ಬೈರೂತ್ ಸ್ಫೋಟ: ಮೃತರ ಸಂಖ್ಯೆ 137ಕ್ಕೆ ಏರಿಕೆ

Update: 2020-08-06 16:23 GMT

ಬೈರೂತ್ (ಲೆಬನಾನ್), ಆ. 6: ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 137ಕ್ಕೇರಿದೆ. ಅದೇ ವೇಳೆ, ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಹಾಗೂ ಕನಿಷ್ಠ 5,000 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ಗುರುವಾರ ತಿಳಿಸಿದರು.

ಈ ಸ್ಫೋಟವು ಬೈರೂತ್ ಬಂದರಿನ ಒಂದು ಭಾಗವನ್ನು ನಾಮಾವಶೇಷಗೊಳಿಸಿದೆ ಹಾಗೂ ನಗರದ ಹೃದಯ ಭಾಗದ ಬೃಹತ್ ಪ್ರದೇಶಕ್ಕೆ ಹಾನಿ ಮಾಡಿದೆ. ಒಟ್ಟಾರೆಯಾಗಿ, ಒಂದು ಕಾಲದಲ್ಲಿ ಮಧ್ಯಪ್ರಾಚ್ಯದ ಪ್ಯಾರಿಸ್ ಎಂಬುದಾಗಿ ಕರೆಯಲ್ಪಡುತ್ತಿದ್ದ ಬೈರೂತ್ ನಗರದ ಅರ್ಧ ಭಾಗವೇ ನಿರ್ನಾಮವಾಗಿದೆ.

ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

2,750 ಟನ್ ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ಸಂಗ್ರಹಿಸಿಡಲಾಗಿದ್ದ ಬೈರೂತ್‌ನ ಬಂದರು ಪ್ರದೇಶದಲ್ಲಿರುವ ಉಗ್ರಾಣವೊಂದರಲ್ಲಿ ಮಂಗಳವಾರ ರಾತ್ರಿ ಭೀಕರ ಸ್ಫೋಟ ಸಂಭವಿಸಿತ್ತು. ಈ ರಾಸಾಯನಿಕವನ್ನು ಯಾರು ಮತ್ತು ಯಾಕೆ ಸಂಗ್ರಹಿಸಿಟ್ಟಿದ್ದಾರೆ ಎಂಬ ಬಗ್ಗೆ ಪ್ರಶ್ನೆಗಳು ಈಗ ಎದ್ದಿವೆ. ಅದು ಹೇಗೆ ಸ್ಫೋಟಿಸಿತು ಎಂಬ ಬಗ್ಗೆಯೂ ಜನರು ಪ್ರಶ್ನಿಸುತ್ತಿದ್ದಾರೆ.

ಪುನರ್ನಿರ್ಮಾಣಕ್ಕೆ 15 ಬಿಲಿಯ ಡಾಲರ್ ಅಗತ್ಯ: ಬೈರೂತ್ ಗವರ್ನರ್

ಭೀಕರ ಸ್ಫೋಟದಿಂದಾಗಿ ನಗರಕ್ಕೆ ವ್ಯಾಪಕ ಹಾನಿಯಾಗಿದ್ದು, ಬೈರೂತ್ ಮತ್ತು ಅಲ್ಲಿನ ಜನರನ್ನು ಮರಳಿ ಹಳಿಗೆ ತರಲು 10 ಬಿಲಿಯ (ಸುಮಾರು 75,000 ಕೋಟಿ ರೂಪಾಯಿ)ದಿಂದ 15 ಬಿಲಿಯ ಡಾಲರ್ (ಸುಮಾರು 1.12 ಲಕ್ಷ ಕೋಟಿ ರೂಪಾಯಿ) ಹಣ ಬೇಕಾಗಬಹುದು ಎಂದು ಬೈರೂತ್ ನಗರದ ಗವರ್ನರ್ ಮರ್ವನ್ ಅಬ್ಬೂದ್ ಹೇಳಿದ್ದಾರೆ.

‘‘ನಗರದ ಬಂದರು ಪ್ರದೇಶದಲ್ಲಿ ಸಂಭವಿಸಿರುವ ಹಾನಿಯ ಅಂದಾಜನ್ನು ಮುಂದಿನ ದಿನಗಳಲ್ಲಿ ಇಂಜಿನಿಯರ್‌ಗಳು ಮತ್ತು ಪರಿಣತರ ತಂಡವೊಂದು ನಡೆಸಲಿದೆ’’ ಎಂದು ಅವರು ತಿಳಿಸಿದರು.

ಉತ್ತರದಾಯಿತ್ವ ನಿಗದಿಗೆ 4 ದಿನಗವಳ ಕಾಲಾವಕಾಶ: ವಿದೇಶ ಸಚಿವ

ಬೈರೂತ್ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ವಿನಾಶಕಾರಿ ಸ್ಫೋಟಕ್ಕೆ ಉತ್ತರದಾಯಿತ್ವವನ್ನು ನಿಗದಿಪಡಿಸಲು ಲೆಬನಾನ್ ಸರಕಾರವು ತನಿಖಾ ಸಮಿತಿಯೊಂದಕ್ಕೆ ನಾಲ್ಕು ದಿನಗಳ ಕಾಲಾವಕಾಶವನ್ನು ನೀಡಿದೆ ಎಂದು ವಿದೇಶ ಸಚಿವ ಚಾರ್ಬೆಲ್ ವಹಾಬಿ ಗುರುವಾರ ಫ್ರೆಂಚ್ ರೇಡಿಯೊಗೆ ತಿಳಿಸಿದ್ದಾರೆ.

‘‘ಸ್ಫೋಟದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ತನಿಖಾ ಸಮಿತಿಯೊಂದನ್ನು ರಚಿಸುವ ನಿರ್ಧಾರವೊಂದನ್ನು ಇಂದು ಬೆಳಗ್ಗೆ ತೆಗೆದುಕೊಳ್ಳಲಾಗಿದೆ. ಅದು ಗರಿಷ್ಠ ನಾಲ್ಕು ದಿನಗಳ ಕಾಲಾವಧಿಯಲ್ಲಿ- ಹೇಗೆ, ಯಾರು, ಏನು, ಎಲ್ಲಿ ಎಂಬ ಉತ್ತರದಾಯಿತ್ವ ನಿಗದಿಪಡಿಸುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಬಳಿಕ ಈ ಕುರಿತು ನ್ಯಾಯಾಂಗವು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ’’ ಎಂದು ಅವರು ‘ಯುರೋಪ್ 1’ ರೇಡಿಯೊಗೆ ಹೇಳಿದರು.

‘‘ಇದು ಗಂಭೀರ ವಿಷಯವಾಗಿದೆ ಹಾಗೂ ಈ ಭಯಾನಕ ಕ್ರಿಮಿನಲ್ ನಿರ್ಲಕ್ಷ್ಯದ ಜವಾಬ್ದಾರಿ ಹೊತ್ತವರನ್ನು ನ್ಯಾಯಾಧೀಶರ ಸಮಿತಿಯೊಂದು ಶಿಕ್ಷಿಸುವುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News