ವಯಸ್ಸು ಬಚ್ಚಿಟ್ಟ ವಿಚಾರ ಸ್ವಯಂ ಬಹಿರಂಗಪಡಿಸುವ ಆಟಗಾರರಿಗೆ ಕ್ಷಮಾದಾನ: ಬಿಸಿಸಿಐ

Update: 2020-08-03 18:19 GMT

ಹೊಸದಿಲ್ಲಿ, ಆ.3: ವಯಸ್ಸು ಬಚ್ಚಿಟ್ಟ ವಿಚಾರವನ್ನು ಸ್ವಯಂ ಪ್ರೇರಣೆಯಿಂದ ಘೋಷಿಸಿಕೊಳ್ಳುವ ನೋಂದಾಯಿತ ಆಟಗಾರರಿಗೆ ಕ್ಷಮಾದಾನ ನೀಡುವುದಾಗಿ ಬಿಸಿಸಿಐ ಸೋಮವಾರ ಘೋಷಿಸಿದೆ. ಆದರೆ, ನಿಯಮ ಉಲ್ಲಂಘಿಸಿರುವುದು ಕಂಡುಬಂದಲ್ಲಿ ಅವರನ್ನು ಎರಡು ವರ್ಷ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. 2020-21ರ ಋತುವಿನ ಬಳಿಕ ಬಿಸಿಸಿಐನ ವಯೋಮಾನ ವಿಭಾಗದ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲಿರುವ ಎಲ್ಲ ಕ್ರಿಕೆಟಿಗರಿಗೆ ಈ ಮಾನದಂಡ ಅನ್ವಯಿಸುತ್ತದೆ. ಈ ಯೋಜನೆಯಡಿಯಲ್ಲಿ ಈ ಹಿಂದೆ ನಕಲಿ ಅಥವಾ ತಿರುಚಿದ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಜನ್ಮ ದಿನಾಂಕವನ್ನು ಕುಶಲತೆಯಿಂದ ನಿರ್ವಹಿಸಿದ್ದೇವೆ ಎಂದು ಸ್ವಯಂಪ್ರೇರಣೆಯಿಂದ ಘೋಷಿಸಿಕೊಳ್ಳುವ ಆಟಗಾರರನ್ನು ಅಮಾನತುಗೊಳಿಸಲಾಗುವುದಿಲ್ಲ. ಅವರು ತಮ್ಮ ನಿಜವಾದ ಜನ್ಮದಿನಾಂಕವನ್ನು ಬಹಿರಂಗಪಡಿಸಿದರೆ ಸೂಕ್ತ ವಯೋಮಾನದ ಪಂದ್ಯಾವಳಿಗಳಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಆಟಗಾರರು ಸಹಿ ಮಾಡಿದ ಪತ್ರ ಹಾಗೂ ಇ-ಮೇಲ್ ಜೊತೆಗೆ ಪೂರಕ ದಾಖಲೆಗಳನ್ನು ಬಿಸಿಸಿಐನ ವಯಸ್ಸು ಪರಿಶೀಲನಾ ಇಲಾಖೆಗೆ ಸಲ್ಲಿಸಬೇಕು. 2020ರ ಸೆಪ್ಟಂಬರ್ 15ರ ಮೊದಲು ಅವರ ನಿಜವಾದ ಜನ್ಮ ದಿನಾಂಕವನ್ನು ಬಹಿರಂಗಪಡಿಸಲಾಗುತ್ತದೆ.

ಆಟಗಾರರು ಈಗ ತಮ್ಮ ತಪ್ಪನ್ನು ಒಪ್ಪಿಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ವಯಸ್ಸಿನ ವಂಚನೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಆದಾಗ್ಯೂ ನೋಂದಾಯಿತ ಆಟಗಾರರು ಸತ್ಯವನ್ನು ಬಹಿರಂಗ ಪಡಿಸದಿದ್ದರೆ ಬಿಸಿಸಿಐಯಿಂದ ನಕಲಿ, ತಿರುಚಿದ ಜನ್ಮ ದಿನಾಂಕದ ಪ್ರೂಫ್ ದಾಖಲೆಗಳನ್ನು ಸಲ್ಲಿಸಿರುವುದು ಕಂಡುಬಂದರೆ, ನಂತರ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗುವುದು.ಎರಡು ವರ್ಷಗಳ ಅಮಾನತು ಅವಧಿ ಪೂರ್ಣಗೊಂಡ ಬಳಿಕ ಬಿಸಿಸಿಐ ಹಾಗೂ ರಾಜ್ಯ ಘಟಕಗಳು ಆಯೋಜಿಸುವ ವಯೋಮಾನದ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯ ಮುಖ್ಯಸ್ಥ ರಾಹುಲ್ ದ್ರಾವಿಡ್ ವಯಸ್ಸಿನ ವಂಚನೆಯ ವಿಚಾರವನ್ನು ಕಟ್ಟುನಿಟ್ಟಾಗಿ ನಿಭಾಯಿಸಲು ಒತ್ತು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News