ಖಾದಿ ತೆರೆದಿಟ್ಟ ಹಾದಿ...

Update: 2020-08-04 04:53 GMT

ಸ್ವಾವಲಂಬಿ ಭಾರತವನ್ನು ಕಟ್ಟುವ ಕುರಿತಂತೆ ಪ್ರಧಾನಿ ಮೋದಿಯವರು ಭಾಷಣಗಳ ಮೇಲೆ ಭಾಷಣಗಳನ್ನು ಬಿಗಿಯುತ್ತ್ತಾ ಬರುತ್ತಿದ್ದರೂ, ಭಾರತ ಹಂತಹಂತವಾಗಿ ಪರಾವಲಂಬಿಯಾಗುವತ್ತ ಸಾಗುತ್ತಿದೆ. ನೋಟು ನಿಷೇಧ ಭಾರತದ ಆರ್ಥಿಕ ಶಕ್ತಿಯನ್ನೇ ದುರ್ಬಲಗೊಳಿಸಿತು. ಕೊರೋನ ಲಾಕ್‌ಡೌನ್, ಸ್ವಾವಲಂಬಿ ಭಾರತದ ಮೇಲೆ ಹಾಕಿದ ಇನ್ನೊಂದು ಚಪ್ಪಡಿಕಲ್ಲು. ಆದರೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಗಳ ಮೂಲಕ ಸ್ವಾವಲಂಬಿ ಭಾರತವನ್ನು ಕಟ್ಟುವ ಪ್ರಯತ್ನವನ್ನಂತೂ ಕೈ ಬಿಟ್ಟಿಲ್ಲ. ಕೊರೋನೋತ್ತರ ಭಾರತವನ್ನು ಪುನರ್ ನಿರ್ಮಿಸಲು ಅವರು ಈಗಾಗಲೇ ಆತ್ಮ ನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತದ ಪರಿಕಲ್ಪನೆಯನ್ನು ಘೋಷಿಸಿದ್ದಾರೆ. ಆದರೆ ಅದಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ಭಾರತ ಎಷ್ಟರಮಟ್ಟಿಗೆ ಮಾಡಿಕೊಂಡಿದೆ ಎನ್ನುವುದರ ಕುರಿತಂತೆ ಪ್ರಶ್ನೆಗಳು ಇನ್ನೂ ಉತ್ತರ ಇಲ್ಲದೆ ಬಿದ್ದುಕೊಂಡಿವೆ. ಭಾರತವು ಆರ್ಥಿಕ ಸುಸ್ಥಿರತೆಯನ್ನು ಸಾಧಿಸಬೇಕಾದರೆ ಅದು ಆಮದನ್ನು ಗಣನೀಯವಾಗಿ ಕಡಿತಗೊಳಿಸಬೇಕು ಹಾಗೂ ಇದಕ್ಕಾಗಿ ಸ್ವದೇಶಿ ವಸ್ತುಗಳ ಉತ್ಪಾದನೆಯನ್ನು ಉತ್ತೇಜಿಸಬೇಕು.

1905ರಲಿ ್ಲ ಆರಂಭಗೊಂಡ ಸ್ವದೇಶಿ ಚಳವಳಿ ಕೂಡಾ ಇದೇ ಆಶಯವನ್ನು ಹೊಂದಿತ್ತು. ಆಗ ಆ ಚಳವಳಿಯ ನೇತೃತ್ವವನ್ನು ಮಹಾತ್ಮಾಗಾಂಧೀಜಿ ವಹಿಸಿದ್ದರು. ಭಾರತದಲ್ಲೇ ಉತ್ಪಾದನೆಯಾಗುವ ಖಾದಿ ಬಟ್ಟೆಗಳನ್ನು ಧರಿಸಲು ದೊಡ್ಡ ಮಟ್ಟದ ಚಳವಳಿಯನ್ನೇ ಆರಂಭಿಸಿದ್ದರು. ಖಾದಿ ಅವರಿಗೊಂದು ನೆಪವಾಗಿತ್ತು. ಅದನ್ನು ಮಾದರಿಯಾಗಿಟ್ಟುಕೊಂಡು ಸ್ವದೇಶಿ ಆರ್ಥಿಕತೆಯೊಂದನ್ನು ಕಟ್ಟುವ ಕನಸನ್ನು ಅವರು ಕಂಡಿದ್ದರು. ಖಾದಿ ಉದ್ಯಮವು ಒಂದು ಕಾಲದಲ್ಲಿ ಸಾವಿರಾರು ಭಾರತೀಯರ ಜೀವನಾಧಾರವಾಗಿತ್ತು. ಅದು ನಮ್ಮ ಸಾಮಾಜಿಕ ಸಂರಚನೆಯ ಭಾಗವಾಗಿತ್ತು. ಸುಮಾರು ಒಂದು ಶತಮಾನದ ಹಿಂದೆಯೇ ಗಾಂಧೀಜಿಯವರು ಖಾದಿಯ ಚಳವಳಿಯ ಮೂಲಕ ಗ್ರಾಮೀಣ ಭಾರತದ ಆರ್ಥಿಕ ಸ್ವಾತಂತ್ರಕ್ಕೆ ಉತ್ತರವನ್ನು ಕಂಡುಕೊಂಡಿದ್ದರು ಹಾಗೂ ತನ್ನ ಕೊನೆ ಉಸಿರಿನವರೆಗೂ ಖಾದಿಯನ್ನು ಪ್ರೋತ್ಸಾಹಿಸಿದ್ದರು.ಆದರೆ ಆಧುನಿಕ ಭಾರತವನ್ನು ಕಟ್ಟುವ ನೆಹರೂ ಅವರ ಕನಸು ಗಾಂಧೀಜಿಯವರ ಸ್ವದೇಶಿ ಚಿಂತನೆಗಳಿಗೆ ಭಿನ್ನವಾಗಿತ್ತು. ಭಾರತ ಕೃಷಿ ಪ್ರಧಾನ ದೇಶವಾದರೂ, ಕೃಷಿ ಮತ್ತು ಕೈಗಾರಿಕೆಗಳ ನಡುವಿನ ಸಮನ್ವಯ ಅಗತ್ಯ ಎನ್ನುವುದನ್ನು ಅವರು ಬಲವಾಗಿ ನಂಬಿದ್ದರು. ಗಾಂಧಿಯ ಖಾದಿ ಸ್ವದೇಶಿವಾದ ವಾಸ್ತವಕ್ಕೆ ದೂರವಾದುದು ಎನ್ನುವುದನ್ನು ಅವರು ಅರಿತಿದ್ದರು. ಆದುದರಿಂದ ಖಾದಿ ಇಂದಿಗೂ ಸ್ವದೇಶಿ ಚಿಂತನೆಯ ಒಂದು ಮಾದರಿಯಾಗಿ ಗೌರವಯುತ ಸ್ಥಾನದಲ್ಲಿ ಉಳಿದುಕೊಂಡಿದೆಯೇ ಹೊರತು, ಅದನ್ನು ವಾಸ್ತವಕ್ಕಿಳಿಸಿ, ಜನರ ಆರ್ಥಿಕ ಬದುಕಿಗೆ ಆಸರೆಯಾಗಿಸುವುದಕ್ಕೆ ಸಾಧ್ಯವಾಗಲಿಲ್ಲ. ಇದೀಗ ಸ್ವಾವಲಂಬಿ ಭಾರತವನ್ನು ಕಟ್ಟಬೇಕಾದರೆ ಮತ್ತೆ ಗ್ರಾಮೀಣ ಪ್ರದೇಶದಿಂದಲೇ ಆರಂಭಿಸಬೇಕಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಉದ್ದಿಮೆಗಳೆಲ್ಲ ಸಂಪೂರ್ಣ ನೆಲಕಚ್ಚಿವೆ. ಸ್ವದೇಶಿ ಚಿಂತನೆಗಳ ಜೊತೆಗೆ ಮತ್ತೆ ಭಾರತವನ್ನು ಕಟ್ಟುವ ಉದ್ದೇಶ ಮೋದಿಯವರಿಗೆ ಪ್ರಾಮಾಣಿಕವಾಗಿ ಇದೆಯೆಂದಾದರೆ, ಅವರನ್ನು ಸ್ವಾತಂತ್ರಪೂರ್ವದ ಖಾದಿ ಉದ್ಯಮ ಮತ್ತೆ ಕೈ ಬೀಸಿ ಕರೆಯುತ್ತಿದೆ. ಸರಕಾರ ಈ ನಿಟ್ಟಿನಲ್ಲಿ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿದೆ ಎನ್ನುವುದನ್ನು ಅವಲಂಬಿಸಿ, ಖಾದಿಯ ಅಳಿವು ಉಳಿವು ನಿರ್ಧಾರವಾಗಲಿದೆ. ಭಾರತದೊಳಗೆ ಖಾದಿ ನೂಲು ತಯಾರಿಯಲ್ಲಿ ಪರಿಣಿತರಾದ 5 ಲಕ್ಷಕ್ಕೂ ಅಧಿಕ ನೇಕಾರರಿದ್ದಾರೆ. ಅನುಕೂಲಕರವಾದ ನೀತಿಗಳು ಹಾಗೂ ಆರೋಗ್ಯಕರ ಮಾರುಕಟ್ಟೆ ಸ್ಪರ್ಧೆಯ ಮೂಲಕ ಇರುವ ಅವಕಾಶಗಳು ಪರಿಪೂರ್ಣವಾದ ಫಲಿತಾಂಶಗಳನ್ನು ನೀಡುವಂತೆ ಮಾಡುವುದೇ ಸರಕಾರದ ಮುಂದೆ ಇರುವ ಹೊಣೆಗಾರಿಕೆಯಾಗಿದೆ.ಖಾದಿ ಟೆಕ್ಸ್‌ಟೈಲ್ಸ್‌ನ ಉತ್ಪಾದನೆಯಲ್ಲಿ ಹತ್ತಿ ಪ್ರಮುಖವಾದ ಕಚ್ಚಾವಸ್ತುವಾಗಿದೆ. ಜಗತ್ತಿನಲ್ಲಿಯೇ ಭಾರತವು ಹತ್ತಿಯ ಅತಿ ದೊಡ್ಡ ಉತ್ಪಾದಕ ದೇಶವಾಗಿದೆ. ಇದೇ ವೇಳೆ, ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಜನರು ಕೃತಕ ಹಾಗೂ ಸಿಂಥೆಟಿಕ್ ಜವಳಿ ಉತ್ಪನ್ನಗಳ ಬದಲು ಪರಿಸರ ಸ್ನೇಹಿ ಬಟ್ಟೆಗಳಿಗೆ ಆದ್ಯತೆ ನೀಡತೊಡಗಿದ್ದಾರೆ. ಹೀಗಾಗಿ ಖಾದಿಗೆ ದೇಶೀಯ ಹಾಗೂ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವ್ಯಾಪಕವಾದ ಅವಕಾಶಗಳಿವೆ. ಸುಸ್ಥಿರ ಆರ್ಥಿಕತೆಯನ್ನು ಹೊಂದುವ ಭಾರತದ ಕನಸಿಗೆ ಖಾದಿ ಉದ್ಯಮವು ಅತಿ ದೊಡ್ಡ ಕೊಡುಗೆಯನ್ನು ನೀಡಬಹುದಾಗಿದೆ.ಒಂದು ಮೀಟರ್ ಖಾದಿ ಬಟ್ಟೆ ಉತ್ಪಾದನೆಗೆ 3 ಲೀಟರ್ ನೀರು ಬೇಕಾದರೆ, ಮಿಲ್‌ನಲ್ಲಿ ತಯಾರಾಗುವ ಫ್ಯಾಬ್ರಿಕ್ ಬಟ್ಟೆಗೆ 56 ಲೀಟರ್ ನೀರು ಬೇಕಾಗುತ್ತದೆಯೆಂದು ಖಾದಿ ಹಾಗೂ ಗ್ರಾಮ ಕೈಗಾರಿಕೆ ಆಯೋಗದ ಅಧ್ಯಕ್ಷ ವಿ.ಕೆ.ಸಕ್ಸೇನಾ ಹೇಳುತ್ತಾರೆ. ಹೀಗಾಗಿ ಗ್ರಾಮೀಣ ಹಾಗೂ ನಗರ ಭಾರತದಲ್ಲಿ ವ್ಯಾಪಕವಾಗಿರುವ ಜಲ ಬಿಕ್ಕಟ್ಟನ್ನು ಬಗೆಹರಿಸುವಲ್ಲಿಯೂ ಖಾದಿ ಚಳವಳಿ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.

ಭಾರತವು ಜಗತ್ತಿನ ಜವಳಿ ಹಾಗೂ ಬಟ್ಟೆ ಉದ್ಯಮದಲ್ಲಿ ಎರಡನೇ ಅತಿ ದೊಡ್ಡ ರಫ್ತುದಾರನಾಗಿದೆ ಹಾಗೂ 2019-20 ಹಣಕಾಸು ವರ್ಷದಲ್ಲಿ ಭಾರತದ ಟೆಕ್ಸ್‌ಟೈಲ್ ್ಸ ವಲಯವು ರಫ್ತಿನಿಂದ 22.94 ಶತಕೋಟಿ ಡಾಲರ್ ಆದಾಯ ಗಳಿಸಿತ್ತು. ಇತ್ತೀಚಿನ ಕೈಗಾರಿಕಾ ವರದಿಗಳ ಪ್ರಕಾರ, ಒಟ್ಟಾರೆ ಟೆಕ್ಸ್‌ಟೈಲ್ ಮಿಲ್ ಉತ್ಪಾದನೆಯಲ್ಲಿ ಖಾದಿಯ ಪಾಲು ಶೇ.8.49 ಆಗಿದೆ. ಖಾದಿ ಎಲ್ಲ ರೀತಿಯಲ್ಲೂ ದೇಹ ಮತ್ತು ಮನಸ್ಸಿಗೆ ಸ್ಪಂದಿಸುವ ಉಡುಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊತ್ತ ಮೊದಲಾಗಿ, 'ಪವಿತ್ರತೆ'ಯ ಪಟ್ಟದಿಂದ ಕೆಳಗಿಳಿಸಿ ಅದನ್ನು ಜನಸಾಮಾನ್ಯರ ಬಟ್ಟೆಯನ್ನಾಗಿಸುವ, ಆಧುನಿಕ ಬದುಕಿಗೆ, ಶೈಲಿಗೆ ಒಗ್ಗುವ ವಸ್ತ್ರವನ್ನಾಗಿಸುವ ಪ್ರಯತ್ನ ನಡೆಯಬೇಕು. ಈಗಾಗಲೇ ಖಾದಿಯು ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ನಡುವೆ ಅತ್ಯಂತ ಜನಪ್ರಿಯವಾಗುತ್ತಿದೆ. ಇದರ ಪರಿಣಾಮವಾಗಿ ಖಾದಿ ನಿರ್ಮಿತ ಉಡುಪು ಹಾಗೂ ಫ್ಯಾಬ್ರಿಕ್‌ಗಳಲ್ಲಿ ಶೇ.164 ಬೆಳವಣಿಗೆಯಾಗಿದೆ. ಇಂದು ರಾಜಕಾರಣಿಗಳಿಂದ ಹಿಡಿದು ಸಿನೆೆಮಾ ತಾರೆಯರವರೆಗೆ ಎಲ್ಲಾ ಪ್ರಭಾವಿ ವ್ಯಕ್ತಿಗಳು ನವೀನ ಶೈಲಿಯ ಖಾದಿ ಉಡುಗೆಗಳನ್ನು ಧರಿಸಿ ಉದ್ಯಮ ಹಾಗೂ ಸಾಮಾಜಿಕ ವಲಯಗಳಲ್ಲಿ ತಮ್ಮ ವರ್ಚಸ್ಸನ್ನು ಪ್ರದರ್ಶಿಸಲು ಬಯಸುತ್ತಿದ್ದಾರೆ. ಖಾದಿ ಹಾಗೂ ಗ್ರಾಮೀಣ ಕೈಗಾರಿಕೆಗಳ ಆಯೋಗವು (ಕೆವಿಐಸಿ) ಖಾದಿ ಜೀನ್ಸ್‌ನ ತಯಾರಿಕೆಯನ್ನು ಆರಂಭಿಸಿದೆ. ಸಮಕಾಲೀನ ಫ್ಯಾಶನ್ ಉದ್ಯಮದಲ್ಲಿ ಸರ್ವೋದಯ ಬ್ರಾಂಡ್ ಖಾದಿ ಜೀನ್ಸ್ ಸ್ಥಾನವನ್ನು ಪಡೆದುಕೊಂಡಿದೆ.

ಖಾದಿಯನ್ನು ಗಾಂಧಿಯ ಭಾಷೆಯಲ್ಲಿ ಪರಿಚಯಿಸುವುದನ್ನು ನಿಲ್ಲಿಸಿ, ಆಧುನಿಕ ಭಾಷೆಯಲ್ಲಿ ಪರಿಚಯಿಸುವ ಹೊಸ ಪ್ರಯತ್ನವೊಂದಕ್ಕೆ ಭಾರತ ತೆರೆದುಕೊಳ್ಳಬೇಕಾಗಿದೆ. ಬುದ್ಧಿಜೀವಿಗಳ ವಲಯದಿಂದ ಅದನ್ನು ಶ್ರೀಸಾಮಾನ್ಯರ ದೈನಂದಿನ ಬದುಕಿಗೆ ವರ್ಗಾಯಿಸಬೇಕು. ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಖಾದಿ ಹೊಸ ವಿನ್ಯಾಸಗಳನ್ನು ಪಡೆದುಕೊಳ್ಳಬೇಕು. ಇತರ ಬಟ್ಟೆ ಉದ್ಯಮಿಗಳು ಅನುಸರಿಸುತ್ತಿರುವ ವಿನ್ಯಾಸಗಳಿಗೆ ಖಾದಿ ಸ್ಪರ್ಧೆಯನ್ನು ಒಡ್ಡಲು ಕಲಿಯಬೇಕು. ಆಗ ಮಾತ್ರ ಅದು ಗ್ರಾಮೀಣ ಭಾರತದ ಆರ್ಥಿಕತೆಗೆ ನೆರವಾಗುವ ಮಟ್ಟಕ್ಕೆ ಬೆಳೆಯಬಹುದು. ನಿರುದ್ಯೋಗಕ್ಕೆ ಕಡಿವಾಣ ಹಾಕಲು, ಬಡತನವನ್ನು ತೊಲಗಿಸಲು ಹಾಗೂ ಅಗಾಧವಾದ ಕೈಗಾರಿಕಾ ತ್ಯಾಜ್ಯದಿಂದ ಜಲಸಂಪನ್ಮೂಲಗಳನ್ನು ರಕ್ಷಿಸಲು ಖಾದಿಯು ಅತ್ಯಂತ ಶಕ್ತಿ ಶಾಲಿಯಾದ ಅಸ್ತ್ರವಾಗಿದೆ ಎನ್ನುವುದನ್ನು ಮನಗಂಡು, ಈ ಉದ್ಯಮಕ್ಕೆ ಪುನರುಜ್ಜೀವ ನೀಡುವ ಕೆಲಸ ನಡೆಯಬೇಕಾಗಿದೆ. ಆದರೆ ಅಂತಹ ದೂರದೃಷ್ಟಿಯುಳ್ಳ ಮುತ್ಸದ್ದಿಗಳು ಸದ್ಯ ಸರಕಾರದಲ್ಲಿಲ್ಲ. ಬರೇ ಮೋದಿ ಭಾಷಣಗಳಿಂದ ಇವುಗಳನ್ನು ಸಾಧಿಸುವುದು ಸಾಧ್ಯವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News