಪೈಕಿ 164ನ್ನು ರದ್ದುಗೊಳಿಸಿದ್ದು, 138 ಕಾನೂನುಗಳನ್ನು ಪರಿಷ್ಕರಿಸಿದ್ದು ಮತ್ತು 170 ಕೇಂದ್ರ ಕಾನೂನುಗಳು ಅನ್ವಯವಾಗುವಂತೆ ಮಾಡಿದ್ದು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಗಳನ್ನು ಶೇ.262ರಷ್ಟು ಹೆಚ್ಚಿಸಿದ್ದು ರಾಜ್ಯದಲ್ಲಿಯ ಪ್ರಮುಖ ಸುಧಾರಣೆಗಳಲ್ಲಿ ಸೇರಿವೆ. ಇತರ ಕಡೆಗಳಲ್ಲಿದ್ದ 1,000 ಕೋ.ರೂ.ಗಳ ಸರಕಾರಿ ನಿಧಿಯನ್ನು ಪತ್ತೆ ಹಚ್ಚಿ ರಾಜ್ಯದ ಸಂಚಿತ ನಿಧಿಗೆ ವಾಪಸ್ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News