ಐಪಿಎಲ್ ಪ್ರಾಯೋಜಕತ್ವ ಕೈ ಬಿಟ್ಟಿರುವುದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗದು: ಗಂಗುಲಿ

Update: 2020-08-10 07:02 GMT

ಹೊಸದಿಲ್ಲಿ: ಈವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದ್ದ ಚೀನಾದ ಮೊಬೈಲ್ ಕಂಪೆನಿ ವಿವೊ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದದ ಸ್ಥಗಿತದಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದಾರೆ.

ಭಾರತ-ಚೀನಾ ಗಡಿಭಾಗದಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ನೆಲೆಸಿರುವ ಕಾರಣ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕೂಗು ದೇಶದಲ್ಲಿ ಜೋರಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟಂಬರ್ 19ರಿಂದ ಯುಎಇನಲ್ಲಿ ಆರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಬಿಸಿಸಿಐ ಹಾಗೂ ವಿವೊ ತಮ್ಮ ಪಾಲುದಾರಿಕೆಯನ್ನು ಸ್ಥಗಿತಗೊಳಿಸಲು ಗುರುವಾರ ನಿರ್ಧರಿಸಿದ್ದವು. ಐಪಿಎಲ್‌ನ ವಾಣಿಜ್ಯ ಆದಾಯದಲ್ಲಿ ಶೀರ್ಷಿಕೆ ಪ್ರಾಯೋಜಕತ್ವ ಗಮನಾರ್ಹ ಪಾತ್ರವಹಿಸಿದ್ದು, ಇದರಲ್ಲಿ ಬರುವ ಆದಾಯದಲ್ಲಿ ಅರ್ಧದಷ್ಟನ್ನು 8 ಫ್ರಾಂಚೈಸಿಗಳಿಗೆ ಹಂಚಲಾಗುತ್ತಿತ್ತು. ವಿವೊ 2018ರಿಂದ 2022ರ ತನಕ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕನ್ನು 2,190 ಕೋ.ರೂ.ಗೆ ಗೆದ್ದುಕೊಂಡಿತ್ತು. ವಾರ್ಷಿಕವಾಗಿ ಅಂದಾಜು 440 ಕೋ.ರೂ. ಮೊತ್ತ ಪಾವತಿಸಬೇಕಾಗಿತ್ತು.

 ‘‘ನಾನು ಇದನ್ನು ಆರ್ಥಿಕ ಬಿಕ್ಕಟ್ಟು ಎಂದು ಕರೆಯಲಾರೆ. ಇದು ಸಣ್ಣ ಹಿನ್ನಡೆ ಅಷ್ಟೇ. ಬಿಸಿಸಿಐಗೆ ಭದ್ರ ಬುನಾದಿ ಇದೆ. ಈ ಹಿಂದಿನ ಆಟಗಾರರು, ಆಡಳಿತಗಾರರು ಕ್ರಿಕೆಟ್ ಹಾಗೂ ಮಂಡಳಿಯನ್ನು ಬಹಳ ಗಟ್ಟಿಗೊಳಿಸಿದ್ದಾರೆ. ಬಿಸಿಸಿಐಗೆ ಎಲ್ಲವನ್ನು ನಿರ್ವಹಿಸುವ ತಾಕತ್ತಿದೆ. ಈ ರೀತಿಯ ಪರಿಸ್ಥಿತಿಗೆ ನಮ್ಮ ಬಳಿ ಯಾವಾಗಲೂ ಪರ್ಯಾಯ ಯೋಜನೆ ಇರುತ್ತದೆ. ಎ ಹಾಗೂ ಬಿ ಯೋಜನೆಯನ್ನು ಪರಿಣತರು, ಸೂಕ್ಷ್ಮಮತಿಗಳಾದ ಬ್ರಾಂಡ್ ಹಾಗೂ ಕಾರ್ಪೊರೇಟರ್ ತಜ್ಞರು ಸಿದ್ಧಪಡಿಸುತ್ತಾರೆ. ಸಮರ್ಥವಾದ ವೃತ್ತಿಪರತೆ ಇದ್ದಾಗ ಆತಂಕ ಇರುವುದಿಲ್ಲ. ದೀರ್ಘಕಾಲದ ಸಿದ್ಧತೆ ಇದ್ದಾಗ ತೊಂದರೆಯಾಗುವುದಿಲ್ಲ. ಮಧ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಿಸಲು ಸಾಧ್ಯವಾಗುತ್ತದೆ. ಯಾವುದೂ ರಾತ್ರಿ ಕಳೆದು ಬೆಳಗಾಗುವುದರೊಳಗೆ ಆಗುವುದಿಲ್ಲ. ನಷ್ಟಗಳನ್ನು ಎದುರಿಸಲು ಸಜ್ಜಾಗಲು ನಾವು ದೀರ್ಘ ಸಮಯದಿಂದ ತಯಾರಿ ನಡೆಸಬೇಕಾಗುತ್ತದೆ ’’ಎಂದು ವೆಬಿನಾರ್‌ನಲ್ಲಿ ಗಂಗುಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News