ದೆಪ್ಸಂಗ್ ಪ್ರದೇಶದಿಂದ ಹಿಂದಕ್ಕೆ ಸರಿಯಿರಿ: ಚೀನಾಗೆ ಭಾರತ ತಾಕೀತು

Update: 2020-08-09 04:39 GMT

ಹೊಸದಿಲ್ಲಿ: ಪೂರ್ವ ಲಡಾಖ್ ಗಡಿಭಾಗದಲ್ಲಿ ಚೀನಾ ಸೇನೆ ಮತ್ತಷ್ಟು ಹಿಂದೆ ಸರಿಯಬೇಕು ಹಾಗೂ ಆಯಕಟ್ಟಿನ ಪ್ರದೇಶವಾದ ದೆಪ್ಸಂಗ್ ದೌಲತ್ ಬೇಗ್ ಓಲ್ಡಿ (ಡಿಬಿಓ) ಭಾಗದಲ್ಲಿ ನಿರ್ಮಾಣ ಚಟುವಟಿಕೆ ಸ್ಥಗಿತಗೊಳಿಸಬೇಕು ಎಂದು ಭಾರತ ಚೀನಾಗೆ ತಾಕೀತು ಮಾಡಿದೆ.

ಶನಿವಾರ ನಡೆದ ಮತ್ತೊಂದು ಸುತ್ತಿನ ಮಾತುಕತೆ ವೇಳೆ ಭಾರತೀಯ ಸೇನೆ ಈ ಸ್ಪಷ್ಟ ಸಂದೇಶ ರವಾನಿಸಿದೆ. ಉಭಯ ದೇಶಗಳು ಸಾವಿರಾರು ಮಂದಿ ಸೈನಿಕರು, ಟ್ಯಾಂಕ್‌ಗಳು, ಬಂದೂಕು ಮತ್ತಿತರ ಯುದ್ಧ ಸಾಮಗ್ರಿಗಳನ್ನು ಗಡಿಯಲ್ಲಿ ನಿಯೋಜಿಸಿವೆ.
ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳದಿರಲು ದೆಪ್ಸಂಗ್ ಬಯಲು ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸುವುದು ಅಗತ್ಯ ಎಂದು ಭಾರತ ಒತ್ತಿ ಹೇಳಿದೆ. ಈ ಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆ ವಿಚಾರದಲ್ಲಿ ಉಭಯ ದೇಶಗಳ ನಡುವೆ ಹಲವು ವರ್ಷಗಳಿಂದ ವಿವಾದ ಇರುವ ಹಿನ್ನೆಲೆಯಲ್ಲಿ ಇದು ಸಂಘರ್ಷದ ಮೂಲ ಬಿಂದು ಎನಿಸಿದೆ.

ಆಯಕಟ್ಟಿನ ದೃಷ್ಟಿಕೋನದಿಂದಲೂ ದೆಪ್ಸಂಗ್ ಬಯಲು ಪ್ರದೇಶ ಮಹತ್ವದ್ದಾಗಿದ್ದು, ಪೆಂಗಾಂಗ್ ತ್ಸೋ ಮತ್ತು ಗೋಗ್ರಾ ಪ್ರದೇಶಕ್ಕಿಂತಲೂ ಪ್ರಮುಖ ಎನಿಸಿದೆ. ಸೇನೆಯನ್ನು ಈ ಎರಡು ಪ್ರದೇಶಗಳಿಂದ ಹಿಂದಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಕಮಾಂಡರ್ ಮಟ್ಟದ ಐದು ಸುತ್ತುಗಳ ಮಾತುಕತೆ ನಡೆದಿದ್ದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.

ಈ ಮಧ್ಯೆ ಶನಿವಾರ ಮುಂಜಾನೆ 11ರಿಂದ ಸಂಜೆ 7ರವರೆಗೆ 3 ಇನ್‌ಫ್ಯಾಂಟ್ರಿ ವಿಭಾಗದ ಕಮಾಂಡರ್ ಮೇಜರ್ ಜನರಲ್ ಅಭಿಜಿತ್ ಬಾಪಟ್ಟ ಮತ್ತು ತೀನ್ ವೀನ್ ದೀನ್ ಗಡಿ ವಿಭಾಗದ ಪಿಎಲ್‌ಎ ಕಮಾಂಡರ್ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News