ಗಡಿ ವಿವಾದ: ಭಾರತ-ಚೀನಾ ನಡುವೆ ಮೇಜರ್ ಜನರಲ್ ಮಟ್ಟದ ಮಾತುಕತೆ

Update: 2020-08-08 17:37 GMT

ಹೊಸದಿಲ್ಲಿ,ಆ.8: ಪೂರ್ವ ಲಡಾಖ್‌ನ ದೌಲತ್ ಬೇಗ್ ಓಲ್ಡಿ ಮತ್ತು ಡೆಸ್ಪಾಂಗ್ ಸೇರಿದಂತೆ ಹಲವಾರು ಘರ್ಷಣಾ ಸ್ಥಳಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಿಂದ ಸೇನೆಯನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆಗೆ ಒತ್ತು ನೀಡಲು ಭಾರತ ಮತ್ತು ಚೀನಾಗಳು ಶನಿವಾರ ಎಲ್‌ಎಸಿಯ ಚೀನಾ ಭಾಗದ ದೌಲತ್ ಬೇಗ್ ಓಲ್ಡಿಯಲ್ಲಿನ ಗಡಿ ಸಿಬ್ಬಂದಿ ಸಭಾ ಸ್ಥಳದಲ್ಲಿ ಮೇಜರ್ ಜನರಲ್ ಮಟ್ಟದ ಮಾತುಕತೆಗಳನ್ನು ನಡೆಸಿದವು.

ವಾರದ ಹಿಂದೆ ಸೇನಾ ವಾಪಸಾತಿಯನ್ನು ತ್ವರಿತಗೊಳಿಸುವ ಪ್ರಯತ್ನವಾಗಿ ಉಭಯ ಸೇನೆಗಳು ಐದನೇ ಸುತ್ತಿನ ಲೆ.ಜನರಲ್ ಮಟ್ಟದ ಚರ್ಚೆಗಳನ್ನು ನಡೆಸಿದ್ದವು.

 ಪೂರ್ವ ಲಡಾಖ್‌ನ ಎಲ್ಲ ಪ್ರದೇಶಗಳಿಂದ ಚೀನಿ ಸೈನಿಕರನ್ನು ಶೀಘ್ರ ಹಿಂದೆಗೆದುಕೊಳ್ಳಬೇಕು ಮತ್ತು ಪ್ಯಾಂಗಾಂಗ್ ತ್ಸೋನಲ್ಲಿ ಉಭಯ ಸೇನೆಗಳ ನಡುವೆ ಬಿಕ್ಕಟ್ಟು ಆರಂಭವಾಗಿದ್ದ ಮೇ 5ಕ್ಕೆ ಮೊದಲಿದ್ದ ಸ್ಥಿತಿಯನ್ನು ಮರುಸ್ಥಾಪಿಸಬೇಕು ಎಂದು ಭಾರತವು ಪಟ್ಟು ಹಿಡಿದಿದೆ.

ಚೀನಿ ಸೇನೆಯು ಗಾಲ್ವಾನ್ ಕಣಿವೆ ಮತ್ತು ಇತರ ಕೆಲವು ಸ್ಥಳಗಳಿಂದ ಹಿಂದೆ ಸರಿದಿದೆಯಾದರೂ ಭಾರತವು ಆಗ್ರಹಿಸಿರುವಂತೆ ಪ್ಯಾಂಗಾಂಗ್ ತ್ಸೋ,ಗೋಗ್ರಾ ಮತ್ತು ಡೆಸ್ಪಾಂಗ್‌ನ ಪ್ರದೇಶಗಳಿಂದ ತನ್ನ ಸೇನೆಯನ್ನು ಚೀನಾ ಹಿಂದೆಗೆದುಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News