​ಬೈರೂತ್ ನಲ್ಲಿ ಸ್ಫೋಟ : ಭಾರಿ ಸಾವು ನೋವು, ಸಾವಿರಾರು ಮಂದಿಗೆ ಗಾಯ

Update: 2020-08-05 04:07 GMT

ಬೈರೂತ್ : ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 70 ಮಂದಿ ಬಲಿಯಾಗಿದ್ದು, ಮೂರು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನೂ ಬಹಳಷ್ಟು ಮೃತದೇಹಗಳು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿವೆ.

ರಿಕ್ಟರ್ ಮಾಪಕದಲ್ಲಿ 3.5ರ ತೀವ್ರತೆಯ ಭೂಕಂಪಕ್ಕೆ ಸಮವಾದ ಶಕ್ತಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಜರ್ಮನಿಯ ಭೂ ವಿಜ್ಞಾನಗಳ ಸಂಸ್ಥೆ ಜಿಎಫ್‌ಝೆಡ್ ಹೇಳಿದೆ. ಮೆಡಿಟರೇನಿಯನ್ ಸಮುದ್ರದಾಚೆ ಸೈಪ್ರಸ್‌ನಲ್ಲಿ ಕೂಡಾ ಅಂದರೆ 200 ಕಿಲೋಮೀಟರ್ ದೂರದವರೆಗೂ ಸದ್ದು ಕೇಳಿಸಿದ್ದು, ಸ್ಫೋಟದ ಅನುಭವವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭೀಕರ ಸ್ಫೋಟದಿಂದ ಈ ಬಂದರು ನಗರ ಧ್ವಂಸವಾಗಿದ್ದು, ಲಕ್ಷಾಂತರ ಕಟ್ಟಡಗಳು ಹಾನಿಗೀಡಾಗಿವೆ. ದಟ್ಟ ಹೊಗೆಯ ಕಾರ್ಮೋಡ ಇಡೀ ಪ್ರದೇಶದಲ್ಲಿ ವ್ಯಾಪಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕ ಹಾಗೂ ಆರ್ಥಿಕ ಸಂಕಷ್ಟದಿಂದ ಈಗಾಗಲೇ ನಲುಗಿರುವ ದೇಶಕ್ಕೆ ಮತ್ತೊಂದು ಬಲವಾದ ಹೊಡೆತ ಬಿದ್ದಂತಾಗಿದೆ. ಹಲವು ಗಂಟೆಗಳ ಕಾಲ ಆ್ಯಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ದೇಶದ ಉದ್ದಗಲಕ್ಕೂ ಆಸ್ಪತ್ರೆಗಳಿಗೆ ಕರೆದೊಯ್ಯುವ ದೃಶ್ಯ ಕಂಡುಬಂತು. ಎಲ್ಲ ಆಸ್ಪತ್ರೆಗಳು ಭರ್ತಿಯಾಗಿದ್ದು, ರಕ್ತದ ಸರಬರಾಜಿಗೆ ಮೊರೆ ಇಡುತ್ತಿವೆ.

ಸ್ಫೋಟ ಸಂಭವಿಸಿದ ಬಂದರು ಸುತ್ತಮುತ್ತ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ರಕ್ತಸಿಕ್ತ ದೇಹಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮಗುಚಿ ಬಿದ್ದ ಕಾರುಗಳು ಹಾಗೂ ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡ ಶವಗಳು ಘಟನೆಯ ತೀವ್ರತೆಗೆ ಸಾಕ್ಷಿಯಾಗಿವೆ. ಕಿಟಕಿ ಬಾಗಿಲುಗಳು ಕಿಲೋಮೀಟರ್‌ಗಳಷ್ಟು ದೂರಕ್ಕೆ ಹಾರಿದ್ದು, ಧಗಧಗನೆ ಉರಿಯುತ್ತಿರುವ ಬಂದರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್‌ಗಳು ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿವೆ.

ಸ್ಫೋಟಕ್ಕೆ ನಿಖರ ಕಾರಣ ತಿಳಿದಿಲ್ಲವಾದರೂ, ಆರಂಭಿಕ ವರದಿಗಳ ಪ್ರಕಾರ ಬಂದರಿನ ಉಗ್ರಾಣವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತ ಇದಕ್ಕೆ ಕಾರಣ ಎನ್ನಲಾಗಿದೆ. ಕೆಲ ಸಮಯದ ಹಿಂದೆ ಹಡಗೊಂದರಿಂದ ವಶಪಡಿಸಿಕೊಂಡು ದಾಸ್ತಾನು ಮಾಡಲಾಗಿದ್ದ ಸ್ಫೋಟಕ ಸಾಮಗ್ರಿಗಳಿಂದಾಗಿ ಈ ಭೀಕರ ಅನಾಹುತ ಸಂಭವಿಸಿರಬಹುದು ಎಂದು ಲೆಬನೀಸ್ ಜನರಲ್ ಸೆಕ್ಯುರಿಟಿ ಮುಖ್ಯಸ್ಥ ಅಬ್ಬಾಸ್ ಇಬ್ರಾಹಿಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News