ಅಫ್ಘಾನ್ ಜೈಲಿನ ಮೇಲೆ ಐಸಿಸ್ ದಾಳಿ; 29 ಸಾವು

Update: 2020-08-03 16:39 GMT

ಜಲಾಲಾಬಾದ್ (ಅಫ್ಘಾನಿಸ್ತಾನ), ಆ. 3: ಅಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿನ ಸೆರೆಮನೆಯೊಂದರ ಮೇಲೆ ರವಿವಾರ ಐಸಿಸ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 29 ಮಂದಿ ಮೃತಪಟ್ಟಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಜೈಲನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಅಫ್ಘಾನ್ ಭದ್ರತಾ ಪಡೆಗಳು ತಿಳಿಸಿವೆ.

ಈ ಜೈಲಿನಲ್ಲಿ ನೂರಾರು ಐಸಿಸ್ ಸದಸ್ಯರು ಇದ್ದಾರೆ ಎನ್ನಲಾಗಿದೆ. ಕಾಳಗದಲ್ಲಿ ಮೃತಪಟ್ಟವರಲ್ಲಿ ನಾಗರಿಕರು, ಕೈದಿಗಳು, ಜೈಲು ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಸುಮಾರು 50 ಮಂದಿ ಗಾಯಗೊಂಡಿದ್ದಾರೆ.

ಜೈಲನ್ನು ಅಫ್ಘಾನ್ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕವೂ, ಐಸಿಸ್ ಉಗ್ರರು ಸಮೀಪದ ಸ್ಥಳವೊಂದರಿಂದ ಅಫ್ಘಾನ್ ಪಡೆಗಳ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿದ್ದಾರೆ.

ಜೈಲಿನ ಮೇಲಿನ ದಾಳಿಯು ರವಿವಾರ ಆರಂಭಗೊಂಡಿತು. ಐಸಿಸ್‌ಗೆ ಸೇರಿದ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಕಗಳಿಂದ ತುಂಬಿದ ಕಾರೊಂದನ್ನು ಜೈಲಿನ ಮುಖ್ಯ ದ್ವಾರದಲ್ಲಿ ಸ್ಫೋಟಿಸಿದನು. ಬಳಿಕ ಇತರ ಭಯೋತ್ಪಾದಕರು ಜೈಲಿನ ಕಾವಲುಗಾರರ ಮೇಲೆ ಗುಂಡು ಹಾರಿಸುತ್ತಾ ಒಳಗೆ ಪ್ರವೇಶಿಸಿದರು.

ಕಾಳಗದ ವೇಳೆ, ಜೈಲಿನಲ್ಲಿದ್ದ ಸುಮಾರು 1,500 ಕೈದಿಗಳ ಪೈಕಿ ಕೆಲವರು ತಪ್ಪಿಸಿಕೊಂಡಿದ್ದಾರೆ. ಜೈಲಿನಿಂದ ತಪ್ಪಿಸಿಕೊಂಡಿದ್ದ ಸುಮಾರು 1,000 ಕೈದಿಗಳನ್ನು ಭದ್ರತಾ ಪಡೆಗಳು ನಗರದಿಂದ ಮರುಬಂಧಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News