ಹೊಟೇಲ್ ಮಾಲಕನೇ ಬೇರೆ ಹೊಟೇಲಿಗೆ ಹೋಗಿ ಉಂಡರೆ?

Update: 2020-08-06 06:21 GMT

 ‘‘ಹೊಟೇಲೊಂದರಲ್ಲಿ ಭರ್ಜರಿ ವ್ಯಾಪಾರ. ಆದರೆ ಹೊಟೇಲ್‌ನ ಮಾಲಕ ಮಾತ್ರ ಊಟ ಮಾಡುವುದು ತುಸು ದೂರದಲ್ಲಿರುವ ಇನ್ನೊಂದು ಐಶಾರಾಮಿ ಹೊಟೇಲ್‌ನಲ್ಲಿ. ತನ್ನ ಹೊಟೇಲ್‌ನಲ್ಲಿ ಊಟ ಮಾಡಿ, ಆರೋಗ್ಯ ಕೆಡಿಸಿಕೊಳ್ಳಲು ಆ ಮಾಲಕ ಸಿದ್ಧನಿರಲಿಲ್ಲ’’. ಇದು ನಮ್ಮನ್ನಾಳುವ ನಾಯಕರ ಕತೆಯೂ ಕೂಡ. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕೊರೋನ ಸೋಂಕಿತರಾದರು. ಈ ದೇಶದ ಗೃಹ ಸಚಿವರಾದ ಅಮಿತ್ ಶಾ ಕ್ವಾರಂಟೈನ್‌ನಲ್ಲಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ನಾಯಕರು ಅದೆಷ್ಟೇ ಜಾಗರೂಕರಾಗಿದ್ದರೂ, ಕೊರೋನದಂತಹ ಸಾಂಕ್ರಾಮಿಕ ಸೋಂಕಿನಿಂದ ಪಾರಾಗುವುದು ಕಷ್ಟ. ಆದುದರಿಂದ, ಅವರು ಕೊರೋನ ಸೋಂಕಿತರಾದುದನ್ನೇ ಅಪರಾಧ ಎಂದು ಬಿಂಬಿಸಿ ವ್ಯಂಗ್ಯವಾಡುವುದು ಯಾವ ರೀತಿಯಲ್ಲೂ ಮಾನವೀಯವಲ್ಲ. ಕೊರೋನ ವೈರಸ್ ಮನುಷ್ಯನಂತೆ ಮೇಲು-ಕೀಳು, ಹಣವಂತ-ಬಡವ ಎಂದು ನೋಡುವುದಿಲ್ಲ. ಅದು ಎಲ್ಲರನ್ನೂ ಸಮಾನವಾಗಿ ಭಾವಿಸುತ್ತದೆ. ಹೆಚ್ಚು ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನಾಯಕರಿಗೆ ಈ ಸೋಂಕು ಬೇಗ ತಗಲಬಹುದು. ಕೊರೋನ ಸೋಂಕಿಗೆ ಹೆದರಿ, ರಾಜಕೀಯ ನಾಯಕರು ಮನೆಯಲ್ಲಿ ಬಚ್ಚಿಟ್ಟುಕೊಳ್ಳುವುದು ಸರಿಯೂ ಅಲ್ಲ. ಆದರೆ ಇಲ್ಲಿ ಟೀಕೆಗೆ ಕಾರಣವಾದುದು ಆನಂತರದ ಬೆಳವಣಿಗೆಗಳು. ಸೋಂಕಿಗೊಳಗಾಗಿರುವ ಎಲ್ಲ ರಾಜಕೀಯ ನಾಯಕರು ಸರಕಾರಿ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಆಗುವ ಬದಲು, ಖಾಸಗಿ ಆಸ್ಪತ್ರೆಗಳನ್ನು ಆರಿಸಿಕೊಂಡಿದ್ದಾರೆ. ಕೊರೋನ ಕ್ವಾರಂಟೈನ್‌ಗೆ ಖಾಸಗಿ ಆಸ್ಪತ್ರೆಗಳು ತೆರೆದುಕೊಂಡದ್ದೇ ಇತ್ತೀಚೆಗೆ. ಕೊರೋನ ಸಾಂಕ್ರಾಮಿಕ ರೋಗವಾಗಿರುವುದರಿಂದ ಹಣವುಳ್ಳವರಿಗೂ, ಇಲ್ಲದವರಿಗೂ ಸಮಾನ ಚಿಕಿತ್ಸೆ, ಉಪಚಾರಗಳು ದೊರಕಬೇಕು ಎನ್ನುವುದು ಸದ್ಯದ ಆಗ್ರಹವಾಗಿದೆ. ಶ್ರೀಮಂತರು ಗುಣಮುಖರಾಗಿ, ಬಡವರು ಈ ರೋಗವನ್ನು ಅಂಟಿಸಿಕೊಂಡು ಓಡಾಡುವುದರಿಂದ ದೇಶ ಕೊರೋನ ಮುಕ್ತವಾಗಲು ಸಾಧ್ಯವಿಲ್ಲ. ಬಡವನ ಮನೆಗೆ ಕೊರೋನ ಬಂದರೆ, ಅದು ಯಾವ ರೂಪದಲ್ಲಾದರೂ ನೆರೆಯ ಶ್ರೀಮಂತನ ಮನೆಬಾಗಿಲನ್ನು ತಟ್ಟಿಯೇ ತಟ್ಟುತ್ತದೆ. ಆದುದರಿಂದ ಕೊರೋನ ಚಿಕಿತ್ಸೆ ಅಥವಾ ಕ್ವಾರಂಟೈನ್ ಉಳ್ಳವರಿಗೂ, ಇಲ್ಲದವರಿಗೂ ಸಮಾನವಾಗಿ ದೊರಕಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ಹಲವು ತಜ್ಞರು ಸರಕಾರದ ಮುಂದಿಟ್ಟಿದ್ದಾರೆ. ಆದರೆ ಕೊರೋನ ಚಿಕಿತ್ಸೆಯಲ್ಲಿ ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವ್ಯತ್ಯಾಸವಿದೆ ಎನ್ನುವುದನ್ನು ನಮ್ಮ ಕೊರೋನ ಪಾಸಿಟಿವ್ ರಾಜಕೀಯ ನಾಯಕರೇ ಜಾಹೀರುಗೊಳಿಸಿದ್ದಾರೆ.

ಕೊರೋನ ಸೋಂಕಿತ ರಾಜಕೀಯ ನಾಯಕರೂ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯವಾಗಿತ್ತು. ಈ ಮೂಲಕ, ಸರಕಾರಿ ಆಸ್ಪತ್ರೆಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿದಂತಾಗುತ್ತಿತ್ತು ಮಾತ್ರವಲ್ಲ, ರಾಜಕೀಯ ನಾಯಕರು ಕ್ವಾರಂಟೈನ್‌ಗಾಗಿ ಆಗಮಿಸುತ್ತಾರೆ ಎನ್ನುವ ಕಾರಣಕ್ಕಾದರೂ ಈ ಆಸ್ಪತ್ರೆಗಳಲ್ಲಿರುವ ಅವ್ಯವಸ್ಥೆಗಳು ಒಂದಿಷ್ಟು ಕಡಿಮೆಯಾಗುತ್ತಿದ್ದವು. ‘ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲವೂ ಸರಿಯಾಗಿದೆ’ ಎಂದು ಪದೇ ಪದೇ ಹೇಳಿಕೆ ನೀಡುವ ಸಚಿವರು, ತಾವು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದೆಂದರೆ, ಹೊಟೇಲ್ ಮಾಲಕನೊಬ್ಬ , ಹಸಿವಾದಾಗ ಇನ್ನೊಂದು ಹೊಟೇಲಲ್ಲಿ ಊಟ ಮಾಡಿದಂತೆ. ಆ ಮೂಲಕ, ತನ್ನ ಹೊಟೇಲಿನ ಊಟ ಸರಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ. ಕೊರೋನ ಆಗಮಿಸಿದ ಬಳಿಕ ಸರಕಾರಿ ಆಸ್ಪತ್ರೆಗಳಲ್ಲಿ ಬೇರೆ ರೋಗಗಳಿಗಾಗಿ ಜನರು ಚಿಕಿತ್ಸೆಗೆ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ. ಇತರ ರೋಗಿಗಳು ಮತ್ತು ಕೊರೋನ ಸೋಂಕಿತರು ಜೊತೆ ಜೊತೆಯಾಗಿಯೇ ವಾಸ ಮಾಡುವ ಸ್ಥಿತಿ ಸರಕಾರಿ ಆಸ್ಪತ್ರೆಗಳಲ್ಲಿವೆ ಎನ್ನುವ ಗಂಭೀರ ಆರೋಪಗಳು ಈಗಾಗಲೇ ಮಾಧ್ಯಮಗಳಲ್ಲಿ ಕೇಳಿ ಬಂದಿವೆ. ಕೊರೋನ ವ್ಯಾಪಕವಾಗಿ ಹರಡಲು ಆಸ್ಪತ್ರೆಗಳಲ್ಲಿನ ಈ ಅವ್ಯವಸ್ಥೆಗಳೂ ಕಾರಣ ಎಂದು ಜನರು ಈಗಾಗಲೇ ಆರೋಪಿಸಿದ್ದಾರೆ. ಇದೀಗ, ಕೊರೋನ ಸೋಂಕಿತ ನಾಯಕರೇ ಸರಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆಯಿಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದು, ಆರೋಪಗಳಿಗೆ ಇನ್ನಷ್ಟು ಪುಷ್ಟಿಯನ್ನು ನೀಡಿದೆ.

ಹಿಂದೊಮ್ಮೆ ನ್ಯಾಯಾಲಯವು, ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಯಾಕೆ ಓದಿಸಬಾರದು? ಎನ್ನುವ ಪ್ರಶ್ನೆಯನ್ನು ಕೇಳಿತ್ತು. ಈ ಪ್ರಶ್ನೆಯನ್ನು ಇನ್ನಷ್ಟು ಜೋರು ದನಿಯಲ್ಲಿ ಕೇಳಬೇಕಾದ ಸಮಯ ಬಂದಿದೆ. ಜನಪ್ರತಿನಿಧಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಎಲ್ಲ ಸರಕಾರಿ ನೌಕರರು ಕಡ್ಡಾಯವಾಗಿ ಸರಕಾರಿ ಶಾಲೆಗಳು, ಸರಕಾರಿ ಆಸ್ಪತ್ರೆಗಳನ್ನು ಬಳಸುವಂತಾದಾಗ ಮಾತ್ರ, ಸರಕಾರಿ ಸಂಸ್ಥೆಗಳು ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ತಮ್ಮ ಮಕ್ಕಳು ಸರಕಾರಿ ಶಾಲೆಗಳಲ್ಲೇ ಓದಬೇಕು ಎನ್ನುವುದು ಅನಿವಾರ್ಯವಾದಾಗ, ಈ ರಾಜಕಾರಣಿಗಳು ತಮ್ಮ ಮಕ್ಕಳ ಮೇಲಿನ ಹಿತದೃಷ್ಟಿಯಿಂದಲಾದರೂ ಈ ಶಾಲೆಗಳ ಬಗ್ಗೆ ಗಮನ ನೀಡಬಹುದು. ದುರಂತವೆಂದರೆ, ಸರಕಾರಿ ಶಾಲೆಗಳಲ್ಲಿ ದುಡಿಯುವ ಶಿಕ್ಷಕ ಕೂಡ ತನ್ನ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಾನೆ. ಆತ ಅವರನ್ನು ಗುಟ್ಟಾಗಿ ಅಥವಾ ಬಹಿರಂಗವಾಗಿ ಖಾಸಗಿ ಶಾಲೆಗಳಿಗೇ ಸೇರಿಸುತ್ತಾನೆ. ಇಂದು ನಮಗೆ ಸರಕಾರದ ಉದ್ಯೋಗಗಳು ಬೇಕು. ಸವಲತ್ತುಗಳು ಬೇಕು. ಸರಕಾರದೊಳಗಿರುವ ಪ್ರಮುಖ ಅಧಿಕಾರಗಳು ಬೇಕು. ಆದರೆ ತಾವೇ ನಡೆಸುವ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಷ್ಟು ನೈತಿಕತೆ ನಮ್ಮನ್ನಾಳುವವರಿಗಿಲ್ಲವಾಗಿದೆ. ಸರಕಾರಿ ಆಸ್ಪತ್ರೆಗಳು ಮತ್ತು ಸರಕಾರಿ ಶಾಲೆಗಳ ಕುರಿತಂತೆ ಜನಪ್ರತಿನಿಧಿಗಳು ಗಮನ ಹರಿಸುವುದಕ್ಕೆ ಇರುವ ಒಂದೇ ದಾರಿಯೆಂದರೆ ಅವರು ತಮ್ಮ ಚಿಕಿತ್ಸೆಯನ್ನು ಸರಕಾರಿ ಆಸ್ಪತ್ರೆಗಳಲ್ಲೇ ಪಡೆಯುವುದನ್ನು ಅನಿವಾರ್ಯಗೊಳಿಸುವುದು. ಜೊತೆಗೆ ಅವರೂ, ಅವರ ಕುಟುಂಬಸ್ಥರ ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲೇ ಕಲಿಯಬೇಕು ಎನ್ನುವ ಕಾನೂನನ್ನು ರೂಪಿಸಬೇಕು. ಇದರಿಂದ ಎರಡು ಲಾಭಗಳಿವೆ. ಒಂದು, ಸರಕಾರಿ ಆಸ್ಪತ್ರೆಗಳು ಮತ್ತು ಶಾಲೆಗಳ ಕುರಿತಂತೆ ನಮ್ಮ ಜನನಾಯಕರು ವಿಶೇಷ ಕಾಳಜಿಯನ್ನು ವಹಿಸತೊಡಗುತ್ತಾರೆ. ಇಲ್ಲಿ ನಡೆಯುವ ಅವ್ಯವಹಾರಗಳು ವ್ಯಾಪಕವಾಗಿ ಕಡಿಮೆಯಾಗುತ್ತವೆ. ಎರಡನೆಯ ಲಾಭ, ಸರಕಾರಿ ಶಾಲೆ, ಆಸ್ಪತ್ರೆಗಳನ್ನು ಅನಿವಾರ್ಯ ಮಾಡಿದಂತೆ, ಹಣವುಳ್ಳವರು ರಾಜಕೀಯ ಕ್ಷೇತ್ರಗಳಿಗೆ ಆಗಮಿಸುವುದಕ್ಕೆ ಹಿಂದೆಮುಂದೆ ನೋಡುವಂತಾಗುತ್ತದೆ. ದೇಶದ ಮೇಲೆ ಒಂದಿಷ್ಟು ಬದ್ಧತೆಯಿರುವವರು ರಾಜಕೀಯಕ್ಕೆ ಆಗಮಿಸುವುದಕ್ಕೆ ಇದು ಅವಕಾಶಗಳನ್ನು ತೆರೆದುಕೊಡಬಹುದು. ಈ ನಿಟ್ಟಿನಲ್ಲಿ ಕಾನೂನನ್ನು ರೂಪಿಸುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗಿದೆ. ಒಂದು ವೇಳೆ ಇದಕ್ಕೆ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದಾದರೆ, ‘ತಮ್ಮದೇ ಹೊಟೇಲಲ್ಲಿ ಉಣ್ಣುವುದಕ್ಕೆ ನಿಮಗಿರುವ ಅಭ್ಯಂತರವೇನು? ತಮ್ಮದೇ ಹೊಟೇಲುಗಳಿರುವಾಗ ಬೇರೆ ಐಶಾರಾಮಿ ಹೊಟೇಲಲ್ಲಿ ಉಣ್ಣುವುದರ ಉದ್ದೇಶವೇನು?’ ಎಂದು ಜನಸಾಮಾನ್ಯರು ಬೀದಿಗಿಳಿದು ಕೇಳುವ ಸ್ಥಿತಿ ನಿರ್ಮಾಣವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News