NEP ಶಿಕ್ಷಣ ನೀತಿ-2020: ಪ್ರತಿಗಾಮಿ ಇಂಜಿನ್‌ಗೆ ಹುಸಿ ಆದರ್ಶದ ಬೋಗಿಗಳು

Update: 2020-08-11 19:30 GMT

ಭಾಗ 1

ವಾಸ್ತವದಲ್ಲಿ ಯಾವುದೇ ಸರಕಾರದ ಶಿಕ್ಷಣ ನೀತಿಗಳನ್ನು ಆ ಸರಕಾರದ ಇತರ ನೀತಿಗಳಿಂದ ಹೊರತುಪಡಿಸಿ ಅರ್ಥಮಾಡಿಕೊಳ್ಳಲಾಗದು. ಅದು ಆ ಸರಕಾರದ ಸಾಮಾಜಿಕ-ಆರ್ಥಿಕ ನೀತಿಗಳ ಭಾಗವಾಗಿರುತ್ತದೆ ಮತ್ತು ಆ ನೀತಿಗಳಿಗೆ ಪೂರಕವಾಗಿಯೇ ಇರುತ್ತದೆ. ಹೀಗಾಗಿ ಸಾಮಾಜಿಕ-ರಾಜಕೀಯ ನೀತಿಗಳಲ್ಲಿ ಅತ್ಯಂತ ಪ್ರತಿಗಾಮಿಯಾಗಿರುವ ಸರಕಾರವೊಂದರ ಶಿಕ್ಷಣ ನೀತಿ ಮಾತ್ರ ಸಮಾಜಮುಖಿಯಾಗಿರಲು ಸಾಧ್ಯವಿಲ್ಲ.


ಇಡೀ ದೇಶ ಕೋವಿಡ್ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಕೇಂದ್ರ ಸರಕಾರ ಯಾವ ಸಮಾಲೋಚನೆಯೂ ಇಲ್ಲದೆ NEP ನವ ಶಿಕ್ಷಣ ನೀತಿ-2020ಅನ್ನು ಅಂತಿಮಗೊಳಿಸಿ ಜಾರಿ ಮಾಡಿದೆ. 1976ರಲ್ಲಿ ಅದನ್ನು ರಾಜ್ಯಗಳ ಪಟ್ಟಿಯಿಂದ ಕೇಂದ್ರ ಹಾಗೂ ರಾಜ್ಯಗಳೆರಡಕ್ಕೂ ಸಂಬಂಧಪಟ್ಟ ಸಹವರ್ತಿ ಪಟ್ಟಿಯಲ್ಲಿ ಸೇರಿಸಿದರೂ ಶಿಕ್ಷಣದ ಪ್ರಧಾನ ಜವಾಬ್ದಾರಿ ಈಗಲೂ ರಾಜ್ಯಗಳದ್ದೇ ಆಗಿದೆ. ಹೀಗಿರುವಾಗ ಮುಂದಿನ ಎರಡು ದಶಕಗಳಲ್ಲಿ ಇಡೀ ದೇಶದ ಶಿಕ್ಷಣ ವ್ಯವಸ್ಥೆಯ ಚಹರೆಯನ್ನೇ ಬದಲಿಸಬೇಕೆಂಬ ಉದ್ದೇಶವನ್ನು ಹೊಂದಿರುವ NEP-2020ರ ಕರಡನ್ನು ಯಾವುದೇ ರಾಜ್ಯ ಸರಕಾರಗಳ ಜೊತೆಯಾಗಲೀ, ಸಂಸತ್ತಿನಲ್ಲಾಗಲೀ ಸಮಾಲೋಚನೆಯನ್ನೂ ಮಾಡದೆ ತುರ್ತಾಗಿ ಜಾರಿಗೊಳಿಸಲಾಗಿದೆ.

ಇದರ ಜೊತೆಗೆ ಮೋದಿ ಸರಕಾರ ಮತ್ತೊಂದು ಕುತಂತ್ರವನ್ನೂ ಮಾಡಿದೆ. ಜುಲೈ 29ರಂದು ಸಂಜೆ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ NEP-2020 ಅನ್ನು ಘೋಷಿಸಿತು. ಆದರೆ ಆಗ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ NEP-2020ರ ಮುಖ್ಯಾಂಶಗಳು ಹಾಗೂ ಆ ನಂತರ ಮಾಧ್ಯಮಗಳಿಗೆ ತಲುಪಿಸಿದ 60 ಪುಟಗಳ ಪಠ್ಯವೇ ಬೇರೆ.. ಜುಲೈ 30ರ ಮಧ್ಯರಾತ್ರಿ ಮಾನವ ಸಂಪನ್ಮೂಲ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ 66 ಪುಟಗಳ NEP-2020ರ ಅಧಿಕೃತ ಪಠ್ಯವೇ ಬೇರೆ.. ಈ ಅಧಿಕೃತ ನೀತಿಯಲ್ಲಿ ಮಾಧ್ಯಮಗಳು ಹಾಡಿ ಹೊಗಳಿದ (ಉದಾ: 3ರಿಂದ 18 ವಯಸ್ಸಿನವರೆಗಿನ ಶಿಕ್ಷಣವನ್ನು ಆರ್‌ಟಿಇ ಅಡಿ ತರಲಾಗುವುದೆಂಬ ಪ್ರಮುಖ ಜನಮುಖೀ ಪ್ರಸ್ತಾಪ ಅಧಿಕೃತ ನೀತಿಯಲ್ಲಿ ಮಾಯ..!) ಹಲವಾರು ಅಂಶಗಳು ಮಾಯವಾಗಿವೆ.

 ಇದರ ಜೊತೆಗೆ ಇನ್ನೂ ಹಲವಾರು ಭಾಷಾ ಕುತಂತ್ರಗಳ ಮೂಲಕ ಸರಕಾರವು ಈ ನೀತಿಯಲ್ಲಿನ ಅತ್ಯಂತ ಪ್ರತಿಗಾಮೀ ನೀತಿಯನ್ನು ಹುದುಗಿಸಿಡುವ ಪ್ರಯತ್ನವನ್ನು ಮಾಡಿದೆ. ಇಡೀ NEP-2020ರ ಪಠ್ಯದ ಭಾಷೆಕ್ರಾಂತಿಕಾರಕ. ಅದರ ಅನುಷ್ಠಾನದ ಯೋಜನೆ ಅತ್ಯಂತ ಪ್ರತಿಗಾಮಿ. ಆದ್ದರಿಂದ ಕೇವಲ ಭಾಷೆಗೆ ಮರುಳಾದರೆ ಮುಠ್ಠಾಳರಾಗುತ್ತೇವೆ.

ಆರ್ಥಿಕತೆ ಹೇಗೋ..ಶಿಕ್ಷಣ ನೀತಿ ಹಾಗೆ..

ವಾಸ್ತವದಲ್ಲಿ ಯಾವುದೇ ಸರಕಾರದ ಶಿಕ್ಷಣ ನೀತಿಗಳನ್ನು ಆ ಸರಕಾರದ ಇತರ ನೀತಿಗಳಿಂದ ಹೊರತು ಪಡಿಸಿ ಅರ್ಥಮಾಡಿಕೊಳ್ಳಲಾಗದು. ಅದು ಆ ಸರಕಾರದ ಸಾಮಾಜಿಕ-ಆರ್ಥಿಕ ನೀತಿಗಳ ಭಾಗವಾಗಿರುತ್ತದೆ ಮತ್ತು ಆ ನೀತಿಗಳಿಗೆ ಪೂರಕವಾಗಿಯೇ ಇರುತ್ತದೆ. ಹೀಗಾಗಿ ಸಾಮಾಜಿಕ-ರಾಜಕೀಯ ನೀತಿಗಳಲ್ಲಿ ಅತ್ಯಂತ ಪ್ರತಿಗಾಮಿಯಾಗಿರುವ ಸರಕಾರವೊಂದರ ಶಿಕ್ಷಣ ನೀತಿ ಮಾತ್ರ ಸಮಾಜಮುಖಿಯಾಗಿರಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ 20 ವರ್ಷಗಳ ನಂತರ 1966ರಲ್ಲಿ ಭಾರತದಲ್ಲಿ ಪ್ರಥಮ ಶಿಕ್ಷಣ ನೀತಿ-ಕೊಠಾರಿ ಆಯೋಗದ ನೀತಿಜಾರಿಯಾಯಿತು. ಆಗ ಸರಕಾರಗಳ ಸಾಮಾಜಿಕ ಹಾಗೂ ಆರ್ಥಿಕ ನೀತಿಗಳು ಪ್ರಧಾನವಾಗಿ ಭೂಮಾಲಕ ಹಾಗೂ ಬಂಡವಾಳಶಾಹಿಗಳ ಸೇವೆಗೆ ಪೂರಕವಾಗಿದ್ದರೂ ಕಲ್ಯಾಣರಾಜ್ಯ (ವೆಲ್ಫೇರ್ ಸ್ಟೇಟ್)ದ ಎರಕವು ವಿಧಿಸಿದ್ದ ಸೀಮೆಯೊಳಗಿದ್ದವು. ಹೀಗಾಗಿಯೇ ಶಿಕ್ಷಣದಲ್ಲೂ ಅದೇ ಧೋರಣೆ ಪ್ರತಿಧ್ವನಿಸಿತ್ತು. ಕೊಠಾರಿಯವರ ಪ್ರಕಾರ ‘‘ಶಿಕ್ಷಣವು ಸಮಾಜದಲ್ಲಿನ ವರ್ಗ-ಜಾತಿ-ಲಿಂಗ ತಾರತಮ್ಯಗಳನ್ನು ನಿವಾರಿಸಲು ಅನುವು ಮಾಡಿಕೊಡುವ ರಕ್ತರಹಿತ ಕ್ರಾಂತಿಯಾಗಿತ್ತು.’’

ಇದಾದ 20 ವರ್ಷಗಳ ನಂತರ 1986ರಲ್ಲಿ ರಾಜೀವ್‌ ಗಾಂಧಿ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಿದಾಗ ದೇಶ ವೆಲ್ಫೇರ್ ಸ್ಟೇಟ್ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಮಾರುಕಟ್ಟೆ ಆರ್ಥಿಕತೆಯನ್ನು ಅಪ್ಪಿಕೊಳ್ಳುವ ಹೊಸ್ತಿಲಲ್ಲಿತ್ತು. ಹೀಗಾಗಿ ಆ ಶಿಕ್ಷಣ ನೀತಿಯಲ್ಲಿ ಸಾಮಾಜಿಕ ತಾರತಮ್ಯವನ್ನು ನಿವಾರಿಸುವುದಕ್ಕಿಂತ ಶಿಕ್ಷಣವನ್ನು ಮಾರುಕಟ್ಟೆ ಆರ್ಥಿಕತೆಯ ಅಗತ್ಯಕ್ಕೆ ತಕ್ಕಂತೆ ರೂಪಿಸುವ ಒತ್ತಿತ್ತು. ಇದಾದ 34 ವರ್ಷಗಳ ನಂತರ ಈಗ ಮೋದಿ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿರುವ ಹೊತ್ತಿನಲ್ಲಿ ಭಾರತವು ಸಂಪೂರ್ಣವಾಗಿ ವೆಲ್ಫೇರ್ ಸ್ಟೇಟ್‌ನ ನಾಟಕವನ್ನೂ ಕೈಬಿಟ್ಟು ಆಮೂಲಾಗ್ರವಾಗಿ ನವ ಉದಾರವಾದಿ ನೀತಿಯನ್ನು ಅನುಸರಿಸುತ್ತಿದೆ. ಪ್ರಭುತ್ವವು ಎಲ್ಲಾ ಜನಕಲ್ಯಾಣ ಯೋಜನೆಗಳಿಂದ ಮಾತ್ರವಲ್ಲ ಅಂತಹ ಯೋಚನೆಗಳಿಂದಲೂ ಹಿಂದೆಗೆದಿದೆ. ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ನೀತಿಗಳ ಮೂಲಕ ಎಲ್ಲಾ ಕ್ಷೇತ್ರಗಳಂತೆ ಶಿಕ್ಷಣವನ್ನೂ ಸಹ ದೇಶೀಯ ಮತ್ತು ಅಂತರ್‌ರಾಷ್ಟ್ರೀಯ ಕಾರ್ಪೊರೇಟ್ ಬಂಡವಾಳದ ಮಾರುಕಟ್ಟೆಗೆ ತೆರೆವುಗೊಳಿಸಲಾಗಿದೆ. ಆದ್ದರಿಂದ NEP-2020 ಕೂಡಾ ಭಾರತದಲ್ಲಿ ಹಾಲಿ ರಾಜ್ಯಭಾರ ಮಾಡುತ್ತಿರುವ ನವಬ್ರಾಹ್ಮಣಶಾಹಿ ಹಾಗೂ ನವಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಗೆ ಪೂರಕವಾಗಿಯೇ ರೂಪುಗೊಂಡಿರುವುದು ಅದರ ಭಾಷೆಯನ್ನು ಬಗೆದು ನೋಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ. 

ಸಂಪನ್ಮೂಲದ ಬಲವಿಲ್ಲದ ಹುಸಿ ಭರವಸೆಗಳು

ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಮೂಲಭೂತ ಸುಧಾರಣೆಗಳು ಬರಬೇಕೆಂದರೆ ಸರಕಾರವು ಅದಕ್ಕೆ ಅಗತ್ಯವಿರುವಷ್ಟು ಸಂಪನ್ಮೂಲವನ್ನು ಒದಗಿಸಬೇಕು. ಆದರೆ ಸ್ವಾತಂತ್ರ್ಯಾ ನಂತರ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಶಿಕ್ಷಣ ಕ್ಷೇತ್ರವನ್ನು ಆದ್ಯತಾ ಕ್ಷೇತ್ರವೆಂದು ಪರಿಗಣಿಸಲಿಲ್ಲ. ಹೀಗಾಗಿಯೇ 1966ರಷ್ಟು ಹಿಂದೆಯೇ ಕೊಠಾರಿ ಆಯೋಗ ದೇಶದ ಜಿಡಿಪಿಯ ಶೇ.6ರಷ್ಟು ಹಾಗೂ ಸರಕಾರಗಳ ವಾರ್ಷಿಕ ಬಜೆಟ್‌ನ ಶೇ.10ರಷ್ಟು ಸಂಪನ್ಮೂಲವನ್ನು ಶಿಕ್ಷಣಕ್ಕೆ ಎತ್ತಿಡಬೇಕೆಂದು ಸಲಹೆ ಮಾಡಿದ್ದರೂ ಯಾವ ಸರಕಾರಗಳೂ ಅದನ್ನು ಪಾಲಿಸಲಿಲ್ಲ.

ಅದರಲ್ಲೂ ಮೋದಿ ಸರಕಾರ ಅಧಿಕಾರಕ್ಕೆ ಬಂದ ಕಳೆದ 6 ವರ್ಷಗಳಲ್ಲಿ ಶಿಕ್ಷಣದ ಮೇಲಿನ ವೆಚ್ಚ ಜಿಡಿಪಿಯ ಶೇ.4ರಿಂದ ಶೇ.2.5ಕ್ಕೆ ಇಳಿದಿದೆ. ಹೀಗಿರುವಾಗ NEP-2020ರಲ್ಲಿ ಮತ್ತೆ ಶಿಕ್ಷಣಕ್ಕೆ ಜಿಡಿಪಿಯ ಶೇ. 6ರಷ್ಟು ಸಂಪನ್ಮೂಲವನ್ನು ಎತ್ತಿಡಲಾಗುವುದು ಎಂದು ಹೇಳಿದೆ! ಆದರೆ ಅದನ್ನು ಕಡ್ಡಾಯಗೊಳಿಸುವ ಯಾವುದೇ ಶಾಸನಾತ್ಮಕ ಅಥವಾ ಸಂವಿಧಾನಾತ್ಮಕ ಕ್ರಮಗಳ ಪ್ರಸ್ತಾಪ ನೀತಿಯಲ್ಲಿಲ್ಲ. ಹೀಗಾಗಿ ಈ ನೀತಿಯು ಖಾಲಿ ಜೇಬಿನಲ್ಲಿ ಪೇಟೆಯ ಸಂತೆಗೆ ಕರೆದುಕೊಂಡು ಹೋಗುತ್ತಿದೆಯಷ್ಟೆ.

ಉತ್ತಮ ಶಿಕ್ಷಣದ ಕ್ಯಾರೆಟ್ಟು-ಇರುವ ಶಿಕ್ಷಣವನ್ನು ಕಿತ್ತುಕೊಳ್ಳುವ ಒಳಗುಟ್ಟು:

 NEP-2020ರಲ್ಲಿ 2030ರ ವೇಳೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಸಂಪೂರ್ಣ ಹಾಜರಾತಿಯನ್ನೂ ಹಾಗೂ ಉನ್ನತ ಶಿಕ್ಷಣದಲ್ಲಿ ಶೇ. 50 ರಷ್ಟು ಹಾಜರಾತಿಯನ್ನು ಸಾಧಿಸುವುದಾಗಿ ಹೇಳಿಕೊಳ್ಳಲಾಗಿದೆ. ಅಂದರೆ ಪ್ರಾಥಮಿಕ ಶಿಕ್ಷಣದಲ್ಲಿ ಈಗಿರುವುದಕ್ಕಿಂತ ಹೆಚ್ಚುವರಿಯಾಗಿ 2.5 ಕೋಟಿ ಮಕ್ಕಳು ಹಾಗೂ ಉನ್ನತ ಶಿಕ್ಷಣದಲ್ಲಿ 3.5 ಕೋಟಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವುದಾಗಿ ಹೇಳಿಕೊಳ್ಳಲಾಗಿದೆ. ಅದರ ಅರ್ಥ ಹೆಚ್ಚೆಚ್ಚು ಶಾಲಾ- ಕಾಲೇಜುಗಳನ್ನು ತೆಗೆಯಲಾಗುತ್ತದೆ ಎಂದೇ? ಅಲ್ಲ. ಬದಲಿಗೆ ಈಗಿರುವ ಶಾಲಾ-ಕಾಲೇಜುಗಳನ್ನು ಮುಚ್ಚಲಾಗುವುದು ಎಂದು.. ಇದೇ ಮೋದಿ ಮಾಸ್ಟರ್ ಸ್ಟ್ರೋಕ್..!

 ಆದರೆ ಸರಕಾರಿ ಅಂಕಿ ಅಂಶಗಳೇ ಹೇಳುವಂತೆ ಪ್ರಾಥಮಿಕ ಶಾಲೆಯ ಮೆಟ್ಟಿಲು ಹತ್ತುವ 100 ಮಕ್ಕಳಲ್ಲಿ ಕೇವಲ 6 ಆದಿವಾಸಿ ಮಕ್ಕಳು, 8 ಮುಸ್ಲಿಂ ಸಮುದಾಯದ ಹಿನ್ನೆಲೆಯ ಮಕ್ಕಳು, 9 ದಲಿತ ಸಮುದಾಯದ ಮಕ್ಕಳು ಹಾಗೂ 12 ಹಿಂದುಳಿದ ಸಮುದಾಯದ ಮಕ್ಕಳು ಮಾತ್ರ 12ನೇ ತರಗತಿಯನ್ನು ದಾಟುತ್ತಾರೆ. ಅದಕ್ಕೆ ಈ ಮಕ್ಕಳ ಬಡ ಸಾಮಾಜಿಕ ಹಿನ್ನೆಲೆಯ ಜೊತೆಗೆ, ಬದುಕಿನ ಭರವಸೆ ಒದಗಿಸದ ಶಿಕ್ಷಣ, ಅವೈಜ್ಞಾನಿಕ ಪಠ್ಯ, ದಮನಕಾರಿ ತರಗತಿಯ ವಾತಾವರಣ ಹಾಗೂ ಅಪ್ರಜಾತಾಂತ್ರಿಕ ಶಾಲಾ ಪರಿಸರಗಳೇ ಪ್ರಮುಖ ಕಾರಣ.

ಇಂತಹ ಪರಿಸ್ಥಿತಿಯಲ್ಲಿ, ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಬೇಕೆಂದರೆ ಅಗತ್ಯವಿದ್ದದ್ದು ಈಗಿರುವ ಸರಕಾರಿ ಅಂಗನವಾಡಿ, ಶಾಲಾ- ಕಾಲೇಜುಗಳ ಹಾಗೂ ಅಲ್ಲಿನ ಉಪಾಧ್ಯಾಯರ ಸಂಖ್ಯೆಯ ಜೊತೆಗೆ ಗುಣಮಟ್ಟವನ್ನೂ ಹೆಚ್ಚಿಸುವ ನೀತಿ ಹಾಗೂ ಸಂಪನ್ಮೂಲಗಳ ಅಗತ್ಯವಿತ್ತು.

ಆದರೆ ಅದಕ್ಕೆ ತದ್ವಿರುದ್ಧವಾಗಿ NEP-2020ರಲ್ಲಿ ಹತ್ತಿರದಲ್ಲಿರುವ ಶಾಲೆಗಳನ್ನು ಮುಚ್ಚಿ ಹತ್ತು ಕಿ.ಮೀ. ದೂರದಲ್ಲಿ ಪ್ರಾಥಮಿಕ ಶಾಲೆ ಹಾಗೂ ಅದರ ಸುತ್ತ ಹಲವಾರು ಅಂಗನವಾಡಿಗಳು ಮತ್ತು ಪ್ರಾಥಮಿಕ ಶಾಲೆಗಳು ಇರುವ ‘ಕ್ಲಸ್ಟರ್’ ಅನ್ನು ಸೃಷ್ಟಿಸುವ ಪ್ರಸ್ತಾಪವನ್ನು ಮಾಡಿದೆ (NEP-2020, ಸೆಕ್ಷನ್7.1 7.6 ).
 ಅದೇ ರೀತಿ ಕಾಲೇಜು ಹಂತದಲ್ಲಿ ಈಗಿರುವ 55,000ಕ್ಕೂ ಹೆಚ್ಚು ಕಾಲೇಜುಗಳ ಸಂಖ್ಯೆಯನ್ನು 12,000ಕ್ಕೆ ಇಳಿಸಿ ದೊಡ್ಡದೊಡ್ಡ ಪಟ್ಟಣಗಳಲ್ಲಿ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ‘ಹಣಕಾಸು ಸ್ವಾಯತ್ತತೆ’ಯುಳ್ಳ ಹಾಗೂ ‘ಉನ್ನತ ಗುಣಮಟ್ಟದ’ ಉನ್ನತ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದು!? (NEP-2020, ಸೆಕ್ಷನ್10.45).

ಕಲಿಕಾ ಹಂತಗಳ ಪುನಾರಚನೆ: ಸಮಗ್ರ ಕಲಿಕೆಗೋ? ಅಗ್ಗದ ಕೂಲಿಗೋ?
NEP-2020ರಲ್ಲಿ ಬಹು ಚರ್ಚಿತವಾಗುತ್ತಿರುವ ಅಂಶ ಕಲಿಕಾ ಹಂತಗಳಲ್ಲಿ ಅದು ಪ್ರಸ್ತಾಪಿಸಿರುವ ಬದಲಾವಣೆ. ಅದರ ಪ್ರಕಾರ ಪ್ರಾಥಮಿಕ ಹಂತದಲ್ಲಿ ಈಗಿರುವ 10+2 ಶಿಕ್ಷಣ ಪದ್ಧತಿಯನ್ನು ಬದಲಾಯಿಸಿ ಮಗುವಿನ 3-18 ವಯಸ್ಸಿನ ತನಕ 15 ವರ್ಷಗಳ ಪ್ರಾಥಮಿಕ ಶಿಕ್ಷಣವನ್ನು 5+3+3+4 ಪದ್ಧತಿಯಲ್ಲಿ ವಿವಿಧ ಹಂತಗಳಲ್ಲಿ ಒದಗಿಸಲು ತೀರ್ಮಾನಿಸಲಾಗಿದೆ (NEP-2020, ಸೆಕ್ಷನ್4.1). ಹಾಗೆಯೇ ಉನ್ನತ ಶಿಕ್ಷಣದಲ್ಲಿದ್ದ 3 ವರ್ಷಗಳ ಪದವಿಯನ್ನು 4 ವರ್ಷಗಳ ಪದವಿಯನ್ನಾಗಿ ಮಾಡಿ ಸ್ನಾತಕೋತ್ತರ ಪದವಿಯನ್ನು ಒಂದು ವರ್ಷಕ್ಕೆ ಇಳಿಸಲಾಗಿದೆ. 4 ವರ್ಷಗಳ ಪದವಿ ವ್ಯವಸ್ಥೆಯನ್ನು Multiple Exit and Multi-Disciplinary ಆಗಿ ಮಾಡುವ ಪ್ರಸ್ತಾಪವಿದೆ. (ಸೆಕ್ಷನ್11.45). ಹಾಗೂ .ಜ್ಝಿ

ಕೋರ್ಸನ್ನು ರದ್ದುಗೊಳಿಸಲಾಗಿದೆ. ಇವೆಲ್ಲದರ ಹಿಂದಿನ ಘನವಾದ ಉದ್ದೇಶವಾದರೂ ಏನು? 
ಆದರೆ ಮಗುವಿನ 3ನೇ ವಯಸ್ಸಿನಿಂದ 8ನೇ ವಯಸ್ಸಿನವರೆಗಿನ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ತಳಹದಿ ಸ್ವರೂಪದ ಅಕ್ಷರ ಹಾಗೂ ಅಂಕಿ-ಸಂಖ್ಯೆಗಳ ಜ್ಞಾನವನ್ನು ಒದಗಿಸುವ ಹಂತವೆಂದು ವರ್ಗೀಕರಿಸಲಾಗಿದ್ದು ಅದರ ಜವಾಬ್ದಾರಿಯನ್ನು ಅಂಗನವಾಡಿ ಶಿಕ್ಷಕಿಯರಿಗೆ ಒದಗಿಸಲಾಗುತ್ತದೆ. ಅಂದರೆ ಈವರೆಗೆ ಔಪಚಾರಿಕ ಪ್ರಾಥಮಿಕ ಶಿಕ್ಷಣದ ಭಾಗವಾಗಿದ್ದ 1 ಹಾಗೂ 2ನೇ ತರಗತಿ ಶಿಕ್ಷಣವನ್ನು ಅಂಗನವಾಡಿಗೆ ವಹಿಸಲಾಗುತ್ತಿದೆ. ಹಾಗೂ ಈಗಾಗಲೇ ನೋಡಿದಂತೆ ಈ ಅಂಗನವಾಡಿಗಳು ಮೊದಲಿನಂತೆ ಮಕ್ಕಳ ವಸತಿಗೆ ಸನಿಹದಲ್ಲಿರದೆ ಹತ್ತು ಕಿ.ಮೀ. ದೂರದಲ್ಲಿ ಇತರ ಹಂತದ ಪ್ರಾಥಮಿಕ ಶಿಕ್ಷಣದ ಕ್ಲಸ್ಟರ್‌ನ ಭಾಗವಾಗಿರುತ್ತವೆ. ಹೀಗಾಗಿ ಮೊದಲಿಗೆ ಅಷ್ಟು ದೂರ 3-8 ವಯಸ್ಸಿನ ಮಕ್ಕಳನ್ನೂ ಅದರಲ್ಲೂ ಹೆಣ್ಣು ಮಕ್ಕಳನ್ನು ಪೋಷಕರು ಕಳಿಸಿಕೊಡುವುದೇ ಇಲ್ಲ. ಹೀಗಾಗಿ ಮೊದಲು ಏಕೋಪಾಧ್ಯಾಯ ಶಾಲೆಯಲ್ಲಿ ಲಭ್ಯವಾಗುತ್ತಿದ್ದ ಕನಿಷ್ಠ ಆಕ್ಷರಜ್ಞಾನದಿಂದಲೂ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಹಾಗೂ ಈವರೆಗೆ ಅಂಗನವಾಡಿಯಲ್ಲಿ ಲಭ್ಯವಾಗುತ್ತಿದ್ದ ಇತರ ಅನೌಪಚಾರಿಕ ಸಾಧನಗಳಿಗೂ ಮಕ್ಕಳು ಎರವಾಗುತ್ತಾರೆ. ಈಗಾಗಲೇ ಕನಿಷ್ಠ ವೇತನವೂ ಸಿಗದೆ ಸಕಲ ಬಗೆಯ ಶೋಷಣೆಗೂ ಗುರಿಯಾಗುತ್ತಿರುವ ಅಂಗನವಾಡಿ ಕಾರ್ಯಕರ್ತರಿಗೆ ಈವರೆಗೆ ಇರದಿದ್ದ ಬೋಧನಾ ಹೊರೆಯನ್ನು ಹೊರಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಅವರಿಗೆ ದಕ್ಕುವುದು ಆನ್‌ಲೈನ್‌ತರಬೇತಿಯೇ ಹೊರತು ಹೆಚ್ಚಿನ ಸಂಭಾವನೆಯಲ್ಲ ಹಾಗೂ 3ನೇ ತರಗತಿಯ ಪ್ರವೇಶಕ್ಕೆ ಮೊದಲು ಮಗುವು ಮೊದಲ ಪರೀಕ್ಷೆಯನ್ನು ಎದುರಿಸಬೇಕು. ಅದರಲ್ಲಿ ಫೇಲಾದರೆ ಮುಂದಿನ ಹಂತಕ್ಕೆ ತೇರ್ಗಡೆಯಿಲ್ಲ. ಇದರ ಪರಿಣಾಮವೇನೆಂದು ವಿಶೇಷವಾಗಿ ವಿವರಿಸಬೇಕಿಲ್ಲ (NEP-2020, ಸೆಕ್ಷನ್1, ಪು. 6).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News