ರಶ್ಯಾದ ಕೊರೋನ ಲಸಿಕೆಯ ಸುರಕ್ಷಾ ಮಾಹಿತಿ ಪರಿಶೀಲನೆ: ವಿಶ್ವ ಆರೋಗ್ಯ ಸಂಸ್ಥೆ

Update: 2020-08-11 17:34 GMT

ಜಿನೇವ, ಆ.11: ಕೊರೋನ ಸೋಂಕಿಗೆ ಪ್ರಪ್ರಥಮ ಲಸಿಕೆ ಸಿದ್ಧವಾಗಿದೆ ಎಂಬ ರಶ್ಯಾದ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಸುರಕ್ಷತಾ ಅಂಶಗಳ ಬಗ್ಗೆ ಕಠಿಣ ಪರಿಶೀಲನೆ ನಡೆಸಿದ ಬಳಿಕವಷ್ಟೇ ಯಾವುದೇ ಔಷಧಿಗೆ ತನ್ನ ಅನುಮೋದನೆ ದೊರಕಲಿದೆ ಎಂದು ಹೇಳಿದೆ.

ಕೊರೋನ ಸೋಂಕಿನ ವಿರುದ್ಧ ಸುಸ್ಥಿರ ರೋಗ ನಿರೋಧಕ ಸಾಮರ್ಥ್ಯವನ್ನು ಸಾಬೀತುಗೊಳಿಸಿದ ವಿಶ್ವದ ಪ್ರಥಮ ಲಸಿಕೆಯ ಸಾರ್ವಜನಿಕ ಬಳಕೆಗೆ ರಶ್ಯಾ ಅನುಮೋದನೆ ನೀಡಿದೆ ಎಂದು ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದರು. ಸ್ಪುಟ್ನಿಕ್ ವಿ ಎಂಬ ಹೆಸರಿನ ಈ ಲಸಿಕೆಯನ್ನು ರಶ್ಯದ ರಕ್ಷಣಾ ಇಲಾಖೆಯ ಸಹಯೋಗದಲ್ಲಿ ಗಮೇಲಿಯಾ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಈ ಬಗ್ಗೆ ರಶ್ಯಾದ ಆರೋಗ್ಯ ಇಲಾಖೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಸಂಭಾವ್ಯ ಅನುಮೋದನೆಗೆ ಅಗತ್ಯದ ಪೂರ್ವ ಅರ್ಹತೆಯ ಬಗ್ಗೆ ಮಾತುಕತೆ ಮುಂದುವರಿದಿದೆ. ಎಲ್ಲಾ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಅಂಶಗಳ ಕಠಿಣ ಪರಿಶೀಲನೆ ಮತ್ತು ಮೌಲ್ಯಮಾಪನ ಪ್ರಕ್ರಿಯೆ ಪೂರ್ವ ಅರ್ಹತೆಯ ಭಾಗವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ತಾರಿಕ್ ಜಸರೆವಿಕ್ ಆನ್‌ಲೈನ್ ಮೂಲಕ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಕೊರೋನ ಸೋಂಕಿನ ವಿರುದ್ಧದ ಔಷಧಿಯಾಗಿ ವಿಶ್ವದೆಲ್ಲೆಡೆ 165 ಲಸಿಕೆ ಅಭಿವೃದ್ಧಿ ಹಂತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಜುಲೈ 31ರಂದು ಮಾಹಿತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News