ಕಾಂಗ್ರೆಸ್ ಕಳೆದುಕೊಂಡ ಸುವರ್ಣಾವಕಾಶ

Update: 2020-08-09 19:30 GMT

ಮೃದು ಹಿಂದುತ್ವ ನೀತಿ ಕಾಂಗ್ರೆಸ್‌ಗೆ ರಾಜಕೀಯವಾಗಿ ಎಂದೂ ಲಾಭದಾಯಕವಾಗಿಲ್ಲ. ತೊಂಬತ್ತರ ದಶಕದ ಬಾಬರಿ ಮಸೀದಿ ಕೆಡವಿದ ನಂತರದ ವರ್ಷಗಳಲ್ಲಿ ಇಂತಹ ಸಂದರ್ಭಸಾಧಕ ನಿಲುವು ತಾಳಿದಾಗೆಲ್ಲ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ. ಮೃದು ಹಿಂದುತ್ವ ನೀತಿಯ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತ ಬಂದಿದೆ. ಆದರೂ ಕಾಂಗ್ರೆಸ್ ನಾಯಕರು ದಾರಿ ತಪ್ಪುತ್ತಲೇ ಇದ್ದಾರೆ. ದಾರಿ ತಪ್ಪಿಸುವವರ ಬಲೆಗೆ ಬೀಳುತ್ತಲೇ ಇದ್ದಾರೆ.


ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಜಾಗದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡುವ ಭೂಮಿ ಪೂಜೆ ಮುಗಿದಿದೆ.ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ ಈ ದೇಶದ ಪ್ರಧಾನ ಮಂತ್ರಿಗಳು ಎಲ್ಲ ಶಿಷ್ಟಾಚಾರಗಳನ್ನು ಮುರಿದು ಅಯೋಧ್ಯೆಗೆ ಬಂದು ಭೂಮಿ ಪೂಜೆ ನೆರವೇರಿಸಿದ್ದಾರೆ. ಹೋಗಲಿ ಯಾರಿಗೇ ಅನ್ಯಾಯವಾಗಲಿ ಒಂದು ಸಮಸ್ಯೆ ಇತ್ಯರ್ಥವಾಯಿತೆಂದು ನಿಟ್ಟುಸಿರು ಬಿಡುವ ಸ್ಥಿತಿಯಲ್ಲಿ ಈ ದೇಶವಿಂದು ಇಲ್ಲ. ಕೋಮುವಾದಿ ಶಕ್ತಿಗಳ ದಾಹ ಇಲ್ಲಿಗೆ ಮುಗಿದಿಲ್ಲ. ಅಯೋಧ್ಯೆಯ ನಂತರ ಮಥುರಾದ ಕೃಷ್ಣ ಜನ್ಮ ಭೂಮಿಯ ಜೇನುಗೂಡಿಗೆ ಅವರೀಗಾಗಲೇ ಕಲ್ಲೆಸೆಯಲಾರಂಭಿಸಿದ್ದಾರೆ. ಮಥುರಾ ನಂತರ ಕಾಶಿ ವಿಶ್ವೇಶ್ವರ ದೇವಾಲಯ, ಹೀಗೆ ಅವರ ರಹಸ್ಯ ಕಾರ್ಯಸೂಚಿಯಲ್ಲಿ ಭಾರತದ ಮೂರು ಸಾವಿರ ಪ್ರಾರ್ಥನಾ ಸ್ಥಳಗಳಿವೆ. ಕೊರೋನ ಮತ್ತು ಅದರ ನಂತರದ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ ದೇಶ ಅಸಹಾಯಕವಾಗಿ ಇದನ್ನೆಲ್ಲ ನೋಡುತ್ತಿದೆ.

ಸಂಘ ಪರಿವಾರಕ್ಕೆ ಅದರದ್ದೇ ಆದ ಹಿಂದೂ ರಾಷ್ಟ್ರದ ಅಜೆಂಡಾ ಇದೆ. ಆ ಗುರಿ ಸಾಧಿಸುವವರೆಗೆ ದೇಶ ಈ ಒತ್ತಡದಲ್ಲೇ ಇರುವಂತೆ ಅವರು ನೋಡಿಕೊಳ್ಳುತ್ತಾರೆ. ಅವರನ್ನು ದೂರಿ ಪ್ರಯೋಜನವಿಲ್ಲ. ಆದರೆ ಇದನ್ನು ವಿರೋಧಿಸಿ ತಡೆಯಬೇಕಾಗಿದ್ದ ದೇಶದ ಮತ ನಿರಪೇಕ್ಷ ಶಕ್ತಿಗಳು, ಪಕ್ಷಗಳು ಎಲ್ಲಿವೆ? ಭಾರತದ ಅತ್ಯಂತ ದೊಡ್ಡ ಸೆಕ್ಯುಲರ್ ಪಾರ್ಟಿಯಾದ ಕಾಂಗ್ರೆಸ್ ಏನು ಮಾಡುತ್ತಿದೆ ಎಂಬುದು ಅಯೋಧ್ಯೆಯ ಭೂಮಿ ಪೂಜೆ ನಡೆದಾಗ ಎಲ್ಲರಿಗೂ ತಿಳಿಯಿತು. ಪ್ರಿಯಾಂಕಾ ಗಾಂಧಿಯವರೇನೋ ‘‘ರಾಮ ಎಲ್ಲರಿಗೆ ಸೇರಿದವನು’’ ಎಂದು ಟ್ವೀಟ್ ಮಾಡಿ ಸುಮ್ಮನಾದರು. ಆದರೆ ದೇಶದ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಇರುವ ಕಾಂಗ್ರೆಸ್‌ನ ಹಿರಿ ನಾಯಕರು, ಮರಿ ನಾಯಕರು ಆ ದಿನ ಹೆಗಲ ಮೇಲೆ ಕೇಸರಿ ಶಾಲು ಹಾಕಿಕೊಂಡು ಸಂಭ್ರಮಿಸಿದರು. ಹೀಗೇಕೆ ಮಾಡುತ್ತೀರಿ? ಎಂದು ಕೇಳಿದರೆ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ.ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ವಿವಾದಿತ ಕಟ್ಟಡದ ಬೀಗ ತೆಗೆಸಿದರು, ಕಾರಣ ಅದರ ಲಾಭ ನಮಗೆ ಸಿಗಬೇಕೆಂದು ನಾಚಿಕೆಯನ್ನು ತಲೆಗೆ ಸುತ್ತಿಕೊಂಡು ಸಮರ್ಥಿಸಿಕೊಂಡರು. ಕಾಂಗ್ರೆಸ್ ಮಾತ್ರವಲ್ಲ ಎಡಪಂಥೀಯ ಪಕ್ಷಗಳನ್ನು ಹೊರತು ಪಡಿಸಿ ಬಹುತೇಕ ಸೆಕ್ಯುಲರ್ ಎಂದು ಹೇಳಿಕೊಳ್ಳುವ ಪಕ್ಷಗಳು ಇದೇ ರೀತಿಯ ಆಷಾಢಭೂತಿತನವನ್ನು ಪ್ರದರ್ಶಿಸಿದವು.

ಆದರೆ ವಾಸ್ತವ ಸಂಗತಿ ಬೇರೆಯಾಗಿದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ಅವಕಾಶ ನೀಡಿದ್ದು ನಿಜ. ಆದರೆ ಅದು ವಿವಾದಿತ ಜಾಗದಲ್ಲಿ ಅಲ್ಲ. ಅದರಿಂದ ದೂರದಲ್ಲಿ ಅದಕ್ಕೆ ಜಾಗವನ್ನು ಗೊತ್ತು ಪಡಿಸಲಾಗಿತ್ತು. ಆದರೆ ಈಗ ಮಂದಿರದ ಭೂಮಿ ಪೂಜೆ ನಡೆದಿರುವುದು ವಿವಾದಿತ ಜಾಗದಲ್ಲಿ. ಅಂದರೆ ಬಾಬರಿ ಮಸೀದಿ ಕೆಡವಿದ ಸ್ಥಳದಲ್ಲಿ. ನ್ಯಾಯಾಲಯದ ತೀರ್ಪಿನ ಅನ್ವಯ ಇದು ನಡೆದಿದೆ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ನೈತಿಕವಾಗಿ ಇದು ಸರಿಯೇ?

ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂ ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಈ ಮೃದು ಹಿಂದುತ್ವ ಧೋರಣೆ ತಾಳಿದೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷ ತನ್ನ ನೀತಿ ಸಿದ್ಧಾಂತಗಳಿಗೆ ಎಳ್ಳು ನೀರು ಬಿಟ್ಟು ಕೇವಲ ಕ್ಷಣಿಕ ರಾಜಕೀಯ ಲಾಭಕ್ಕಾಗಿ ಇಬ್ಬಂದಿತನದಿಂದ ವರ್ತಿಸುತ್ತ ಬಂದ ಪರಿಣಾಮವಾಗಿ ಅದು ಇಂದು ಶೋಚನೀಯ ಸ್ಥಿತಿಗೆ ತಲುಪಿದೆ.ಲೋಕಸಭೆಯಲ್ಲಿ ಅದರ ಸಂಖ್ಯಾ ಬಲ ಎರಡಂಕಿಗೆ ಕುಸಿದಿದೆ.

ಮೃದು ಹಿಂದುತ್ವ ನೀತಿ ಕಾಂಗ್ರೆಸ್‌ಗೆ ರಾಜಕೀಯವಾಗಿ ಎಂದೂ ಲಾಭದಾಯಕವಾಗಿಲ್ಲ ತೊಂಭತ್ತರ ದಶಕದ ಬಾಬರಿ ಮಸೀದಿ ಕೆಡವಿದ ನಂತರದ ವರ್ಷಗಳಲ್ಲಿ ಇಂತಹ ಸಂದರ್ಭಸಾಧಕ ನಿಲುವು ತಾಳಿದಾಗೆಲ್ಲ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ.ಮೃದು ಹಿಂದುತ್ವ ನೀತಿಯ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತ ಬಂದಿದೆ. ಆದರೂ ಕಾಂಗ್ರೆಸ್ ನಾಯಕರು ದಾರಿ ತಪ್ಪುತ್ತಲೇ ಇದ್ದಾರೆ. ದಾರಿ ತಪ್ಪಿಸುವವರ ಬಲೆಗೆ ಬೀಳುತ್ತಲೇ ಇದ್ದಾರೆ.

ಕಳೆದ ಏಳು ವರ್ಷಗಳ ಮೋದಿ ನೇತೃತ್ವದ ನಾಗಪುರ ನಿಯಂತ್ರಿತ ಬಿಜೆಪಿ ಸರಕಾರದ ದುರಾಡಳಿತದಿಂದ ದೇಶ ದಿವಾಳಿಯ ಅಂಚಿಗೆ ಬಂದು ನಿಂತಿದೆ.ಕೊರೋನ ಬರುವ ಮೊದಲೇ ಕುಸಿಯುತ್ತಲೇ ಇದ್ದ ದೇಶದ ಆರ್ಥಿಕತೆ ಕೊರೋನ ನಂತರ ಇನ್ನೂ ಹದಗೆಟ್ಟಿದೆ. ಬೀದಿಗೆ ಬಿದ್ದ ವಲಸೆ ಕಾರ್ಮಿಕರು ಇನ್ನೂ ನೆಲೆ ಕಂಡುಕೊಂಡಿಲ್ಲ. ಅನೇಕ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅನೇಕ ದೊಡ್ಡ ಉದ್ದಿಮೆಗಳಲ್ಲಿ ಕೂಡ ಆರ್ಥಿಕ ಬಿಕ್ಕಟ್ಟಿನ ನೆಪ ಮುಂದೆ ಮಾಡಿ ನೌಕರರನ್ನು ಮನೆಗೆ ಕಳಿಸುತ್ತಿದ್ದಾರೆ. ಈ ನಡುವೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಅವರ ಕೆಲಸದ ಅವಧಿಯನ್ನು ಎಂಟು ತಾಸುಗಳಿಂದ ಹತ್ತು ತಾಸುಗಳಿಗೆ ಹೆಚ್ಚಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಕೂಡ ನೌಕರರನ್ನು ಮನೆಗೆ ಕಳಿಸಲಾಗುತ್ತಿದೆ. ವಲಸೆ ಕಾರ್ಮಿಕರು ಹಳ್ಳಿಗಳಿಗೆ ಬಂದ ಪರಿಣಾಮವಾಗಿ ಗ್ರಾಮೀಣ ಆರ್ಥಿಕತೆಯ ಮೇಲೆ ತೀವ್ರವಾದ ಒತ್ತಡ ಬೀಳುತ್ತಿದೆ. ಬ್ಯಾಂಕಿಂಗ್ ವಲಯದಲ್ಲಿ ಅರಾಜಕತೆ ಉಂಟಾಗಿದೆ, ಕೊರೋನ ಸಂದರ್ಭವನ್ನು ಬಳಸಿಕೊಂಡು ದೇಶದ ಅಮೂಲ್ಯವಾದ ಸಂಪತ್ತನ್ನು ಖಾಸಗಿ ರಂಗದ ರಣ ಹದ್ದುಗಳಿಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್‌ನಂತಹ ಪ್ರಮುಖ ವಿರೋಧ ಪಕ್ಷ ಬೀದಿಗೆ ಬಂದು ನೊಂದವರಿಗೆ ಆಸರೆಯಾಗಿ ನಿಂತು ಬಿಜೆಪಿ ಸರಕಾರದ ದಿವಾಳಿಕೋರ ನೀತಿಯನ್ನು ಬಯಲಿಗೆಳೆಯಬೇಕಾಗಿತ್ತು. ಆದರೆ ಅದು ತನ್ನ ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಗಾಳಿಗೆ ತೂರಿ ಸಂಘಪರಿವಾರದ ಅಜೆಂಡಾದ ಜಾರಿಗೆ ಪರೋಕ್ಷವಾಗಿ ಸಹಕರಿಸುತ್ತಿರುವುದು ವಿಷಾದದ ಸಂಗತಿಯಾಗಿದೆ.

ಬಿಜೆಪಿಗೆ ಒಂದು ಸಿದ್ಧಾಂತವಿದೆ. ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ವೇದಿಕೆ. ಚುನಾವಣಾ ರಾಜಕಾರಣಕ್ಕಾಗಿ ಏನೇ ವೇಷ ಹಾಕಿದರೂ ಅಂತಿಮವಾಗಿ ಅದು ಬದ್ಧವಾಗಿರುವುದು ಮಾತೃ ಸಂಘಟನೆಯ ಹಿಂದೂ ರಾಷ್ಟ್ರ ನಿರ್ಮಾಣದ ಸಿದ್ಧಾಂತಕ್ಕೆ. ಚುನಾವಣೆ ಮೂಲಕ ಅಧಿಕಾರಕ್ಕೆ ಬಂದು ಕ್ರಮೇಣ ಸಂವಿಧಾನದ ಚಟ್ಟ ಕಟ್ಟಿ ಮನುವಾದಿ ಹಿಂದೂ ರಾಷ್ಟ್ರ ನಿರ್ಮಿಸುವುದು ಅದರ ಹಿಡನ್ ಅಜೆಂಡಾ. ಇದು ದೇಶಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲೇ ಪ್ರಸ್ತಾಪಕ್ಕೆ ಬಂದಿತ್ತು. ಆದರೆ ಮಹಾತ್ಮಾ ಗಾಂಧೀಜಿಯವರ ಮಾರ್ಗದರ್ಶನದಲ್ಲಿದ್ದ ಹಾಗೂ ನೆಹರೂ, ಪಟೇಲ್ ನೇತೃತ್ವದಲ್ಲಿದ್ದ ರಾಷ್ಟ್ರೀಯ ಕಾಂಗ್ರೆಸ್ ಹಿಂದೂ ರಾಷ್ಟ್ರ ಸಿದ್ಧಾಂತವನ್ನು ವಿರೋಧಿಸಿ ಜಾತ್ಯತೀತ (ಮತ ನಿರಪೇಕ್ಷ) ಭಾರತಕ್ಕೆ ಒಲವು ತೋರಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಬೇರೆ ಬೇರೆ ರೂಪದಲ್ಲಿ ಪಾಲ್ಗೊಂಡಿದ್ದ ನೇತಾಜಿ ಸುಭಾಷ್‌ಚಂದ್ರ ಭೋಸ್ ಮತ್ತು ಶಹೀದ್ ಭಗತ್‌ಸಿಂಗ್ ಅಂಥವರು ಕೂಡ ಸ್ವತಂತ್ರ ಭಾರತ ಸೆಕ್ಯುಲರ್ ಭಾರತವಾಗಬೇಕೆಂದು ಬಯಸಿದವರು. ಹೀಗಾಗಿ ಸೆಕ್ಯುಲರ್ ಭಾರತಕ್ಕೆ ಪೂರಕವಾದ ಸಂವಿಧಾನವನ್ನು ರಚಿಸುವ ಹೊಣೆಯನ್ನು ಬಾಬಾ ಸಾಹೇಬರು ಹೊತ್ತು ಕೊಂಡರು. ಅದೇ ಸಂವಿಧಾನ ಈಗಲೂ ದೇಶವನ್ನು ಮುನ್ನಡೆಸುತ್ತಿದೆ.

ಹೀಗೆ ಮತ ನಿರಪೇಕ್ಷದ ತನ್ನದೇ ಆದ ಸಿದ್ಧಾಂತವನ್ನು ಹೊಂದಿರುವ ಕಾಂಗ್ರೆಸ್‌ನ ಪರಂಪರೆ ಇಂದಿನ ಹಸಿ ಬಿಸಿ ಅವಕಾಶವಾದಿ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಹೀಗಾಗಿ ಅಯೋಧ್ಯೆಯ ಭೂಮಿ ಪೂಜೆಯ ದಿನ ಕೇಸರಿ ಶಾಲು ಹಾಕಿಕೊಂಡು ಕುಣಿದಾಡಿದರು. ಈ ಬಗ್ಗೆ, ಮಣಿ ಶಂಕರ್ ಅಯ್ಯರ್ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಹೊಸ ಪೀಳಿಗೆಗೆ ಚಾರಿತ್ರಿಕ ಸಂಗತಿಗಳ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ. ಸಂಘಪರಿವಾರ ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳ ಮೂಲಕ ಸುಳ್ಳು ಸಂಗತಿಗಳನ್ನೇ ಸತ್ಯವೆಂದು ಬಿಂಬಿಸುತ್ತಿದೆ. ಅನೇಕ ಶಾಲಾ ಶಿಕ್ಷಕರು ಕೂಡ ಮಕ್ಕಳ ತಲೆಯಲ್ಲಿ ಒಂದು ಸಮುದಾಯದ ಬಗ್ಗೆ ಗಾಂಧಿ, ನೆಹರೂ ಮುಂತಾದ ಸ್ವಾತಂತ್ರ್ಯ ಹೋರಾಟದ ಅಗ್ರಣಿಗಳ ಬಗ್ಗೆ ವಿಷ ತುಂಬುತ್ತಿದ್ದಾರೆ. ಈ ಹೊಸ ಪೀಳಿಗೆಯ ಸಂಪರ್ಕ ಬೆಳೆಸಿ ಬಹುತ್ವ ಭಾರತದ ನಿಜ ಚರಿತ್ರೆಯನ್ನು ತಿಳಿಸುವಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಸೆಕ್ಯುಲರ್ ಪಕ್ಷಗಳು ವಿಫಲಗೊಂಡಿವೆ. ಈ ಗೊಂದಲದ ಜೊತೆಗೆ ಚುನಾವಣಾ ಗೆಲುವಿನ ಅವಕಾಶವಾದ ಬೆರತು ಕಾಂಗ್ರೆಸ್ ನಗೆಪಾಟಲಿಗೀಡಾಗಿದೆ. ಹಿಂದೆ ಒಂದು ಕಾಲವಿತ್ತು ಯಾರು ಹೆಚ್ಚು ಜಾತ್ಯತೀತರು ಎಂದು ಬಿಂಬಿಸಿಕೊಳ್ಳಲು ರಾಜಕೀಯ ಪಕ್ಷಗಳಲ್ಲಿ ಪೈಪೋಟಿ ನಡೆಯುತ್ತಿತ್ತು. ಭಾರತೀಯ ಜನತಾ ಪಕ್ಷ ಕೂಡ ಎಂಭತ್ತರ ದಶಕದಲ್ಲಿ ಮುಂಬೈನ ಸ್ಥಾಪನಾ ಅಧಿವೇಶನದಲ್ಲಿ ತನ್ನನ್ನು ಸಮಾಜವಾದಿ ಸೆಕ್ಯುಲರ್ ಪಕ್ಷ ಎಂದು ಕರೆದುಕೊಳ್ಳಬೇಕಾಗಿ ಬಂದಿತ್ತು. ಆದರೆ ಈಗ ತಾನು ನೈಜ ಹಿಂದುತ್ವವಾದಿ ಪಕ್ಷ ಎಂದು ತೋರಿಸಿಕೊಳ್ಳುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ನಡೆದಂತೆ ಕಾಣುತ್ತದೆ.

ಇದು ಕಾಂಗ್ರೆಸ್‌ನ ಅಳಿವು ಉಳಿವಿನ ಪ್ರಶ್ನೆ. ತಾನು ನಡೆದು ಬಂದ ದಾರಿಯನ್ನು ಅದು ಹೊರಳಿ ನೋಡಿಕೊಂಡು ಮುಂದೆ ಯಾವ ದಾರಿಯಲ್ಲಿ ಸಾಗಬೇಕೆಂದು ತೀರ್ಮಾನಿಸಬೇಕು. ದೇಶ ವಿಭಜನೆಯ ಸಂದರ್ಭದಲ್ಲಿ ಬಾಪೂಜಿ ಮಾಡಿದ ನೌಖಾಲಿ ಯಾತ್ರೆಯನ್ನು ನೆನಪು ಮಾಡಿಕೊಳ್ಳಬೇಕು. ಆಗ ದಿಲ್ಲಿಯಲ್ಲಿ ಹಿಂಸಾಚಾರ ನಡೆದಾಗ ಹಿಂದೂಗಳು ಆಕ್ರಮಿಸಿಕೊಂಡ ಮಸೀದಿಗಳನ್ನು ಮುಸ್ಲಿಮರಿಗೆ ವಾಪಸು ಕೊಡಬೇಕೆಂದು ಗಾಂಧೀಜಿ ಪಟ್ಟು ಹಿಡಿದಿದ್ದರು. ದೇಶದ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಕೋಮುವಾದಿ ಪಕ್ಷಗಳೊಂದಿಗೆ, ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ನಿರಾಕರಿಸಿದ್ದರು. ‘‘ಕಾಂಗ್ರೆಸ್ ಚುನಾವಣೆಯಲ್ಲಿ ಸೋತರೂ ಅಡ್ಡಿಯಿಲ್ಲ ಆದರೆ ಧರ್ಮದ ಹೆಸರಿನಲ್ಲಿ ಜನರಲ್ಲಿ ಕೋಮುದ್ವೇಷದ ವಿಷಬೀಜವನ್ನು ಬಿತ್ತುವವರನ್ನು ಸಹಿಸುವುದಿಲ್ಲ’’ ಎಂದು ಹೇಳಿದ್ದರು.

ಗಾಂಧೀಜಿ ರಾಮರಾಜ್ಯ ಎಂದು ಹೇಳಿದ್ದರು ನಿಜ. ಆದರೆ ಅದು ಈಗ ಇವರು ಹೇಳುತ್ತಿರುವ ರಾಮರಾಜ್ಯವಲ್ಲ. ಗಾಂಧಿಯವರ ರಾಮ ರಾಜ್ಯದಲ್ಲಿ ಹಿಂದೂಗಳು ಮಾತ್ರವಲ್ಲ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು ಹೀಗೆ ಎಲ್ಲರೂ ಇದ್ದರು. ಗಾಂಧಿ ಆಶ್ರಮದಲ್ಲಿ ‘‘ಈಶ್ವರ ಅಲ್ಲಾ ತೇರೇ ನಾಮ್ ಸಬ್ ಕೊ ಸನ್ಮತಿ ದೇ ಭಗವಾನ್’’ ಎಂಬುದು ನಿತ್ಯದ ಭಜನೆಯ ಹಾಡಾಗಿತ್ತು. ಬಹುತ್ವದ ಈ ಬದ್ಧತೆಗಾಗಿ ಅವರು ಪ್ರಾಣವನ್ನೇ ಕೊಟ್ಟರು. ಅವರ ಎದೆಗೆ ಯಾರು ಗುಂಡಿಕ್ಕಿ ಕೊಂದರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆ ಕೊಂದವರೇ ಈಗ ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳಲ್ಲಿ ನಿತ್ಯವೂ ಗಾಂಧಿಯ ತೇಜೋವಧೆ ಮಾಡುತ್ತ ಇನ್ನೊಂದೆಡೆ ಗಾಂಧಿ ಹೆಸರನ್ನು ತಮ್ಮ ಅಜೆಂಡಾ ಜಾರಿಗಾಗಿ ಬಳಸಿಕೊಳ್ಳುತ್ತಿದ್ದಾರೆ.

ಇನ್ನು ಬಾಬಾ ಸಾಹೇಬರಂತೂ ಈ ಮನುವ್ಯಾಧಿಗಳನ್ನು ವಿರೋಧಿಸುತ್ತಲೇ ಬಂದರು. ‘‘ಭಾರತ ಒಂದು ವೇಳೆ ಹಿಂದೂ ರಾಷ್ಟ್ರವಾದರೆ ನಾಶವಾಗಿ ಹೋಗುತ್ತದೆ’’ ಎಂದು ಹೇಳುತ್ತಲೇ ಇದ್ದರು. ಅಂಬೇಡ್ಕರ್ ಬರೆದ 22 ಸಂಪುಟಗಳು ಕನ್ನಡದಲ್ಲಿ ಬಂದಿವೆ. ಅದನ್ನು ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ಅವುಗಳನ್ನು ಓದಿದರೆ ಅವರು ಹೇಗಿದ್ದರೆಂಬುದು ತಿಳಿಯುತ್ತದೆ.

ಕೊನೆಯದಾಗಿ ಕಾಂಗ್ರೆಸ್ ತನ್ನ ಸಿದ್ಧಾಂತ, ಕಾರ್ಯಕ್ರಮಗಳೊಂದಿಗೆ ಬಿಜೆಪಿಯಂತಹ ಕೋಮುವಾದಿ ಶಕ್ತಿಗಳನ್ನು ಎದುರಿಸಿ ಹೋರಾಡಬೇಕು. ಇಲ್ಲಿ ಚುನಾವಣಾ ಸೋಲು, ಗೆಲುವುಗಳು ಮುಖ್ಯವಲ್ಲ. ಇಂತಹ ಸೈದ್ಧಾಂತಿಕ ಬದ್ಧತೆಯೇ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಬಲ್ಲದು. ಉಳಿದವರಂತೆ ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳೆಂದು ನಾನು ಹೇಳುವುದಿಲ್ಲ. ಆರ್ಥಿಕ ಧೋರಣೆಯ ಪ್ರಶ್ನೆಯಲ್ಲಿ ಅದು ನವ ಉದಾರವಾದಿ ಮಾರ್ಗದಲ್ಲಿ ಹೊರಟಿರಬಹುದು. ಆದರೆ ಕಾಂಗ್ರೆಸ್ ಬಿಜೆಪಿಯಂತೆ ಕೋಮುವಾದಿ ಫ್ಯಾಶಿಸ್ಟ್ ಪಕ್ಷವಲ್ಲ. ಅದು ಈಗಾಗಲೇ ತನ್ನ ಎದುರಿನ ಸುವರ್ಣಾವಕಾಶ ಕಳೆದುಕೊಂಡಿದೆ. ಇನ್ನಾದರೂ ತನ್ನ ತಪ್ಪನ್ನು ತಿದ್ದಿಕೊಂಡರೆ ಅದಕ್ಕೆ ಭವಿಷ್ಯವಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News