“ಬುದ್ಧ ಹುಟ್ಟಿದ್ದು ನೇಪಾಳದಲ್ಲಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ”

Update: 2020-08-09 18:20 GMT

ಹೊಸದಿಲ್ಲಿ: ವೆಬಿನಾರ್ ಒಂದರಲ್ಲಿ ಮಾತನಾಡುತ್ತಿದ್ದ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ‘ಬುದ್ಧ ಭಾರತೀಯ’ ಎಂದು ಹೇಳಿಕೆ ನೀಡಿರುವುದರ ವಿರುದ್ಧ ನೇಪಾಳ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಿರುವ ಕೇಂದ್ರ ಸರಕಾರ ‘ಬುದ್ಧ ನೇಪಾಳದಲ್ಲಿ ಹುಟ್ಟಿದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದಿದೆ.

ವೆಬಿನಾರ್ ಒಂದರಲ್ಲಿ ಶನಿವಾರ ಮಾತನಾಡುತ್ತಿದ್ದ ವೇಳೆ ಜೈಶಂಕರ್, “ಶ್ರೇಷ್ಠ ಭಾರತೀಯರಲ್ಲಿ ಗೌತಮ ಬುದ್ಧ ಮತ್ತು ಮಹಾತ್ಮಾ ಗಾಂಧೀಜಿ ಇದ್ದಾರೆ” ಎಂದು ಹೇಳಿದ್ದರು.

ಈ ಬಗ್ಗೆ ಮರುದಿನ ಹೇಳಿಕೆ ನೀಡಿದ್ದ ನೇಪಾಳ ವಿದೇಶಾಂಗ ಸಚಿವಾಲಯ “ಐತಿಹಾಸಿಕ ಮತ್ತು ಪುರಾತತ್ವ ದಾಖಲೆಗಳು ಗೌತಮ ಬುದ್ಧ ನೇಪಾಳದಲ್ಲಿ ಹುಟ್ಟಿದ್ದು ಎನ್ನುವುದನ್ನು ಸಾಬೀತುಪಡಿಸಿದೆ” ಎಂದಿತ್ತು.

2014ರಲ್ಲಿ ನೇಪಾಳ ಸಂಸತ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣದಲ್ಲೂ ಅವರು , ಬುದ್ಧ ನೇಪಾಳದಲ್ಲಿ ಹುಟ್ಟಿದವನು ಎಂದು ಹೇಳಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿತ್ತು.

ಕೂಡಲೇ ಪ್ರತಿಕ್ರಿಯಿಸಿರುವ ಭಾರತ ವಿವಾದಕ್ಕೆ ತೆರೆ ಎಳೆದಿದೆ.

“ವಿದೇಶಾಂಗ ಸಚಿವರ ಹೇಳಿಕೆಯು ನಮ್ಮ ಬೌದ್ಧ ಪರಂಪರೆಯನ್ನು ಉಲ್ಲೇಖಿಸಿದ್ದಾಗಿತ್ತು. ಗೌತಮ ಬುದ್ಧ ಜನಿಸಿದ್ದು ನೇಪಾಳದಲ್ಲಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News