ಜಾತ್ಯತೀತತೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದು ಕಾಂಗ್ರೆಸ್, ಬಿಜೆಪಿಯಲ್ಲ

Update: 2020-08-07 12:53 GMT

ಭವಿಷ್ಯದ ಇತಿಹಾಸಕಾರ 5 ಆಗಸ್ಟ್ 2020ರ ದಿನವನ್ನು ಭಾರತದಲ್ಲಿ 'ಜಾತ್ಯತೀತತೆ ಸತ್ತು ಹೋದ ದಿನ' ಎಂದು ದಾಖಲಿಸಬಹುದು. ಇದನ್ನು ದಾಖಲಿಸುವಾಗ ರೋಗಿ ಸದಾ ಅನಾರೋಗ್ಯಪೀಡಿತರಾಗಿದ್ದರು ಮತ್ತು ಕಳೆದ ಮೂರು ದಶಕಗಳಿಂದ ಗಂಭೀರ ಸ್ಥಿತಿಯಲ್ಲಿದ್ದರು ಎಂದು ಆ ಇತಿಹಾಸಕಾರ ಖಂಡಿತ ಉಲ್ಲೇಖಿಸುತ್ತಾರೆ. ಈ ಸಾವಿಗೆ ಮೊದಲು ಜಾತ್ಯತೀತತೆಗೆ ಆರೆಸ್ಸೆಸ್, ಬಿಜೆಪಿ ಹಾಗೂ ಸಂಘಪರಿವಾರದಿಂದ ಬಿದ್ದ ಮಾರಕ ಪೆಟ್ಟುಗಳ ದಿನಾಂಕಗಳೂ ಅಲ್ಲಿ ನಮೂದಾಗಬಹುದು. ಆದರೆ ಜಾತ್ಯತೀತತೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದು ಬಿಜೆಪಿ ಅಲ್ಲ ಎಂಬುದೂ ಅದರಲ್ಲಿ ದಾಖಲಾಗಲಿದೆ.

ಆಗಸ್ಟ್ 5 ಜಾತ್ಯತೀತತೆಯ ಸಮಾಧಿಯ ದಿನ. ಇದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವೊಂದರ ಭೂಮಿ ಪೂಜೆ ನಡೆದಿದೆ ಎಂಬ ಕಾರಣಕ್ಕೆ ಅಲ್ಲ. ಯಾವುದೇ ದೇವಸ್ಥಾನ ಮಾತ್ರವಲ್ಲ ಗುರುದ್ವಾರ, ಚರ್ಚ್ ಅಥವಾ ಮಸೀದಿಯ ನಿರ್ಮಾಣ ಯಾವುದೇ ಜಾತ್ಯತೀತ ವ್ಯವಸ್ಥೆಯ ಮರಣ ಬಿಡಿ, ಸಂಕಟಕ್ಕೂ ಕಾರಣವಾಗಬಾರದು. ಒಂದು ಭವ್ಯ ಮಂದಿರ, ಅದೂ ಶ್ರೀ ರಾಮನಿಗಾಗಿ, ಅದರಲ್ಲೂ ಅಯೋಧ್ಯೆಯಲ್ಲಿ ನಿರ್ಮಾಣವಾಗುವುದು ಸಾಮಾನ್ಯವಾಗಿ ಗುರು ನಾನಕ್‌ರ ಜನ್ಮಸ್ಥಳದಲ್ಲಿ ಯಾತ್ರಿಕರಿಗಾಗಿ ಕಾರಿಡಾರ್ ನಿರ್ಮಾಣ ಮಾಡಿದಷ್ಟೇ ಸಂಭ್ರಮಕ್ಕೆ ಕಾರಣವಾಗಬೇಕು. ಹಾಗೆಯೇ, ಒಂದು ಧಾರ್ಮಿಕ ಸಮಾರಂಭವನ್ನು ಒಬ್ಬ ರಾಜಕಾರಣಿ ನೆರವೇರಿಸುವುದು ಜಾತ್ಯತೀತ ದೇಶದಲ್ಲಿ ಮಾದರಿ ಅಲ್ಲವಾದರೂ ಭಾರತದಲ್ಲಿ ಅದು ತೀರಾ ಅಸಾಮಾನ್ಯವೂ ಅಲ್ಲ.

ಆಗಸ್ಟ್ 5ಕ್ಕೆ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿ ಜಮ್ಮು ಕಾಶ್ಮೀರವನ್ನು ವಿಭಜಿಸಿ ಅದನ್ನು ನಗಣ್ಯವಾಗಿಸಿದ್ದಕ್ಕೆ ಒಂದು ವರ್ಷ. ಇದು ನಿಜವಾಗಿಯೂ ಜಾತ್ಯತೀತತೆಗೆ ತೀರಾ ಆತಂಕದ ವಿಷಯವಾಗಬೇಕು. ಅದು ಈ ದೇಶದ ಏಕೈಕ ಮುಸ್ಲಿಂ ಬಾಹುಳ್ಯದ ರಾಜ್ಯವಾಗಿತ್ತು ಎಂಬುದು ಇಲ್ಲಿ ಗಮನಾರ್ಹ. ಒಂದು ಹಿಂದೂ ಬಾಹುಳ್ಯವಿರುವ ರಾಜ್ಯವನ್ನು ರಾತ್ರೋರಾತ್ರಿ ಹೀಗೆ ಕತ್ತರಿಸಿ ಹಾಕಿ ಅದರ ಉನ್ನತ ರಾಜಕೀಯ ನಾಯಕರ ಸಹಿತ ಎಲ್ಲ ಜನಸಾಮಾನ್ಯರ ನಾಗರಿಕ ಹಕ್ಕುಗಳನ್ನು ಒಂದು ವರ್ಷ ಅಮಾನತಿನಲ್ಲಿಡುವುದನ್ನು ಊಹಿಸಲು ಸಾಧ್ಯವೇ ನಮಗೆ?, ಕಾಶ್ಮೀರದ ಧಾರ್ಮಿಕ ಗುರುತಿಗಿಂತ ಅದಕ್ಕಿರುವ ಪ್ರಾದೇಶಿಕ ಆಯಾಮ ಹೆಚ್ಚು ವಿಶಿಷ್ಟವಾದದ್ದು. ಹಾಗಾಗಿ ಕಾಶ್ಮೀರದ ದುರಂತ ಕೇವಲ ನಮ್ಮ ಜಾತ್ಯತೀತತೆಯ ಅಂತ್ಯದ ಸಂಕೇತ ಮಾತ್ರವಲ್ಲ, ಅದು ಒಟ್ಟಾರೆ ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ನಮ್ಮ ದಮನಕಾರಿ ನೀತಿಗಳ ವೈಫಲ್ಯವಾಗಿದೆ.

ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಸುವಾಗ, ಆ ಕಾರ್ಯಕ್ರಮ ದೇಶದಲ್ಲಿ ಬಹುಸಂಖ್ಯಾತ ರಾಜಕೀಯದ ಗೆಲುವಾಗಿ ಕಾಣುತಿತಿದೆ. ಆದರೆ ದೇಶದಲ್ಲಿ ಈ ಬಹುಸಂಖ್ಯಾತ ರಾಜಕೀಯದ ದಿಗ್ವಿಜಯದ ಪಯಣ 1989ರಲ್ಲೇ ಪ್ರಾರಂಭವಾಗಿದೆ ಎಂಬುದನ್ನು ಭವಿಷ್ಯದ ಇತಿಹಾಸಕಾರ ಮರೆಯುವುದಿಲ್ಲ. ಈಗ ಹೊಸತಾಗಿರುವುದು, ಆ ರಾಜಕಾರಣಕ್ಕೆ ಬಿದ್ದಿರುವ ಕಾನೂನಿನ ಮೊಹರು ಮಾತ್ರ. ಈ ಬಾರಿ 1949 ಅಥವಾ 1986ರಂತೆ ಅಲ್ಲ. ಈ ಬಾರಿ ಸ್ವತಃ ಈ ದೇಶದ ಸರ್ವೋಚ್ಚ ನ್ಯಾಯಾಲಯದಿಂದಲೇ ದೃಢೀಕರಣ ಪಡೆದು ದೇವರು ಕಾನೂನು ಪ್ರಕಾರವೇ ಪ್ರವೇಶ ಮಾಡಿದ್ದಾರೆ. (ಇದೇ ದಿನ ಒಬ್ಬ ಸಾರ್ವಜನಿಕ ಹಿತಾಸಕ್ತಿಗಾಗಿ ನಿರ್ಭಯವಾಗಿ ಮಾತನಾಡುವ ನ್ಯಾಯವಾದಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡಿಸಿತು ಎಂಬುದನ್ನೂ ಆ ಇತಿಹಾಸಕಾರ ಉಲ್ಲೇಖಿಸುವ ಸಾಧ್ಯತೆ ಇದೆ.) ಈ ವಿಚಿತ್ರ ಆದೇಶವನ್ನು ನೀಡಿದ ಕೆಲವೇ ತಿಂಗಳುಗಳ ಬಳಿಕ ಧಾರ್ಮಿಕ ಹಿನ್ನೆಲೆಯ ಆಧಾರದಲ್ಲಿ ಭವಿಷ್ಯದ ನಾಗರಿಕರನ್ನು ಅಸಮಾನತೆಯಿಂದ ನಡೆಸಿಕೊಳ್ಳುವ ಸಿಎಎ 2019 ಕಾಯ್ದೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು ಎಂಬ ವಾಸ್ತವವನ್ನು ಆ ಇತಿಹಾಸಕಾರ ವಿಶೇಷವಾಗಿ ಉಲ್ಲೇಖಿಸುತ್ತಾನೆ.

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮ ಧಾರ್ಮಿಕ ಅಥವಾ ಆಧ್ಯಾತ್ಮಿಕ ಆಚರಣೆಯಲ್ಲ. ಅದು ರಾಜಕೀಯ, ವಿಜಯದ ಸಂಕೇತ ಎಂಬುದು ಅತ್ಯಂತ ಸ್ಪಷ್ಟ. ಅದು ಸರಕಾರದ ಶಕ್ತಿ, ಬಲಿಷ್ಠ ರಾಜಕೀಯ ಪಕ್ಷದ ಶಕ್ತಿ, ಬಹುಸಂಖ್ಯಾತ ಸಮುದಾಯದ ವಿವೇಚನಾರಹಿತ ಶಕ್ತಿ, ಆಧುನಿಕ ಮಾಧ್ಯಮಗಳ ಶಕ್ತಿ ಹಾಗೂ ಧಾರ್ಮಿಕ ಅಧಿಕಾರದ ಶಕ್ತಿ - ಇವೆಲ್ಲವುಗಳ ಸಮ್ಮಿಲನದ ಸಂಕೇತವಾಗಿತ್ತು. ಈ ವರೆಗೆ ಇದರಲ್ಲಿ ಇಲ್ಲದೇ ಇದ್ದದ್ದು ವಿಪಕ್ಷಗಳ ಸಕ್ರಿಯ ಭಾಗೀದಾರಿಕೆ ಮಾತ್ರ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಗಾಂಧಿ ಕುಟುಂಬದ ಹಾಗೂ ಪಕ್ಷದ ಇತರ ನಾಯಕರ ನೇತೃತ್ವದಲ್ಲೇ ಆ ಕೊರತೆಯನ್ನು ನೀಗಿಸಿದೆ. ಇದರೊಂದಿಗೆ ಹೆಸರಿಗೆ ಮಾತ್ರ ಜಾತ್ಯತೀತ ಸಂವಿಧಾನವಿರುವ ಒಂದು ಹಿಂದೂ ರಾಷ್ಟ್ರದ ಮಾದರಿಯನ್ನು ಉದ್ಘಾಟಿಸಲಾಗಿದೆ. ಅಲ್ಲಿಗೆ ದೇಶದಲ್ಲಿ ಜಾತ್ಯತೀತತೆಯ ಶವ ಪೆಟ್ಟಿಗೆಗೆ ಕಾಂಗ್ರೆಸ್ ಪಕ್ಷ ಕೊನೆಯ ಮೊಳೆ ಹೊಡೆದಿದೆ.

ಜಾತ್ಯತೀತತೆಯ ಸೋಲು

ಇಂದಿನದ್ದು ಒಂದು ಸುದೀರ್ಘ ಪಯಣದ ಕೊನೆ. ಇಲ್ಲಿ ಜಾತ್ಯತೀತತೆಗಾಗಿನ ಹೋರಾಟ ಚುನಾವಣೆಗಳಲ್ಲಿ ಅಥವಾ ಕೋರ್ಟಿನಲ್ಲಿ ಸೋತದ್ದಲ್ಲ ಎಂದು ಭವಿಷ್ಯದ ಆ ಇತಿಹಾಸಕಾರ ಕಂಡು ಹಿಡಿಯುತಾತಿನೆ. ಇದು ಆಲೋಚನೆಗಳ ನಡುವಿನ ಹೋರಾಟವಾಗಿತ್ತು. ಜಾತ್ಯತೀತತೆಯನ್ನು ಭಾರತದ ಜನರ ಮನಸ್ಸಲ್ಲೇ ಸೋಲಿಸಲಾಯಿತು. ಹೀಗಾಗಿದ್ದಕ್ಕೆ ಹಿಂದೂ ರಾಷ್ಟ್ರದ ಪ್ರತಿಪಾದಕರಿಗೆ ಗೆಲುವಿನ ಶ್ರೇಯಸ್ಸು ನೀಡಬಾರದು. ಅವರು ಇಲ್ಲಿನ ಜಾತ್ಯತೀತ ರಾಜಕಾರಣದ ಘೋರ ವೈಫಲ್ಯದ ಫಲಾನುಭವಿಗಳು ಮಾತ್ರ. ಎಲ್ಲಕ್ಕಿಂತ ಮುಖ್ಯವಾಗಿ ಜಾತ್ಯತೀತ ಆಲೋಚನೆಯ ಪ್ರತಿಪಾದಕರು ಹಾಗೂ ಪಾಲಕರು ಈ ಸೋಲಿಗೆ ಜವಾಬ್ದಾರರು.

ಜಾತ್ಯತೀತತೆಯ ಪ್ರತಿಪಾದಕರು ಜನರ ನಡುವೆ ನಡೆದ ಆಲೋಚನೆಗಳ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ನಿರಾಕರಿಸಿದ್ದೇ ಇಂದು ಜಾತ್ಯತೀತತೆ ಸೋಲಲು ಕಾರಣ ಎಂಬುದನ್ನು ನಾವು ಗುರುತಿಸಬೇಕು. ಜಾತ್ಯತೀತ ಉನ್ನತ ವರ್ಗ ಮೇಲಿಂದ ಕೆಳಗೆ ನಿಂತ ಜನರಲ್ಲಿ ಇಂಗ್ಲಿಷ್‌ನಲ್ಲೇ ಮಾತಾಡಿದರು. ಅದರಿಂದ ಜಾತ್ಯತೀತತೆ ಸೋತಿತು. ಜಾತ್ಯತೀತತೆ ನಮ್ಮ ಭಾಷೆಗಳನ್ನು ಕೈಬಿಟ್ಟಿತು, ಸಂಪ್ರದಾಯಗಳ ಜೊತೆ ಬೆರೆಯಲಿಲ್ಲ, ನಮ್ಮ ಧರ್ಮಗಳ ಭಾಷೆಯನ್ನು ಕಲಿಯಲು ಮತ್ತು ಮಾತನಾಡಲು ಅದು ನಿರಾಕರಿಸಿತು. ಹಾಗಾಗಿ ಜಾತ್ಯತೀತತೆ ಸೋತಿತು. ಈ ಕಾಲಕ್ಕೆ ಸೂಕ್ತವಾಗುವ ಹಿಂದೂ ಧರ್ಮದ ವ್ಯಾಖ್ಯಾನವನ್ನು ಬೆಳೆಸುವ ಬದಲು ಜಾತ್ಯತೀತತೆ ಹಿಂದೂ ಧರ್ಮವನ್ನೇ ಅಣಕಿಸಿತು. ನಿರ್ದಿಷ್ಟವಾಗಿ ಇದೇ ಕಾರಣಕ್ಕೆ ಜಾತ್ಯತೀತತೆ ಸೋತಿತು. ಅಲ್ಪಸಂಖ್ಯಾತ ಕೋಮುವಾದವನ್ನು ಖಂಡಿಸದೆ ಕೇವಲ ತೋರಿಕೆಯ ಅಲ್ಪಸಂಖ್ಯಾತ ಪರತೆಯಿಂದ ಹೊರತಾದ ಅಸ್ಮಿತೆಯನ್ನು ಕಂಡುಕೊಳ್ಳಲು ವಿಫಲವಾಗಿದ್ದರಿಂದ ಜಾತ್ಯತೀತ ಆಲೋಚನೆ ಇಲ್ಲಿ ಸೋತಿತು. ಅದು ಬದ್ಧತೆಯಿಂದ ಕೇವಲ ಅವಕಾಶವಾದಿತನಕ್ಕೆ ತಿರುಗಿ ಅಲ್ಪಸಂಖ್ಯಾತ ಮತದಾರರನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಷಡ್ಯಂತ್ರ ಮಾಡಿದ್ದರಿಂದ ಇಲ್ಲಿ ಜಾತ್ಯತೀತ ರಾಜಕೀಯ ತನ್ನ ಮೌಲ್ಯ ಕಳೆದುಕೊಂಡಿತು.

ಇವತ್ತು ಈ ಸಾಂಸ್ಕೃತಿಕ ನಿರ್ವಾತ ಎಂತಹ ಪರಿಸ್ಥಿತಿ ನಿರ್ಮಿಸಿದೆಯೆಂದರೆ ತಿಲಕ ಮತ್ತು ತ್ರಿಶೂಲ ಇಟ್ಟುಕೊಂಡ ಯಾರೇ ಒಬ್ಬ ಹಿಂದೂಗಳ ನಾಯಕನಾಗಬಹುದು. ಇದರಿಂದಾಗಿ ಜಾತ್ಯತೀತತೆಯನ್ನು ರಾಕ್ಷಸೀಯವೆಂದು ಹೇಳುವ, ಅದರ ಮೇಲೆ ದಾಳಿ ಮಾಡುವ ಒಂದು ಸೈದ್ಧಾಂತಿಕ ವಾತಾವರಣವೇ ನಿರ್ಮಾಣವಾಗಿದೆ. ಇದರಿಂದಾಗಿ ಕಾಂಗ್ರೆಸ್ ತನ್ನ ದಿವ್ಯ ನಿರ್ಲಕ್ಷದಿಂದ ಹಿಂದುತ್ವದೆಡೆಗೆ ಕೊನೆಗೆ ಸಂಪೂರ್ಣ ಶರಣಾಗತಿಯೆಡೆಗೆ ಹೋಗುವಂತಹ ರಾಜಕೀಯ ನಿರ್ವಾತ ಇಲ್ಲಿ ಬೆಳೆದು ಬಿಟ್ಟಿದೆ.

ಹಾಗಾಗಿ ಇವತ್ತು ನಾವು ಕಳೆದುಕೊಂಡಿರುವ ಧಾರ್ಮಿಕ ಸಹಿಷ್ಣುತೆಯ ಭಾಷೆಯನ್ನು ಮತ್ತೆ ಕಂಡುಕೊಳ್ಳುವ, ಹಿಂದೂ ಧರ್ಮದ ಹೊಸ ವ್ಯಾಖ್ಯೆ ನೀಡುವ ಮತ್ತು ನಮ್ಮ ಪ್ರಜಾಪ್ರಭುತ್ವದ ಭವಿಷ್ಯವನ್ನು ಮತ್ತೆ ಗಳಿಸಲು ಹೋರಾಡುವ ಹೊಸ ಪ್ರಯಾಣವನ್ನು ಪ್ರಾರಂಭಿಸಲು ಸರಿಯಾದ ದಿನವಾಗಿದೆ.

ಕೃಪೆ: theprint.in

Writer - ಯೋಗೇಂದ್ರ ಯಾದವ್, theprint.in

contributor

Editor - ಯೋಗೇಂದ್ರ ಯಾದವ್, theprint.in

contributor

Similar News