ಜಮ್ಮು-ಕಾಶ್ಮೀರ: 4ಜಿ ಇಂಟರ್‌ನೆಟ್ ಮರುಸ್ಥಾಪನೆ ಸಾಧ್ಯತೆ ಪರಿಶೀಲನೆಗೆ ಸುಪ್ರೀಂ ಸೂಚನೆ

Update: 2020-08-07 17:12 GMT

ಹೊಸದಿಲ್ಲಿ, ಆ.7: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷದ ಆಗಸ್ಟ್ 5ರಿಂದ ಸ್ಥಗಿತಗೊಳಿಸಿರುವ 4ಜಿ ಇಂಟರ್‌ನೆಟ್ ವ್ಯವಸ್ಥೆಯನ್ನು ಕೆಲವೆಡೆ ಮರುಸ್ಥಾಪಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಜಮ್ಮು ಕಾಶ್ಮೀರದಲ್ಲಿ ಈಗ 2ಜಿ ಇಂಟರ್‌ನೆಟ್ ಸಂಪರ್ಕವಿದೆ. ಆದರೆ ಭದ್ರತಾ ಕಾರಣಗಳಿಂದ 4ಜಿ ಇಂಟರ್‌ನೆಟ್ ಮೇಲೆ ವಿಧಿಸಿದ್ದ ನಿರ್ಬಧವನ್ನು ಆಗಸ್ಟ್ 19ರವರೆಗೆ ವಿಸ್ತರಿಸಲಾಗಿದೆ. ಇದನ್ನು ಪ್ರಶ್ನಿಸಿ ಸರಕಾರೇತರ ಸಂಸ್ಥೆಯೊಂದು ಸುಪ್ರೀಂಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್‌ನೆಟ್ ಸಂಪರ್ಕ ಮರುಸ್ಥಾಪಿಸಬೇಕೆಂದು ನ್ಯಾಯಾಲಯ ಮೇ 11ರಂದು ನೀಡಿದ್ದ ಆದೇಶವನ್ನು ಕೇಂದ್ರ ಸರಕಾರ ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಲಯ ಕಲಾಪದ ಸಂದರ್ಭ ಹೇಳಿಕೆ ನೀಡಿದ ಜಮ್ಮು-ಕಾಶ್ಮೀರ ಆಡಳಿತದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ಜಮ್ಮು ಕಾಶ್ಮೀರಕ್ಕೆ ನೂತನ ಲೆಫ್ಟಿನೆಂಟ್ ಜನರಲ್ ನಿಯುಕ್ತರಾಗಿರುವುದರಿಂದ , ಈ ವಿಷಯದ ಬಗ್ಗೆ ಗಮನ ಹರಿಸಲು ಹೆಚ್ಚಿನ ಕಾಲಾವಕಾಶದ ಅಗತ್ಯವಿದೆ ಎಂದರು. ಇದಕ್ಕೆ ಉತ್ತರಿಸಿದ ಸುಪ್ರೀಂಕೋರ್ಟ್, ನೂತನ ಲೆಫ್ಟಿನೆಂಟ್ ಜನರಲ್ ನೇಮಕದಿಂದ ಯಾವುದೂ ಬದಲಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಗಮನ ಹರಿಸಲು ವಿಶೇಷ ಸಮಿತಿಯೊಂದನ್ನು ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು.

ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್‌ನೆಟ್ ಸಂಪರ್ಕ ಮರುಸ್ಥಾಪನೆಗೆ ಆಡಳಿತದಿಂದ ಯಾವುದೇ ಆಕ್ಷೇಪವಿಲ್ಲ ಎಂಬ ಹೇಳಿಕೆಯನ್ನು ಮಾಜಿ ಲೆಫ್ಟಿನೆಂಟ್ ಗವರ್ನರ್ ಜಿ.ಸಿ. ಮುರ್ಮು ಯಾವ ಸಂದರ್ಭದಲ್ಲಿ ನೀಡಿದ್ದರು ಎಂಬುದನ್ನು ವಿವರಿಸುವಂತೆ ಸಾಲಿಸಿಟರ್ ಜನರಲ್‌ಗೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್ 11ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News