ಖಾಸಗೀಕರಣದತ್ತ ಸರಕಾರಿ ಬ್ಯಾಂಕುಗಳು?

Update: 2020-08-13 19:30 GMT

ಈ ಯೋಜನೆಯ ಮೂಲದಲ್ಲಿ ಒಂದು ತಾತ್ವಿಕ ಹಿನ್ನೆಲೆ ಇದೆ. ಸರಕಾರದ ಪ್ರಧಾನ ಕರ್ತವ್ಯ ಕಾನೂನು ವ್ಯವಸ್ಥೆಯ ಪರಿಪಾಲನೆ, ದೇಶದ ರಕ್ಷಣೆ ಮತ್ತು ಪರರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳುವುದು. ಅದು ಯಾವುದೇ ಆರ್ಥಿಕ, ವಾಣಿಜ್ಯ ಅಥವಾ ಕೈಗಾರಿಕೋತ್ಪಾದನೆಯ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಸಮಂಜಸವಲ್ಲ, ಬದಲಾಗಿ ಅದನ್ನು ಖಾಸಗಿಯವರೇ ಮುನ್ನಡೆಸಬೇಕೆಂಬ ನಿಲುವು ಈಗಿನ ಸರಕಾರದ ಅನೇಕ ನಿರ್ಧಾರಗಳ ಹಿಂದೆ ಅಡಕವಾಗಿದೆ.


ಭಾಗ-1

ಮೂರು ಹಂತದ ಬ್ಯಾಂಕು ವಿಲೀನೀಕರಣದ ಮೂಲಕ ಸರಕಾರಿ ರಂಗದ ಬ್ಯಾಂಕುಗಳ ಸಂಖ್ಯೆಯನ್ನು 28ರಿಂದ 12ಕ್ಕೆ ಇಳಿಸಿದ ನರೇಂದ್ರ ಮೋದಿ ಸರಕಾರವೀಗ ಅವುಗಳಲ್ಲಿ ಕೆಲವನ್ನು ಖಾಸಗೀರಂಗಕ್ಕೆ ಮಾರಲು ಹೊರಟಿದೆ. ಯಾವ ಬ್ಯಾಂಕುಗಳೆಂದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಈ ಬೆಳವಣಿಗೆ ದೇಶದ ಆರ್ಥಿಕತೆಯ ಮೇಲೆ ಅಗಾಧವಾದ ಪರಿಣಾಮವನ್ನು ಬೀರಲಿದೆ. ಮೇಲ್ನೋಟಕ್ಕೆ ಈ ನಿರ್ಧಾರದ ಉದ್ದೇಶ ಹೀಗಿದೆ: ಈಗಾಗಲೇ ನಷ್ಟದಲ್ಲಿರುವ ಸರಕಾರಿ ಬ್ಯಾಂಕುಗಳನ್ನು ದಕ್ಷವಾಗಿ ನಡೆಸಿ ಲಾಭದಾಯಕವಾಗಿ ಮಾಡಲು ಬಹಳಷ್ಟು ಬಂಡವಾಳ ಬೇಕು. ವರದಿಗಳ ಪ್ರಕಾರ 2008-19ರ 11 ವರ್ಷಗಳ ಅವಧಿಯಲ್ಲಿ ಒಟ್ಟು ರೂ.3.15 ಲಕ್ಷ ಕೋಟಿ ಬಂಡವಾಳವನ್ನು ಸರಕಾರ ಬ್ಯಾಂಕುಗಳಿಗೆ ನೀಡಿದೆ. 2019-20ರ ಬಜೆಟ್‌ನಲ್ಲಿ ರೂ.70,000 ಕೋಟಿಗಳಷ್ಟು ನಿಗದಿ ಮಾಡಿತ್ತು. ಎಷ್ಟು ಸಮಯ ಈ ನೀತಿಯನ್ನು ಅನುಸರಿಸಲು ಸಾಧ್ಯ? ಅಷ್ಟಕ್ಕೂ ಸರಕಾರದ ಬಳಿಯಲ್ಲಿ ಹೇರಳವಾದ ಸಂಪನ್ಮೂಲಗಳಿಲ್ಲ. ಉಳಿದಿರುವ ಏಕಮಾತ್ರ ದಾರಿ ಅವುಗಳನ್ನು ಖಾಸಗೀಕರಣಗೊಳಿಸುವುದು- ಅಂದರೆ ಮಾರುವುದು. ಸರಕಾರಿ ಕ್ಷೇತ್ರದ ಬೇರೆ ಉದ್ದಿಮೆಗಳನ್ನೂ ಮಾರುವ ಕ್ರಮಕ್ಕೆ ಸರಕಾರ ಮುಂದಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೂ ದೊಡ್ಡ ಮೊತ್ತದ ಸಂಪತ್ತು ಲಭಿಸಲಿದೆ, ಅದನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದು. ದೇಶದ ಹಳಿತಪ್ಪಿದ ಆರ್ಥಿಕತೆಯನ್ನು ಸರಿಪಡಿಸಲು ಸಂಪನ್ಮೂಲಗಳು ಅಗತ್ಯ. ಈ ಯೋಜನೆಯ ಮೂಲದಲ್ಲಿ ಒಂದು ತಾತ್ವಿಕ ಹಿನ್ನೆಲೆ ಇದೆ. ಸರಕಾರದ ಪ್ರಧಾನ ಕರ್ತವ್ಯ ಕಾನೂನು ವ್ಯವಸ್ಥೆಯ ಪರಿಪಾಲನೆ, ದೇಶದ ರಕ್ಷಣೆ ಮತ್ತು ಪರರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳುವುದು. ಅದು ಯಾವುದೇ ಆರ್ಥಿಕ, ವಾಣಿಜ್ಯ ಅಥವಾ ಕೈಗಾರಿಕೋತ್ಪಾದನೆಯ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಸಮಂಜಸವಲ್ಲ, ಬದಲಾಗಿ ಅದನ್ನು ಖಾಸಗಿಯವರೇ ಮುನ್ನಡೆಸಬೇಕೆಂಬ ನಿಲುವು ಈಗಿನ ಸರಕಾರದ ಅನೇಕ ನಿರ್ಧಾರಗಳ ಹಿಂದೆ ಅಡಕವಾಗಿದೆ.

ಸ್ವಾತಂತ್ರ್ಯೋತ್ತರ ದಿನಗಳ ಆರ್ಥಿಕ ನೀತಿ:

ಹೋದ ಶತಮಾನದ ಎರಡು ಮಹಾಯುದ್ಧಗಳ ಬಳಿಕ ಉಂಟಾದ ಅಭೂತಪೂರ್ವವಾದ ಆರ್ಥಿಕ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಲು ಸರಕಾರಗಳ ಮಧ್ಯಪ್ರವೇಶ ಅಗತ್ಯವೆಂದು ಹಲವಾರು ತಜ್ಞರ ಅಭಿಪ್ರಾಯ ವಾಗಿತ್ತು. ಅದರ ಪರಿಣಾಮವಾಗಿ ಅನೇಕ ಸರಕಾರಗಳು ತಮ್ಮ ತಮ್ಮ ದೇಶದ ಅಭಿವೃದ್ಧಿಗೋಸ್ಕರ ಕೆಲವು ಪ್ರಮುಖ ಆರ್ಥಿಕ ಚಟುವಟಿಕೆಗಳಲ್ಲಿ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಭಾಗವಹಿಸಿಕೊಂಡವು. ಅದರ ಉದ್ದೇಶ ಆರ್ಥಿಕ ವ್ಯವಸ್ಥೆಗೆ ಭದ್ರತೆ ಒದಗಿಸಿ ಜನಸಾಮಾನ್ಯರ ಏಳಿಗೆಗೆ ಅಡಿಪಾಯ ಹಾಕುವುದಾಗಿತ್ತು. ಆಗತಾನೆ ಸ್ವತಂತ್ರವಾದ ಭಾರತವೂ ಈ ದಾರಿಯನ್ನೇ ಆರಿಸಿತು. 1950 ಮತ್ತು 1960ರ ದಶಕಗಳಲ್ಲಿ ಪಂಚವಾರ್ಷಿಕ ಯೋಜನೆಗಳ ಮೂಲಕ ರಸ್ತೆ, ರೈಲು, ವಿಮಾನ, ಹಡಗು, ದೂರವಾಣಿ, ನೀರಾವರಿ, ಬೃಹತ್ ಕೈಗಾರಿಕೆಗಳು, ಗಣಿಗಾರಿಕೆ, ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಸಂಸ್ಥೆಗಳು, ಬಾಹ್ಯಾಕಾಶ ಸಂಶೋಧನೆ-ಹೀಗೆ ವಿವಿಧ ರಂಗಗಳಲ್ಲಿ ಸರಕಾರ ನೇರವಾಗಿ ಭಾಗವಹಿಸಿತು. ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಮತ್ತು ಆರ್ಥಿಕ ಅಸಮಾನತೆಗಳನ್ನು ದೂರೀಕರಿಸಲು ಅಗತ್ಯವಾದ ಹಣಕಾಸು ಮತ್ತು ವಿಮಾರಂಗದ ಮೇಲೆ ಸರಕಾರದ ಹಿಡಿತ ಅಗತ್ಯವೆಂದು ಮನಗಂಡು ಹಂತಹಂತವಾಗಿ ಖಾಸಗಿ ಕ್ಷೇತ್ರದಲ್ಲಿದ್ದ ಜೀವ ವಿಮೆ, ಸಾಮಾನ್ಯ ವಿಮೆ ಮತ್ತು ಬ್ಯಾಂಕುಗಳನ್ನು ಸರಕಾರವು ತನ್ನ ಸ್ವಾಮ್ಯಕ್ಕೆ ಒಳಪಡಿಸಿತು.
ಬ್ಯಾಂಕುಗಳ ರಾಷ್ಟ್ರೀಕರಣದ ಹಿನ್ನೆಲೆಯು 1969ರ ಬ್ಯಾಂಕು ರಾಷ್ಟ್ರೀಕರಣ ಕಾಯ್ದೆಯ ಪ್ರಸ್ತಾವನೆಯಿಂದ ಸ್ಪಷ್ಟವಾಗುತ್ತದೆ:
ಬ್ಯಾಂಕಿಂಗ್ ರಂಗ ಕೋಟ್ಯಂತರ ಜನರ ಜೀವನದೊಂದಿಗೆ ಬೆರೆತುಕೊಂಡಿದೆ. ಅದು ವಿಶಾಲವಾದ ಸಾಮಾಜಿಕ ಉದ್ದೇಶಗಳನ್ನು ಹೊಂದಿರಬೇಕು ಮತ್ತು ರಾಷ್ಟ್ರದ ಆರ್ಥಿಕ ನೀತಿಯ ಆದ್ಯತೆ ಮತ್ತು ಉದ್ದೇಶಗಳಾದ ಕೃಷಿ, ಲಘು ಉದ್ಯೋಗ ಮತ್ತು ರಫ್ತು ರಂಗಗಳ ಶೀಘ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಹೊಸ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಹಿಂದುಳಿದ ಪ್ರದೇಶಗಳ ಪ್ರಗತಿ-ಮುಂತಾದ ಗುರಿಗಳಿಗೆ ಪೂರಕವಾಗಿರಬೇಕು. ಈ ಕಾರಣಗಳಿಗೋಸ್ಕರ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವ ನೇರ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳುವ ಅಗತ್ಯವಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವಾಗ ವ್ಯಾಪಾರದ ಉದ್ದೇಶ ಸರಕಾರಕ್ಕೆ ಇರಲಿಲ್ಲ. ಖಾಸಗಿ ಕ್ಷೇತ್ರದ ಒಡೆತನದಲ್ಲಿದ್ದ ಬ್ಯಾಂಕುಗಳು ದೇಶದ ಆರ್ಥಿಕ ನೀತಿಗೆ ಪೂರಕವಾಗಿ ವ್ಯವಹಾರ ನಡೆಸುತ್ತಿರಲಿಲ್ಲ, ಅಭಿವೃದ್ಧಿ ಯೋಜನೆಗಳಿಗೆ ಬೇಕಾದ ಸಂಪನ್ಮೂಲಗಳ ಜೋಡಣೆಯ ತುರ್ತು ಆಗ ಇತ್ತು. ಈ ನಿರ್ಧಾರದಿಂದಾಗಿ 1970ರ ನಂತರದ ದಶಕಗಳಲ್ಲಿ ಹಣಕಾಸು ಕ್ಷೇತ್ರದಲ್ಲಿ ಅಭೂತಪೂರ್ವವಾದ ಬದಲಾವಣೆಗಳಾದವು. ಬ್ಯಾಂಕುಗಳ ಶಾಖಾ ವಿಸ್ತರಣೆ, ಹಳ್ಳಿಹಳ್ಳಿಗಳಲ್ಲಿ ಒದಗಿ ಬಂದ ಬ್ಯಾಂಕು ಸೌಕರ್ಯಗಳು, ಕೋಟಿಗಟ್ಟಲೆ ರೂಪಾಯಿಗಳ ಠೇವಣಿ ಸಂಗ್ರಹಣೆ, ಆದ್ಯತಾರಂಗಗಳಿಗೆ ಸುಲಭದಲ್ಲಿ ಬ್ಯಾಂಕುಗಳಿಂದ ಸಾಲ ಸಿಗುವ ವ್ಯವಸ್ಥೆ, ಸ್ವಂತ ಉದ್ದಿಮೆದಾರರಿಗೆ ಸಾಲ ನೀಡಲು ಪ್ರೇರಣೆ-ಇವುಗಳಲ್ಲದೆ ಲಕ್ಷಗಟ್ಟಲೆ ಯುವಜನರಿಗೆ ಉದ್ಯೋಗಾವಕಾಶಗಳು ಬ್ಯಾಂಕುಗಳ ರಾಷ್ಟ್ರೀಕರಣದಿಂದ ಸಾಧ್ಯವಾದುವೆಂಬುದು ರಿಸರ್ವ್ ಬ್ಯಾಂಕಿನ ವರದಿಗಳಿಂದ ವೇದ್ಯವಾಗುತ್ತದೆ, ಸರಕಾರದ ಹಾಗೂ ವಿವಿಧ ಸಮಿತಿಗಳ ಅಧ್ಯಯನಗಳಿಂದಲೂ ವಿಶದವಾಗುತ್ತದೆ.

ಖಾಸಗೀಕರಣದ ಪ್ರಕ್ರಿಯೆ ಮತ್ತು ಅದರಿಂದಾಗಬಹುದಾದ ಪರಿಣಾಮಗಳು:

ಇಷ್ಟೆಲ್ಲ ಸಾಧನೆಗಳಿದ್ದೂ 1990ರ ದಶಕದ ಆರ್ಥಿಕ ಉದಾರೀಕರಣದ ಅಂಗವಾಗಿ ಹಣಕಾಸು ರಂಗದ ಉದ್ದಿಮೆಗಳನ್ನೂ ಹಂತಹಂತವಾಗಿ ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡುವ ಪ್ರಕ್ರಿಯೆ ಆರಂಭವಾಯಿತು. ಸರಕಾರಿ ಬ್ಯಾಂಕುಗಳ ಮೇಲಿನ ಶೇ. 100ರ ಸ್ವಾಮ್ಯವನ್ನು 51ರ ತನಕ ಇಳಿಸಲು ಬ್ಯಾಂಕ್ ರಾಷ್ಟ್ರೀಕರಣ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಜೊತೆಗೆ ಹೊಸ ಖಾಸಗಿ ಬ್ಯಾಂಕುಗಳ ಮತ್ತು ವಿದೇಶಿ ಬ್ಯಾಂಕುಗಳ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಆಗಿನ ಕಾಂಗ್ರೆಸ್ ಸರಕಾರ ಆರಂಭಿಸಿದ ಸುಧಾರಣೆಗಳನ್ನು ಮುಂದಿನ ಎಲ್ಲಾ ಸರಕಾರಗಳೂ ಇನ್ನೂ ಮುತುವರ್ಜಿಯಿಂದ ಮುಂದುವರಿಸಿದವು. ಗಾತ್ರ ಹೆಚ್ಚಿಸುವ ಅಗತ್ಯವಿದೆಯೆಂದು ಹೇಳಿ ಬ್ಯಾಂಕುಗಳ ವಿಲೀನೀಕರಣವನ್ನು ಆರಂಭಿಸಲಾಯಿತು. ಈ ಎಲ್ಲ ಪ್ರಕ್ರಿಯೆಗಳಲ್ಲಿ ಅಡಕವಾಗಿರುವ ತಾತ್ವಿಕ ನಿಲುವು ಇಷ್ಟೆ: ವ್ಯವಹಾರ ನಡೆಸುವುದು ಸರಕಾರದ ಜವಾಬ್ದಾರಿಯಲ್ಲ ಎಂಬುದು! ಈಗ ಉದ್ದೇಶಿಸಲಾದ ಬ್ಯಾಂಕುಗಳ ಸಂಪೂರ್ಣ ಖಾಸಗೀಕರಣವೂ ಈ ತಳಹದಿಯ ಮೇಲೆಯೇ ನಿಂತಿದೆ.

ಇಲ್ಲಿ ಗಮನಿಸಬೇಕಾದ ಒಂದು ವಿಷಯ: ಹಣಕಾಸು ರಂಗದ ಏರುಪೇರು ಇಡೀ ಸಮಾಜದ ಮೇಲೆ ಪರಿಣಾಮವನ್ನು ಬೀರುತ್ತದೆ. 2007-08ರ ವಿಶ್ವ ಹಣಕಾಸು ತಲ್ಲಣದಿಂದ ಕೋಟ್ಯಂತರ ಡಾಲರುಗಳ ನಷ್ಟವಾಗಿ, ಲಕ್ಷಾಂತರ ಮಂದಿಯ ಉದ್ಯೋಗ ಹೋಗಿ, ಹಣಕಾಸಿನ ಮುಗ್ಗಟ್ಟಿನಿಂದಾಗಿ ಉದ್ದಿಮೆಗಳು ತತ್ತರಿಸಿದವು. ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಬ್ಯಾಂಕುಗಳು ಮುಳುಗುವ ಹಂತಕ್ಕೆ ಬಂದವು. ಗಜಗಾತ್ರದ ಬ್ಯಾಂಕುಗಳು ಮುಳುಗಿದರೆ ಸಮಾಜದಲ್ಲಿ ಕ್ಷೋಭೆಯಾಗಬಹುದೆಂಬ ಆತಂಕದಿಂದ ಸರಕಾರಗಳೇ ತಮ್ಮ ಬೊಕ್ಕಸಗಳಿಂದ ಸಂಕಷ್ಟಕ್ಕೀಡಾದ ಸಂಸ್ಥೆಗಳಿಗೆ ಆರ್ಥಿಕ ಸಹಾಯವನ್ನು ನೀಡಿದವು. ಭಾರತದಲ್ಲಿ ಪ್ರಗತಿಗೆ ಅಗತ್ಯವಾದ ಪಾಲು ಬಂಡವಾಳವನ್ನು ಹೆಚ್ಚು ಮಾಡಲು ಸರಕಾರವು ತನ್ನದೇ ಒಡೆತನದ ಬ್ಯಾಂಕುಗಳಿಗೆ ಸಹಾಯಧನ ನೀಡಿದರೆ, ಅಮೆರಿಕದ ಸರಕಾರ ಖಾಸಗಿ ಬ್ಯಾಂಕುಗಳನ್ನು ಉಳಿಸಲು ಸಹಾಯಧನವನ್ನು ನೀಡಿತು!

ಖಾಸಗೀಕರಣ ಮತ್ತು ಸ್ವದೇಶಿ ಕಲ್ಪನೆ:
ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಹೇಗಿರುತ್ತದೆ? ಸಾಮಾನ್ಯವಾಗಿ ತನ್ನ ಒಡೆತನದ ಸಂಕೇತವಾಗಿರುವ ಇಡೀ ಬಂಡವಾಳವನ್ನು-ಶೇರುಗಳನ್ನು-ಮಾರುವ ಮೂಲಕ ಸಂಸ್ಥೆಯ ಸ್ವಾಮ್ಯವನ್ನು ಸರಕಾರವು ಹೊಸ ಶೇರುದಾರರಿಗೆ ಬಿಟ್ಟುಕೊಡುತ್ತದೆ. ಈ ಪ್ರಕ್ರಿಯೆಯಲ್ಲಿ ಜನಸಾಮಾನ್ಯರು ಭಾಗವಹಿಸಬಹುದಾದರೂ ಬಹುತೇಕ ಶೇರುಗಳನ್ನು ಸಾಂಸ್ಥಿಕ ಶೇರುದಾರರೇ ಖರೀದಿಸುತ್ತಾರೆ. ದೇಶದ ಬೃಹತ್ ಉದ್ಯೋಗಪತಿಗಳು ತಮ್ಮ ಅಧೀನ ಸಂಸ್ಥೆಗಳ ಮೂಲಕ ಶೇರುಗಳನ್ನು ಖರೀದಿಸಿ ಬ್ಯಾಂಕುಗಳ ಸ್ವಾಮ್ಯವನ್ನು ಹೊಂದುತ್ತಾರೆ. ಕೆಲವೊಮ್ಮೆ ಬಹುರಾಷ್ಟ್ರೀಯ ಸಂಸ್ಥೆಗಳು ಶೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿಯೂ ಬ್ಯಾಂಕುಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸುತ್ತವೆ. ಈ ಎರಡೂ ಸಂದರ್ಭಗಳಲ್ಲಿ ದೇಶದ ಆರ್ಥಿಕ ಹಿತಾಸಕ್ತಿಗೆ ಮಾರಕ ಹೊಡೆತ ಬೀಳಲು ಸಾಧ್ಯವಿದೆ. ಈಗ ಮಾರಲಾಗುವ ಸರಕಾರಿ ಬ್ಯಾಂಕುಗಳ ಬಂಡವಾಳವನ್ನು ದೇಶದ ಅತಿ ದೊಡ್ಡ ಉದ್ಯೋಗಪತಿ ಎನ್ನಬಹುದಾದ ಮುಖೇಶ್ ಅಂಬಾನಿಯೋ ಅಥವಾ ಇನ್ನೊಬ್ಬ ಉದ್ಯಮಿ ಗೌತಮ ಅದಾನಿ ಖರೀದಿಸಿದರೆಂದು ಊಹಿಸಿಕೊಳ್ಳೋಣ.

ಮುಕ್ತ ಮಾರುಕಟ್ಟೆಯ ನೀತಿಗೆ ಬದ್ಧವಾಗಿರುವ ಸರಕಾರ ಅವರನ್ನು ತಡೆಯಲಾಗುವುದಿಲ್ಲ. ಇಡೀ ಹಣಕಾಸುರಂಗದ ಅರ್ಧದಷ್ಟು ವ್ಯವಹಾರದ ಮೇಲಿನ ಹತೋಟಿ ಅವರಿಬ್ಬರ ಕೈಗೆ ಹೋಗಬಹುದು. ಹೊಸ ಮಾಲಕರ ದೈತ್ಯಶಕ್ತಿಯನ್ನು ಎದುರಿಸುವ ಎದೆಗಾರಿಕೆ ಸರಕಾರಕ್ಕೆ ಅಥವಾ ನಿಯಂತ್ರಕನಾದ ರಿಸರ್ವ್ ಬ್ಯಾಂಕಿಗೆ ಉಳಿಯುತ್ತದೆಯೇ? (2016ರ ನೋಟು ರದ್ದತಿ ಮತ್ತು 2019ರಲ್ಲಿ ತನ್ನ ಲಾಭಾಂಶದ ಬಹುಭಾಗವನ್ನು ಸರಕಾರಕ್ಕೆ ಕೊಡಲು ಬಂದ ಒತ್ತಡವನ್ನು ಮೆಟ್ಟಿ ನಿಲ್ಲಲು ಆರ್‌ಬಿಐಗೆ ಸಾಧ್ಯವಾಗಿರಲಿಲ್ಲ ಎಂಬುದೂ ಇಲ್ಲಿ ಪ್ರಸ್ತುತವಾಗುತ್ತದೆ.) ವಿದೇಶಿ ಬಂಡವಾಳ ಹೂಡಿಕೆ ಸಂಸ್ಥೆಗಳು ಬ್ಯಾಂಕು ಶೇರುಗಳನ್ನು ಖರೀದಿಸಿದರೆ ಬ್ಯಾಂಕು ಅವುಗಳ ನಿಯಂತ್ರಣಕ್ಕೆ ಒಳಗಾಗುತ್ತವೆ. ಈಗಾಗಲೇ ಮುಂಚೂಣಿಯಲ್ಲಿರುವ ಪ್ರಮುಖ ಖಾಸಗಿ ಬ್ಯಾಂಕುಗಳ ಅತಿ ದೊಡ್ಡ ಶೇರುದಾರರು ವಿದೇಶಿ ಸಂಸ್ಥೆಗಳೇ. ಕೇರಳದಲ್ಲಿರುವ ಹಳೆ ತಲೆಮಾರಿನ ಖಾಸಗಿ ಬ್ಯಾಂಕುಗಳ ಪ್ರಮುಖ ಶೇರುದಾರರು ವಿದೇಶಿಮೂಲದ ಸಂಸ್ಥೆಗಳು. ಆಗ ಹೊಸ ನಿರ್ದೇಶಕ ಮಂಡಳಿಯ ನೀತಿಗಳು ವಿದೇಶಿ ಮಾಲಕರ ಧೋರಣೆಗೆ ಬದ್ಧವಾಗಿರುತ್ತವೆ. ಈ ದೇಶದ ಆರ್ಥಿಕ ನೀತಿಗೆ ತಲೆಬಾಗಬೇಕೆಂಬ ಒತ್ತಡ ಅವುಗಳಿಗಿಲ್ಲ. ಆ ಸನ್ನಿವೇಶಗಳಲ್ಲಿ 'ದೇಶೀಯತೆ' ಎಂಬ ಕಲ್ಪನೆ ಎಲ್ಲಿ ಉಳಿಯುತ್ತದೆ?

ದೇಶದ ಆರ್ಥಿಕತೆಯ ಮೇಲೆ ಏನು ಪರಿಣಾಮ?
ಬ್ಯಾಂಕುಗಳನ್ನು ಖಾಸಗೀರಂಗದ ಉಸ್ತುವಾರಿಗೆ ಒಪ್ಪಿಸಿದಾಗ ಆಗಬಹುದಾದ ಪರಿಣಾಮಗಳನ್ನು ಮೂರು ಪ್ರಮುಖ ದೃಷ್ಟಿಗಳಿಂದ ಪರಿಶೀಲಿಸಬೇಕಾಗುತ್ತದೆ.
ಮೊದಲನೆಯದಾಗಿ, ಸಾಮಾನ್ಯ ಗ್ರಾಹಕರ ಮೇಲೆ ಈ ಕ್ರಮದಿಂದ ಏನು ಪರಿಣಾಮ ಆಗಲು ಸಾಧ್ಯ? ಖಾತೆಗಳನ್ನು ತೆರೆಯಲು ಕೊಡಬೇಕಾದ ಕನಿಷ್ಠ ಶಿಲ್ಕು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಗದಿಪಡಿಸಿದುದಕ್ಕಿಂತ ಎಷ್ಟೋ ಹೆಚ್ಚಿರುತ್ತದೆ; ಮಾತ್ರವಲ್ಲ, ಅವರು ನಿಗದಿ ಮಾಡುವ ಸೇವಾ ಶುಲ್ಕಗಳು ಬೇರೆಯೇ ಮಾನದಂಡಗಳನ್ನು ಹೊಂದಿರುತ್ತವೆ. ಹೆಚ್ಚಿನ ಬ್ಯಾಂಕುಗಳು ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಕೊಡುತ್ತೇವೆ ಎಂದು ಹೇಳಿ ಸೇವಾ ಶುಲ್ಕಗಳನ್ನು ಆಗಾಗ ಪರಿಷ್ಕರಿಸುತ್ತವೆ. ನಮ್ಮ ದೇಶದ ಸಾಮಾನ್ಯ ಪ್ರಜೆಗಳು ಇನ್ನೂ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಅರಿವು ಹೊಂದಿಲ್ಲ, ಮಾತ್ರವಲ್ಲ ನಿರಂತರ ವಿದ್ಯುತ್ ಪೂರೈಕೆ ಇಲ್ಲದ ಊರುಗಳಲ್ಲಿ ತಂತ್ರಜ್ಞಾನದ ಬಳಕೆ ಹೇಗೆ ಸಾಧ್ಯ? ಸಾಕಷ್ಟು ಪರಿಣತಿ ಇಲ್ಲದಿದ್ದಾಗ ವಂಚನೆಗಳೂ ಸಂಭವಿಸಬಹುದು.

ಎರಡನೆಯದಾಗಿ, ದೇಶದ ಅರ್ಥವ್ಯವಸ್ಥೆಯ ಮೇಲೆ ಏನು ಪ್ರಭಾವ ಬೀರಬಹುದು? ಬ್ಯಾಂಕಿನ ಸಾಲದ ನೀತಿ, ಶಾಖಾ ವಿಸ್ತರಣೆಯ ಧೋರಣೆ ಹಾಗೂ ಠೇವಣಿ ಸಂಗ್ರಹಣ ಮಾಡುವ ನೀತಿಗಳಲ್ಲಿ ಪ್ರಮುಖ ಮಾನದಂಡಗಳು ಎರಡು- ವೆಚ್ಚದ ಕಡಿತ ಮತ್ತು ಲಾಭ ಗಳಿಕೆ. ಆದ್ಯತಾ ರಂಗಕ್ಕೆ ಸೇರಿದ ಸಣ್ಣ ಕೈಗಾರಿಕೆ ಮತ್ತು ಉದ್ದಿಮೆ, ಸಾರಿಗೆ ವಾಹನ, ಸ್ವೋದ್ಯೋಗಿಗಳು, ಕೃಷಿ, ಮೀನುಗಾರಿಕೆ, ಉನ್ನತ ಶಿಕ್ಷಣ ಮತ್ತು ಮನೆ ನಿರ್ಮಾಣ ಮುಂತಾದ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಬೇಕಾಗುವ ಸಾಲದ ಪ್ರಮಾಣ ಕಡಿಮೆ ಇರುತ್ತದೆ. ದೊಡ್ಡ ಉದ್ದಿಮೆ ಅಥವಾ ಕೈಗಾರಿಕೆಗಳಿಗೆ ಕೊಡುವ ಒಂದು ಸಾಲವೇ 1,000 ಕೋಟಿ ರೂ. ಇರಬಹುದು. ಆದರೆ ಅವುಗಳ ಅರ್ಜಿಗಳ ಪರಿಶೀಲನೆ ಮತ್ತು ಕೊಟ್ಟ ಸಾಲದ ಮೇಲ್ವಿಚಾರಣೆಯಲ್ಲಿ ಬಹಳಷ್ಟು ಅಂತರವಿರುತ್ತದೆ. ರೂ. 1,000 ಕೋಟಿಯ ಒಂದು ಸಾಲದ ಮೇಲ್ವಿಚಾರಣೆಯು 10 ಲಕ್ಷದ 100 ಸಾಲಗಳ ಮೇಲ್ವಿಚಾರಣೆಗಿಂತ ಸುಲಭ. ಅದೇ ರೀತಿ ಸರಾಸರಿ 1,000 ರುಪಾಯಿ ಶಿಲ್ಕು ಇರುವ ಉಳಿತಾಯ ಖಾತೆಗಿಂತ 1 ಲಕ್ಷ ರೂಪಾಯಿ ಇರುವ ಖಾತೆಗೆ ಬ್ಯಾಂಕು ಆದ್ಯತೆ ನೀಡುವುದು ವ್ಯಾವಹಾರಿಕ. ಶಾಖೆಗಳ ವಿಸ್ತರಣೆಯಲ್ಲಿಯೂ ಹೊಸ ಅಥವಾ ಈಗ ಇರುವ ಶಾಖೆಯಲ್ಲಿ ವೆಚ್ಚ ಕಳೆದು ಲಾಭ ಉಳಿಯುತ್ತಿದೆಯೇ ಎಂಬುದು ಮಾನದಂಡವಾಗುತ್ತದೆ. ಆರ್ಥಿಕತೆಗೆ ಪೂರಕವಾಗಬೇಕಾದ ಹಣಕಾಸು ಸಂಸ್ಥೆ ಲಾಭದ ಲೆಕ್ಕಾಚಾರಕ್ಕೆ ಶರಣಾದಾಗ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸು ಲಭಿಸುವುದು ಕಷ್ಟ.

ಕೊನೆಯದಾಗಿ, ಯಾವುದೇ ದೇಶದ ಆರ್ಥಿಕತೆಗೆ ಹಣಕಾಸು ಅತೀ ಅಗತ್ಯ. ಜನರಲ್ಲಿ ಉಳಿತಾಯದ ಮನೋವೃತ್ತಿಯನ್ನು ಉತ್ತೇಜಿಸಿ ಠೇವಣಿಗಳ ರೂಪದಲ್ಲಿ ಸಂಪತ್ತನ್ನು ಕ್ರೋಡೀಕರಿಸಿ ಸಾಲದ ರೂಪದಲ್ಲಿ ಆ ಸಂಪತ್ತನ್ನು ವಾಣಿಜ್ಯ, ಕೈಗಾರಿಕೆ, ಕೃಷಿ, ಸಾರಿಗೆ ಮುಂತಾದ ರಂಗಗಳಿಗೆ ವಿನಿಯೋಗಿಸಿ ಆರ್ಥಿಕತೆಗೆ ಪ್ರೋತ್ಸಾಹವನ್ನು ಬ್ಯಾಂಕುಗಳು ನೀಡುತ್ತವೆ. ಹಣಕಾಸು ಸಂಸ್ಥೆಗಳು ಲಾಭವೊಂದೇ ಗುರಿ ಎಂದು ವರ್ತಿಸಿದಾಗ ಅಲ್ಲಿ ಹೆಚ್ಚು ಲಾಭವಿದೆಯೋ ಅಲ್ಲಿ ಮಾತ್ರ ಸಂಪತ್ತಿನ ವಿನಿಯೋಗ ಮಾಡುತ್ತವೆ. ಮಾತ್ರವಲ್ಲ, ಲಾಭವನ್ನು ಹೆಚ್ಚಿಸಲು ವಿಭಿನ್ನ ದಾರಿಗಳನ್ನು ಹಿಡಿಯಬಹುದು-ಶುಲ್ಕಗಳನ್ನು ದುಬಾರಿಗೊಳಿಸಿ, ಕಡಿಮೆ ಬಡ್ಡಿಯ ಸಾಲಗಳನ್ನು ಕಡಿತಗೊಳಿಸಿ, ವೆಚ್ಚವಾಗುವ ಚಟುವಟಿಕೆಗಳನ್ನು ಸೀಮಿತಗೊಳಿಸಿ ಸಂಪಾದನೆಯನ್ನು ಹೆಚ್ಚುಮಾಡಲು ಮುಂದಾಗುತ್ತವೆ. ಆಗ ದೇಶದ ಆರ್ಥಿಕತೆಗೂ ಹೊಡೆತ ಬೀಳುವ ಸಾಧ್ಯತೆ ಇದೆ.
ಈ ಆತಂಕಗಳ ಹಿಂದೆ ಇರುವ ಗಂಭೀರವಾದ ವಾಸ್ತವವನ್ನು ಮುಂದಿನ ಭಾಗದಲ್ಲಿ ಚಿತ್ರಿಸಲಾಗಿದೆ.

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News