ಮಧ್ಯಪ್ರದೇಶ ಪೊಲೀಸರ ದೌರ್ಜನ್ಯದ ವೀಡಿಯೊ ವೈರಲ್

Update: 2020-08-08 04:37 GMT

ಭೋಪಾಲ್, ಆ.8: ಮಧ್ಯಪ್ರದೇಶ ಪೊಲೀಸರು ಸಾರ್ವಜನಿಕರ ಎದುರೇ ವ್ಯಕ್ತಿಯೊಬ್ಬನ ತಲೆಕೂದಲು ಹಿಡಿದು ಎಳೆದೊಯ್ಯುತ್ತಿರುವ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. 50 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಪ್ರೇಮ್ ಸಿಂಗ್ ಎಂಬ ವ್ಯಕ್ತಿಯು ಪೊಲೀಸರ ಕಾಲಬುಡದಲ್ಲಿದ್ದು, ಪೊಲೀಸ್ ಪೇದೆ, ಆ ವ್ಯಕ್ತಿಯ ಕೂದಲು ಹಿಡಿದು ಎಳೆಯುತ್ತಿರುವ ದೃಶ್ಯವಿದೆ.

ಇದೇ ವಿಡಿಯೊದಲ್ಲಿ ಮತ್ತೊಬ್ಬ ಪೊಲೀಸ್ ‌ಪೇದೆ, ಪ್ರೇಮ್‌ಸಿಂಗ್‌ನ ರುಮಾಲು ಸರಿಪಡಿಸುತ್ತಿರುವ ದೃಶ್ಯವೂ ಇದೆ. ಅವರು ನಮ್ಮನ್ನು ಹೊಡೆಯುತ್ತಿದ್ದಾರೆ. ಕೊಲ್ಲುತ್ತಿದ್ದಾರೆ. ಪೊಲೀಸರು ನಮ್ಮ ಕೂದಲು ಹಿಡಿದು ಎಳೆಯುತ್ತಿದ್ದಾರೆ. ಅವರು ನಮ್ಮ ಮಳಿಗೆ ನಿರ್ಮಿಸಲು ಬಿಡುತ್ತಿಲ್ಲ ಎಂದು ಗುಂಪಿನತ್ತ ಕೈಮುಗಿದು ಸಿಂಗ್ ಮನವಿ ಮಾಡುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ವಕ್ತಾರ ನರೇಂಧ್ರ ಸಲೂಜಾ ಈ ವೀಡಿಯೊ ಟ್ವೀಟ್ ಮಾಡಿದ್ದು, ಪೊಲೀಸ್ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ. ಪ್ರೇಮ್‌ಸಿಂಗ್ ಗ್ರಂಥಿ, ಪಲ್ಸೂದ್ ಪೊಲೀಸ್ ಹೊರಠಾಣೆ ಬಳಿ ಬೀಗದ ಕೀಲಿಗಳ ಅಂಗಡಿ ಇಟ್ಟುಕೊಂಡಿದ್ದರು. ಪೊಲೀಸರು ಸಾರ್ವಜನಿಕರ ಸಮ್ಮುಖದಲ್ಲೇ ನಡುಬೀದಿಯಲ್ಲಿ ಅವರನ್ನು ಥಳಿಸಿ, ರುಮಾಲು ಬಿಚ್ಚಿ ತಲೆಕೂದಲು ಎಳೆಯುತ್ತಿದ್ದಾರೆ. ಇದು ಸಿಕ್ಖ್ ಸಮುದಾಯದ ಧಾರ್ಮಿಕ ಭಾವನೆಗಳನ್ನು ಅವಮಾನಿಸುವಂಥದ್ದು ಎಂದು ಟ್ವೀಟ್ ಮಾಡಿದ್ದಾರೆ.

ಲಂಚ ನೀಡಿಲ್ಲ ಎಂಬ ಕಾರಣಕ್ಕೆ ಪೊಲೀಸರು ದೌರ್ಜನ್ಯ ನಡೆಸಿದ್ದಾಗಿ ಸಿಂಗ್ ಆಪಾದಿಸಿದ್ದಾರೆ. ಈ ಘಟನೆ ಸಂಬಂಧ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಗೃಹಸಚಿವ ಡಾ.ನರೋತ್ತಮ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News