ಕೊರೋನ ಹೆಚ್ಚಲು ಸರಕಾರವೇ ಕಾರಣ: ಗುಜರಾತ್ ಸರಕಾರಕ್ಕೆ ಹೈಕೋರ್ಟ್ ತರಾಟೆ

Update: 2020-08-05 17:22 GMT

ಗಾಂಧೀನಗರ, ಆ.5: ಸೂರತ್ ನಗರದಲ್ಲಿ ಕೊರೋನ ಸೋಂಕಿನಿಂದಾಗಿ ಪರಿಸ್ಥಿತಿ ಅತ್ಯಂತ ಕೆಟ್ಟ ಸ್ಥಿತಿಗೆ ಕುಸಿಯಲು ಕಾರಣ ವಿವರಿಸುವಂತೆ ಗುಜರಾತ್ ಹೈಕೋರ್ಟ್ ರಾಜ್ಯ ಸರಕಾರ ಮತ್ತು ಸೂರತ್ ನಗರಪಾಲಿಕೆಗೆ ಸೂಚಿಸಿದ್ದು , ಕೊರೋನ ಸಮಸ್ಯೆ ನಿರ್ವಹಣೆಯಲ್ಲಿ ಅಧಿಕಾರಿಗಳು ತೋರಿದ ವಿಳಂಬ ಧೋರಣೆ ಈಗಿನ ಬಿಕ್ಕಟ್ಟಿಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದೆ.

ಕಳೆದ ಒಂದು ತಿಂಗಳಿನಿಂದ ಸೂರತ್ ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು ಪ್ರಕರಣ ವರದಿಯಾಗುತ್ತಿರುವ ಬಗ್ಗೆ ಆತಂಕ ಸೂಚಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್‌ನ ವಿಭಾಗೀಯ ಪೀಠ, ಪರಿಸ್ಥಿತಿಯನ್ನು ಸ್ಥಳೀಯ ಆಡಳಿತ ಸೂಕ್ತವಾಗಿ ನಿಭಾಯಿಸಿಲ್ಲ ಎಂದು ಅತೃಪ್ತಿ ಸೂಚಿಸಿದೆ.

ರಾಜ್ಯ ಸರಕಾರ ಹಾಗೂ ಸ್ಥಳೀಯಾಡಳಿತದ ವಿಳಂಬಿತ ಪ್ರತಿಕ್ರಿಯೆ ಸೂರತ್‌ನಲ್ಲಿ ಪರಿಸ್ಥಿತಿ ಹದಗೆಡಲು ಮುಖ್ಯ ಕಾರಣವಾಗಿದೆ. ಸೂರತ್‌ನಲ್ಲಿ ಕೆಲವೇ ದಿನಗಳಲ್ಲಿ ಸೋಂಕಿನ ಪ್ರಮಾಣ ಉಲ್ಬಣಿಸಲಿದೆ ಎಂಬುದು ರಾಜ್ಯ ಸರಕಾರದ ಆರೋಗ್ಯ ಇಲಾಖೆಗೆ ತಿಳಿದಿದ್ದರೂ ಈ ಬಗ್ಗೆ ನಿರ್ಲಕ್ಷ ತೋರಲಾಗಿದೆ. ಸೋಂಕು ಪರೀಕ್ಷೆಯ ಪ್ರಮಾಣವನ್ನು ಕೂಡಾ ಹೆಚ್ಚಿಸಿಲ್ಲ. ರಾಜ್ಯಕ್ಕೆ ಸುಮಾರು 18 ಲಕ್ಷ ವಲಸೆ ಕಾರ್ಮಿಕರು ಮರಳಿ ಬಂದಿದ್ದು, ರಾಜ್ಯದಲ್ಲಿ ದಾಖಲಾಗುವ ಐದು ಸೋಂಕು ಪ್ರಕರಣಗಳಲ್ಲಿ ಒಂದು ಸೂರತ್‌ನಲ್ಲಿ ವರದಿಯಾಗುತ್ತಿದೆ. ಸೂರತ್‌ನಲ್ಲಿ ಮರಣದ ಪ್ರಮಾಣವೂ ಅತ್ಯಧಿಕವಾಗಿದೆ. ಇದು ಸಂಪೂರ್ಣ ದಕ್ಷಿಣ ಗುಜರಾತ್‌ನ ಮೇಲೆ , ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಮೇಲೆ ಪರಿಣಾಮ ಬೀರಿದೆ ಎಂದು ಹೈಕೋರ್ಟ್ ಹೇಳಿದೆ.

ಸೋಂಕು ಹರಡದಂತೆ ನಿಯಂತ್ರಿಸುವಲ್ಲಿ ಅಹ್ಮದಾಬಾದ್ ಉತ್ತಮ ಸಾಧನೆ ತೋರಿದೆ. ಜುಲೈ 24ರ ವೇಳೆಗೆ ಅಹ್ಮದಾಬಾದ್‌ನಲ್ಲಿ ಸೋಂಕಿನ ಪ್ರಮಾಣ 65% ದಿಂದ 42.2%ಕ್ಕೆ ಇಳಿದಿದೆ. ಆದರೆ, ಇದೇ ಸಂದರ್ಭ ಸೂರತ್‌ನಲ್ಲಿ ಸೋಂಕಿತರ ಪ್ರಮಾಣ 14.5%ದಿಂದ 28.8%ಕ್ಕೆ ಹೆಚ್ಚಿದೆ. ಈ ಅಂಶವನ್ನು ನಿರ್ಲಕ್ಷಿಸಬಾರದು ಎಂದು ಸೂರತ್ ಆಡಳಿತಕ್ಕೆ ಎಚ್ಚರಿಕೆ ನೀಡಿದೆ.

ಸೂರತ್‌ನಲ್ಲಿ ಆರೋಗ್ಯ ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮ, ಕೋವಿಡ್ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ವಿವರ, ಐಸೊಲೇಷನ್ ಬೆಡ್ ಹಾಗೂ ಇತರ ವಿಷಮ ಸ್ಥಿತಿಯ ಆರೋಗ್ಯ ಸೌಲಭ್ಯದ ವಿವರ, ಆಸ್ಪತ್ರೆಗಳ ದರ ನಿಯಂತ್ರಣ, ಬಡ ರೋಗಿಗಳಿಗೆ ಲಭ್ಯವಿರುವ ಬೆಡ್‌ಗಳ ಸಂಖ್ಯೆ, ಆಸ್ಪತ್ರೆಯಲ್ಲಿರುವ ಸಕ್ರಿಯ ಪ್ರಕರಣದ ರೋಗಿಗಳು, ಕೋವಿಡ್ ಕೇರ್ ಕೇಂದ್ರಗಳು, ಹೋಮ್ ಐಸೊಲೇಷನ್ ವಿವರ, ಕೋವಿಡ್ ಮರಣ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ತಕ್ಷಣ ವರದಿ ನೀಡುವಂತೆ ರಾಜ್ಯಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಅಲ್ಲದೆ, ಸೂರತ್‌ನ ವಜ್ರ ಹಾಗೂ ಜವಳಿ ಉದ್ದಿಮೆಗಳಲ್ಲಿರುವ ಕೆಲಸಗಾರರ ಸುರಕ್ಷತೆಗೆ ಕೈಗೊಂಡಿರುವ ಕ್ರಮ , ರಾಜ್ಯದ ಇತರೆಡೆ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮವನ್ನೂ ವಿವರಿಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News