ದೇಶದ ಈ 13 ಜಿಲ್ಲೆಗಳಲ್ಲಿ ಅತ್ಯಧಿಕ ಕೊರೋನ ಸೋಂಕಿನಿಂದ ಸಾವು

Update: 2020-08-09 03:42 GMT

ಹೊಸದಿಲ್ಲಿ: ದೇಶದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಪೈಕಿ ಏಳನೇ ಒಂದರಷ್ಟು ಮಂದಿ ಎಂಟು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ 13 ಜಿಲ್ಲೆಗಳಿಗೆ ಸೇರಿದವರಾಗಿದ್ದು, ಪ್ರಕರಣದ ತೀವ್ರತೆ ಹಿನ್ನೆಲೆಯಲ್ಲಿ ಇಲ್ಲಿ ರೋಗ ತಪಾಸಣೆ ಮತ್ತು ಫಲಿತಾಂಶ ನೀಡಿಕೆ ವ್ಯವಸ್ಥೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಈ ಜಿಲ್ಲೆಗಳಲ್ಲಿ ಕೊರೋನ ವೈರಸ್ ರೋಗದಿಂದಾದ ಮರಣ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಇದ್ದು, ದೇಶದಲ್ಲಿ ಇದುವರೆಗೆ ಸಂಭವಿಸಿದ ಸಾವಿನ ಶೇಕಡ 14ರಷ್ಟು ಈ ಜಿಲ್ಲೆಗಳಿಂದ ವರದಿಯಾಗಿವೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರೋಗಿಗಳಿಗೆ ಸಾಕಷ್ಟು ಆ್ಯಂಬುಲೆನ್ಸ್ ಲಭ್ಯತೆಯನ್ನು ಖಾತರಿಪಡಿಸುವಂತೆಯೂ ಸೂಚಿಸಲಾಗಿದೆ.

ಅಸ್ಸಾಂನ ಕಮ್ರುಪ್ ಮೆಟ್ರೊ, ಬಿಹಾರದ ಪಾಟ್ನಾ, ಜಾರ್ಖಂಡ್‌ನ ರಾಂಚಿ, ಕೇರಳದ ಅಳಪ್ಪುರ ಮತ್ತು ತಿರುವನಂತಪುರ, ಒಡಿಶಾದ ಗಂಜಮ್, ಉತ್ತರ ಪ್ರದೇಶದ ಲಕ್ನೋ, ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಾಸ್, ಹೂಗ್ಲಿ, ಹೌರಾ, ಮಾಲ್ಡಾ ಮತ್ತು ಕೊಲ್ಕತ್ತಾ ಹಾಗೂ ದೆಹಲಿ ಈ 13 ಜಿಲ್ಲೆಗಳು.

ಭಾರತದಲ್ಲಿ ಸಂಭವಿಸಿದ ಒಟ್ಟು ಕೋವಿಡ್ ಸಾವಿನ ಪೈಕಿ ಶೇಕಡ 14ರಷ್ಟು ಸಾವು ಈ ಜಿಲ್ಲೆಗಳಲ್ಲಿ ಸಂಭವಿಸಿದೆ. ಇದುವರೆಗೆ ಈ ಮಾರಕ ಸಾಂಕ್ರಾಮಿಕ 42,518 ಮಂದಿಯನ್ನು ಬಲಿಪಡೆದಿದ್ದು, ಶನಿವಾರ 933 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿಯುತ್ತದೆ.

ದೇಶದಲ್ಲಿ ಸೋಂಕಿತರ ಸಾವಿನ ಪ್ರಮಾಣ 2.04% ಇದೆ. ದೆಹಲಿಯಲ್ಲಿ ಜೂನ್ ಮಧ್ಯದ ವೇಳೆಗೆ 4.1% ಇದ್ದ ಸಿಎಫ್‌ಆರ್ ಪ್ರಮಾಣ ಇದೀಗ 2.8%ಗೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News