2 ವಾರಗಳಲ್ಲಿ ಮೊದಲ ಬ್ಯಾಚ್‌ನ ಲಸಿಕೆ ಬಿಡುಗಡೆ: ರಶ್ಯ ಆರೋಗ್ಯ ಸಚಿವಾಲಯ

Update: 2020-08-12 17:37 GMT

ಮಾಸ್ಕೋ (ರಶ್ಯ), ಆ. 12: ಕೋವಿಡ್-19 ವಿರುದ್ಧದ ರಶ್ಯದ ಲಸಿಕೆಯ ಮೊದಲ ತಂಡದ ಉತ್ಪನ್ನಗಳು ಎರಡು ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ರಶ್ಯದ ಆರೋಗ್ಯ ಸಚಿವ ಮಿಖೈಲ್ ಮುರಾಶ್ಕೊ ಬುಧವಾರ ಹೇಳಿದ್ದಾರೆ.

ಮಂಗಳವಾರ ರಶ್ಯದ ಆರೋಗ್ಯ ಸಚಿವಾಲಯವು ಜಗತ್ತಿನ ಮೊದಲ ಕೊರೋನ ವೈರಸ್ ಲಸಿಕೆಯನ್ನು ನೋಂದಾಯಿಸಿದೆ. ‘ಸ್ಪೂತ್ನಿಕ್ 5’ ಎಂಬ ಹೆಸರಿನ ಲಸಿಕೆಯನ್ನು ಗಮಲೇಯ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ರಶ್ಯ ರಕ್ಷಣಾ ಸಚಿವಾಲಯವು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

‘‘ಲಸಿಕೆ ಬೇಕಿದ್ದವರಿಗೆ ಮಾತ್ರ ನೀಡಲಾಗುತ್ತದೆ. ಕೆಲವು ವೈದ್ಯರಲ್ಲಿ ಈಗಾಗಲೇ ಕೊರೋನ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯಿದೆ. ಅಂಥವರು 20 ಶೇಕಡದಷ್ಟು ಇದ್ದಾರೆ. ಅವರಿಗೆ ಲಸಿಕೆಯ ಅಗತ್ಯವಿರುವುದಿಲ್ಲ. ಇದನ್ನು ಅವರೇ ನಿರ್ಧರಿಸಬೇಕು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುರಾಶ್ಕೊ ಹೇಳಿದರು.

ಲಸಿಕೆಯ ವಿತರಣೆಯಲ್ಲಿ ರಶ್ಯನ್ನರಿಗೆ ಆದ್ಯತೆ ನೀಡಲಾಗುವುದಾದರೂ, ಅದನ್ನು ವಿದೇಶಗಳಿಗೂ ರಫ್ತು ಮಾಡಬಹುದಾಗಿದೆ’’ ಎಂದು ಆರೋಗ್ಯ ಸಚಿವರು ಹೇಳಿದರು.

ಲಸಿಕೆಯ ಗುಣಮಟ್ಟ ಕುರಿತ ಅಂಕಿಅಂಶಗಳು ಲಭ್ಯವಿಲ್ಲ: ಜರ್ಮನಿ

ರಶ್ಯದ ಕೊರೋನ ವೈರಸ್ ಲಸಿಕೆಯ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಜರ್ಮನಿ ಮಂಗಳವಾರ ಅನುಮಾನ ವ್ಯಕ್ತಪಡಿಸಿದೆ ಹಾಗೂ ಸಂಪೂರ್ಣ ಕ್ಲಿನಿಕಲ್ ಪ್ರಯೋಗಗಳ ಬಳಿಕವಷ್ಟೇ ಐರೋಪ್ಯ ಒಕ್ಕೂಟದಲ್ಲಿ ಲಸಿಕೆಗೆ ಅಂಗೀಕಾರ ನೀಡಲಾಗುವುದು ಎಂದು ಹೇಳಿದೆ.

‘‘ರೋಗಿಗಳ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ’’ ಎಂದು ಜರ್ಮನಿ ಆರೋಗ್ಯ ಸಚಿವಾಲಯದ ವಕ್ತಾರೆಯೊಬ್ಬರು ಜರ್ಮನಿಯ ‘ಆರ್‌ಎನ್‌ಡಿ’ ಪತ್ರಿಕೆಗೆ ತಿಳಿಸಿದರು. ‘‘ರಶ್ಯದ ಲಸಿಕೆಯ ಗುಣಮಟ್ಟ, ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಕುರಿತ ಅಂಕಿಅಂಶಗಳು ಲಭ್ಯವಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News