ನನ್ನನ್ನು ಕೊಲ್ಲಲು ಸೌದಿ ಯುವರಾಜ ಕೆನಡಕ್ಕೆ ಹಂತಕ ಪಡೆ ಕಳುಹಿಸಿದ್ದರು: ಮಾಜಿ ಸೌದಿ ಗುಪ್ತಚರ ಅಧಿಕಾರಿ ಆರೋಪ

Update: 2020-08-07 16:40 GMT

ವಾಶಿಂಗ್ಟನ್, ಆ. 7: 2018ರಲ್ಲಿ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಟರ್ಕಿಯಲ್ಲಿ ಹತ್ಯೆಯಾದ ಕೆಲವೇ ವಾರಗಳಲ್ಲಿ ನನ್ನ ಹತ್ಯೆಯನ್ನೂ ಮಾಡಿಸಲು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಪ್ರಯತ್ನಿಸಿದ್ದರು ಎಂದು ಆ ದೇಶದ ಮಾಜಿ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ವಾಶಿಂಗ್ಟನ್‌ನ ಫೆಡರಲ್ ನ್ಯಾಯಾಲಯವೊಂದರಲ್ಲಿ ದಾಖಲಿಸಿದ ಮೊಕದ್ದಮೆಯಲ್ಲಿ ಸೌದಿ ಅರೇಬಿಯದ ಮಾಜಿ ಗುಪ್ತಚರ ಅಧಿಕಾರಿ ಸಅದ್ ಅಲ್‌ಜಬ್ರಿ ಈ ಆರೋಪ ಮಾಡಿದ್ದಾರೆ. ಅವರು ಈಗ ಕೆನಡದಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ.

ಖಶೋಗಿಯ ರೀತಿಯಲ್ಲೇ ನನ್ನನ್ನೂ ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸುವುದಕ್ಕಾಗಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಕೆನಡಕ್ಕೆ ಹಂತಕ ಪಡೆಯೊಂದನ್ನು ಕಳುಹಿಸಿದ್ದರು ಎಂದು ಅಲ್‌ಜಬ್ರಿ ಹೇಳಿದ್ದಾರೆ.

ಸೌದಿ ಯುವರಾಜರ ಆದೇಶದಂತೆ 2018 ಅಕ್ಟೋಬರ್ 2ರಂದು ಅವರ ಏಜಂಟ್‌ಗಳ ತಂಡವೊಂದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಖಶೋಗಿಯನ್ನು ಭೀಕರವಾಗಿ ಹತ್ಯೆ ಮಾಡಿದೆ ಎಂದು ಟರ್ಕಿ ಹೇಳಿದೆ. ಅಮೆರಿಕದ ಗುಪ್ತಚರ ಇಲಾಖೆ ಸಿಐಎಯೂ ಇದನ್ನು ದೃಢೀಕರಿಸಿದೆ.

‘‘ತನ್ನ ಹಂತಕ ಅಭಿಲಾಷೆಯನ್ನು ಈಡೇರಿಸಿಕೊಳ್ಳಲು ಪ್ರತಿವಾದಿ ಮುಹಮ್ಮದ್ ಬಿನ್ ಸಲ್ಮಾನ್ ನನ್ನನ್ನು ಕೊಲ್ಲುವುದಕ್ಕಾಗಿ ವೈಯಕ್ತಿಕ ನೆಲೆಯಲ್ಲಿ ಹಲವಾರು ಪ್ರಯತ್ನಗಳನ್ನು ನಡೆಸಿದ್ದಾರೆ. ಅವರ ಪ್ರಯತ್ನಗಳು ಇಂದಿಗೂ ಚಾಲ್ತಿಯಲ್ಲಿವೆ’’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ದೂರಿನಲ್ಲಿ ಅಲ್‌ಜಬ್ರಿ ಆರೋಪಿಸಿದ್ದಾರೆ.

‘‘ಯುವರಾಜರ ಎದುರಾಳಿ ರಾಜಕುಮಾರ ಹಾಗೂ ಸೌದಿ ಭದ್ರತಾ ವ್ಯವಸ್ಥೆಯ ಮಾಜಿ ಮುಖ್ಯಸ್ಥ ಮುಹಮ್ಮದ್ ಬಿನ್ ನಯೀಫ್‌ಗೆ ನಾನು ಆಪ್ತವಾಗಿರುವುದರಿಂದ ಹಾಗೂ ಯುವರಾಜ ಮುಹಮ್ಮದ್‌ರ ಚಟುವಟಿಕೆಗಳ ಬಗ್ಗೆ ನನಗೆ ವಿವರವಾದ ಮಾಹಿತಿಗಳಿರುವುದರಿಂದ ನಾನು ಸಾಯಬೇಕೆಂದು ಯುವರಾಜ ಬಯಸುತ್ತಿದ್ದಾರೆ’’ ಎಂದು ಅವರು ಆರೋಪಿಸಿದ್ದಾರೆ. ಯುವರಾಜರ ಚಟುವಟಿಕೆಗಳ ಬಗ್ಗೆ ನಾನು ಹೊಂದಿರುವ ಮಾಹಿತಿಯನ್ನು ನಾನು ಬಹಿರಂಗಪಡಿಸಿದರೆ ಅಮೆರಿಕ ಮತ್ತು ಸೌದಿ ಅರೇಬಿಯ ನಡುವಿನ ಆತ್ಮೀಯ ಸಂಬಂಧ ಹಳಸಬಹುದು ಎಂದು ಅವರು ಹೇಳಿದ್ದಾರೆ.

‘‘ಅಮೆರಿಕ ಸರಕಾರ ಯುವರಾಜ ಸಲ್ಮಾನ್‌ಗೆ ನೀಡುತ್ತಿರುವ ಮಹತ್ವವನ್ನು ಅಪಾಯಕ್ಕೆ ಗುರಿಪಡಿಸಬಲ್ಲ ಮಾಹಿತಿಗಳು ನನ್ನಲ್ಲಿರುವುದರಿಂದ, ನಾನು ಸಾಯಬೇಕೆಂದು ಯುವರಾಜರು ಬಯಸಿದ್ದಾರೆ’’ ಎಂದು ಮೊಕದ್ದಮೆಯಲ್ಲಿ ಮಾಜಿ ಗುಪ್ತಚರ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News