​ಭಾರತದ ಆಗಸ್ಟ್ ತಿಂಗಳ ಕೋವಿಡ್ ಸೋಂಕಿತರ ಸಂಖ್ಯೆ ವಿಶ್ವದಲ್ಲೇ ಅತ್ಯಧಿಕ

Update: 2020-08-08 03:58 GMT

ಹೊಸದಿಲ್ಲಿ, ಆ.8: ಆಗಸ್ಟ್ ತಿಂಗಳಲ್ಲಿ ಭಾರತ ವಿಶ್ವದಲ್ಲೇ ಅತಿದೊಡ್ಡ ಕೋವಿಡ್-19 ಹಾಟ್‌ಸ್ಪಾಟ್ ಆಗಿ ರೂಪುಗೊಂಡಿದೆ. ಆಗಸ್ಟ್ ತಿಂಗಳ ಮೊದಲ ಒಂದು ವಾರದಲ್ಲಿ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ಈ ಸಂಖ್ಯೆ ಅಮೆರಿಕಕ್ಕಿಂತ ಸ್ವಲ್ಪ ಅಧಿಕವಾಗಿದ್ದು, ಬ್ರೆಝಿಲ್‌ಗಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚು. ವಿಶ್ವದಲ್ಲಿ ಗರಿಷ್ಠ ಸಂಖ್ಯೆಯ ಸೋಂಕಿತರಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿ ಶುಕ್ರವಾರವೂ ಕೋವಿಡ್ ನಾಗಾಲೋಟ ಮುಂದುವರಿದಿದ್ದು, ಸತತ ಎರಡನೇ ದಿನ 60 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ರಾಜ್ಯಗಳಿಂದ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಇದುವರೆಗಿನ ಗರಿಷ್ಠ ಸಾವು (926) ಶುಕ್ರವಾರ ಸಂಭವಿಸಿದೆ.

ಆಗಸ್ಟ್ ಮೊದಲ ವಾರ ಭಾರತದಲ್ಲಿ 3,28,903 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದರೆ, ಅಮೆರಿಕದಲ್ಲಿ 3,26,111 ಮತ್ತು ಬ್ರೆಝಿಲ್‌ನಲ್ಲಿ 2,51,264 ಪ್ರಕರಣಗಳು ಹೊಸದಾಗಿ ಕಾಣಿಸಿಕೊಂಡಿವೆ ಎಂದು ವರ್ಲ್ಡೋಮೀಟರ್ಸ್‌.ಇನ್ಫೋ ಪ್ರಕಟಿಸಿದೆ. ಆಗಸ್ಟ್ 2, 3, 5 ಮತ್ತು 6ರಂದು ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ.

ಇದುವರೆಗೆ ವಿಶ್ವದಲ್ಲಿ 20 ಲಕ್ಷ ಸೋಂಕು ಪ್ರಕರಣಗಳು ವರದಿಯಾದ ಮೂರು ದೇಶಗಳ ಪೈಕಿ ಭಾರತದಲ್ಲಿ ಕೊನೆಯ 10 ಲಕ್ಷ ಅತ್ಯಂತ ವೇಗವಾಗಿ ವರದಿಯಾಗಿವೆ. 10ರಿಂದ 20 ಲಕ್ಷ ಪ್ರಕರಣಗಳಿಗೆ ದ್ವಿಗುಣಗೊಂಡ ಅವಧಿಯಲ್ಲಿ ಭಾರತದ ಸೋಂಕು ಪ್ರಗತಿ ದರ 3.1% ಇದ್ದು, ಇದು ಬ್ರೆಝಿಲ್ ಹಾಗೂ ಅಮೆರಿಕಕ್ಕಿಂತಲೂ ಅಧಿಕ.

ಭಾರತದಲ್ಲಿ ಆರು ದಿನಗಳಲ್ಲಿ 5,075 ಸೋಂಕಿತರು ಮೃತಪಟ್ಟಿದ್ದರೆ ಅಮೆರಿಕ ಹಾಗೂ ಬ್ರೆಝಿಲ್‌ನಲ್ಲಿ ಈ ಸಂಖ್ಯೆ 6,000ಕ್ಕಿಂತಲೂ ಅಧಿಕ.
ಶುಕ್ರವಾರ ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿ 10 ಸಾವಿರಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿವೆ. ಬಿಹಾರ (3,646), ತೆಲಂಗಾಣ (2207), ಒಡಿಶಾ (1833), ಪಂಜಾಬ್ (1063) ಮತ್ತು ಮಣಿಪುರ (249) ಶುಕ್ರವಾರ ಇದುವರೆಗಿನ ಗರಿಷ್ಠ ಪ್ರಕರಣಗಳನ್ನು ಕಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News