ಬಿಎಸ್ಸೆನ್ನೆಲ್ ಸಿಬ್ಬಂದಿ ದೇಶದ್ರೋಹಿಗಳೆ?

Update: 2020-08-14 04:50 GMT

‘‘ಮೊದಲು ನಾಯಿಗೆ ಹುಚ್ಚು ಹಿಡಿದಿದೆ ಎಂದು ಘೋಷಿಸಿ. ಬಳಿಕ ಅದನ್ನು ಕೊಲ್ಲಿ’’ ಎನ್ನುವ ತಂತ್ರವನ್ನು ಪ್ರಭುತ್ವ ಸಂದರ್ಭ ಬಂದಾಗ ಮನುಷ್ಯರನ್ನು ಸಾಯಿಸುವುದಕ್ಕೂ ಬಳಸುತ್ತಾ ಬಂದಿದೆ. ‘ದೇಶದ್ರೋಹಿ, ಭಯೋತ್ಪಾದಕ, ಉಗ್ರಗಾಮಿ’ ಎನ್ನುವ ಹಣೆಪಟ್ಟಿ ಕಟ್ಟಿದರೆ, ಯಾರನ್ನು ಬೇಕಾದರೂ ಕೊಲ್ಲುವ ಪರವಾನಿಗೆಗಳನ್ನು ಪೊಲೀಸ್ ಇಲಾಖೆ ತನ್ನದಾಗಿಸಿಕೊಳ್ಳುತ್ತದೆ. ಅದನ್ನುತಪ್ಪು ಎಂದು ಖಂಡಿಸಿದವನೂ ದೇಶದ್ರೋಹಿಯ ಪಟ್ಟ ಹೊತ್ತು ಕೊಳ್ಳಬೇಕಾಗುವುದರಿಂದ ಸಮಾಜದ ಜೀವನಪರ ಮನಸ್ಸುಗಳು ಅನಿವಾರ್ಯವಾಗಿ ಬಾಯಿ ಮುಚ್ಚಿ ಕೂರಬೇಕಾಗುತ್ತದೆ. ಇತ್ತೀಚೆಗೆ ಸಂಸದ ಅನಂತಕುಮಾರ್ ಹೆಗಡೆ ಅವರು ಒಂದು ಸಂಸ್ಥೆಯೊಳಗೆ ದುಡಿಯುವ ಸರಕಾರಿ ನೌಕರರನ್ನೇ ‘ದೇಶದ್ರೋಹಿ’ಗಳು ಎಂದು ಕರೆದಿದ್ದಾರೆ.

‘‘ಬಿಎಸ್ಸೆನ್ನೆಲ್ ಸಂಸ್ಥೆಯೊಳಗೆ ದೇಶದ್ರೋಹಿಗಳೇ ತುಂಬಿದ್ದಾರೆ. ಈ ಸಂಸ್ಥೆ ದೇಶಕ್ಕೊಂದು ಕಳಂಕವಾಗಿದೆ. ಸಮರ್ಪಕ ಸೇವೆ ನೀಡಲು ಬಿಎಸ್ಸೆನ್ನೆಲ್ ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ ನಾವು ಅದನ್ನು ಮುಗಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಆ ಸ್ಥಾನವನ್ನು ಖಾಸಗಿ ಸಂಸ್ಥೆಗಳು ತುಂಬಲಿವೆ. 85 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಜನರನ್ನು ಮನೆಗೆ ಕಳುಹಿಸುತ್ತೇವೆ’’ ಎನ್ನುವುದನ್ನು ಸರಕಾರದ ‘ಸಾಧನೆ’ಯೋ ಎಂಬಂತೆ ಜನರ ಮುಂದೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕ ಸಂಸ್ಥೆಯೊಂದನ್ನು ‘ಮುಗಿಸುವುದನ್ನು’ ಸಮರ್ಥಿಸಿಕೊಳ್ಳುವುದಕ್ಕಾಗಿ ತನ್ನದೇ ಸರಕಾರದ ಅಧೀನದಲ್ಲಿರುವ ಬಿಎಸ್ಸೆನ್ನೆಲ್ ಸಂಸ್ಥೆಯೊಳಗಿರುವ ಸಿಬ್ಬಂದಿಯನ್ನು ‘ದೇಶದ್ರೋಹಿ’ಗಳು ಎಂದು ಕರೆದಿದ್ದಾರೆ. ಆದರೆ ಈ ಮೂಲಕ ತನ್ನ ಸರಕಾರವನ್ನೇ ಅವರು ‘ದೇಶದ್ರೋಹಿ ಸರಕಾರ’ವನ್ನಾಗಿಸಿದ್ದನ್ನು ಮರೆತು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಶೀಘ್ರದಲ್ಲೇ ನಡೆಯಲಿರುವ ‘ನಕಲಿ ಎನ್‌ಕೌಂಟರ್’ಗೆ ದೇಶದ್ರೋಹಿ ಬಿಎಸ್‌ಎನ್ನೆಲ್ ಬಲಿಯಾಗುವುದನ್ನು ಅನಧಿಕೃತವಾಗಿ ಸಂಸದರು ಘೋಷಿಸಿದ್ದಾರೆ ಮತ್ತು ಜನರನ್ನು ಕೆಲಸದಿಂದ ಕಿತ್ತು ಮನೆಗೆ ಕಳುಹಿಸುವ ಸರಕಾರದ ಕೃತ್ಯವನ್ನು ‘ದೇಶದ್ರೋಹಿಗಳಿಗೆ ವಿಧಿಸಲಾಗುವ ಶಿಕ್ಷೆ’ ಎಂದು ಸಮರ್ಥಿಸಲು ಮುಂದಾಗಿದ್ದಾರೆ.

ಇಷ್ಟಕ್ಕೂ ಬಿಎಸ್ಸೆನ್ನೆಲ್ ಸಂಸ್ಥೆ ಸರ್ವನಾಶವಾದುದು ಯಾರಿಂದ? ಇದಕ್ಕೆ ಕೇವಲ ಸಿಬ್ಬಂದಿ ಮಾತ್ರ ಹೊಣೆಯೇ? ಬಿಎಸ್ಸೆನ್ನೆಲ್ ಚುಕ್ಕಾಣಿ ಸರಕಾರದ ಕೈಯಲ್ಲಿದೆ. ಯಾರ ಮೂಲಕ ಅದು ನಡೆಸಲ್ಪಡುತ್ತದೆಯೋ ಅವರು ಸಂಸ್ಥೆಯ ವೈಫಲ್ಯಕ್ಕೆ ಹೊಣೆಯೇ ಹೊರತು, ಕೇವಲ ಅದರ ಸಿಬ್ಬಂದಿಯಲ್ಲ. ಇದರೊಳಗಿರುವ ಸಿಬ್ಬಂದಿಗಳೂ ಸರಕಾರದ ಒಂದು ಭಾಗವೇ ಆಗಿರುವುದರಿಂದ, ತನ್ನ ಸಂಸ್ಥೆಯೊಳಗೆ ‘ದೇಶದ್ರೋಹಿ’ಗಳನ್ನು ಸಾಕಿದ ಸರಕಾರವೂ ಅಪರಾಧಿಯೇ ಅಲ್ಲವೆ? ಸದ್ಯಕ್ಕೆ ಸರಕಾರ ಬಿಎಸ್ಸೆನ್ನೆಲ್ ಮಾತ್ರವಲ್ಲದೆ, ಹಲವು ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸುವುದಕ್ಕೆ ಯೋಜನೆ ಹಾಕುತ್ತಿದೆ. ಹಾಗಾದರೆ, ಈ ಎಲ್ಲ ಸರಕಾರಿ ಸಂಸ್ಥೆಗಳನ್ನು, ಅದರಲ್ಲಿ ದುಡಿಯುವ ನೌಕರರನ್ನು ಸಂಸದ ಅನಂತಕುಮಾರ್ ಹೆಗಡೆಯವರು ‘ದೇಶದ್ರೋಹಿಗಳು’ ಎಂದು ಕರೆದು, ಆ ಕ್ರಮವನ್ನು ಸಮರ್ಥಿಸಲು ಮುಂದಾಗಿದ್ದಾರೆಯೇ? ಅಥವಾ ಸರಕಾರಿ ಸಂಸ್ಥೆಗಳನ್ನು ನಾಶ ಮಾಡಿ, ಅವುಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವ ತನ್ನದೇ ಸರಕಾರವನ್ನು ಅವರು ‘ದೇಶದ್ರೋಹಿ’ ಎಂದು ಕರೆಯುತ್ತಿದ್ದಾರೆಯೇ? ಮೊದಲಾದ ಪ್ರಶ್ನೆಗಳಿಗೆ ‘ದೇಶಪ್ರೇಮಿ ಸಂಸದ’ ಅನಂತಕುಮಾರ್ ಹೆಗಡೆಯವರೇ ಉತ್ತರಿಸಬೇಕು.

90ರ ದಶಕದಲ್ಲಿ ಉದಾರೀಕರಣ, ಖಾಸಗೀಕರಣಗಳ ಹೆಬ್ಬಾಗಿಲು ತೆರೆದ ದಿನದಿಂದಲೇ ಬಿಎಸ್ಸೆನ್ನೆಲ್ ದುರಂತ ಆರಂಭವಾಗಿತ್ತು. ಯಾವಾಗ ಮೊಬೈಲ್ ಫೋನ್‌ಗಳು ಭಾರತಕ್ಕೆ ಕಾಲಿಟ್ಟವೋ, ಅಲ್ಲಿಂದ ಭಾರತೀಯ ಟೆಲಿಕಮ್ಯುನಿಕೇಶನ್ ಜೊತೆಗೆ ಸರಕಾರ ಮಲತಾಯಿ ಧೋರಣೆ ಅನುಸರಿಸತೊಡಗಿತು. ಅದಾಗಲೇ ದೇಶದ ಹಳ್ಳಿ ಹಳ್ಳಿಗಳಿಗೆ ವಿಸ್ತರಿಸಿಕೊಂಡಿದ್ದ ಸರಕಾರದ ಸಂಸ್ಥೆ ಮೊಬೈಲ್ ಟೆಲಿಫೋನಿಗೆ ಸಂಬಂಧಿಸಿದಂತೆ ಉಳಿದ ವಿದೇಶಿ ಖಾಸಗಿ ಸಂಸ್ಥೆಗಳ ಜೊತೆಗೆ ನೇರ ಸ್ಪರ್ಧೆ ನೀಡುವ ಅವಕಾಶಗಳಿದ್ದವು. ಯಾಕೆಂದರೆ ಉಳಿದ ಖಾಸಗಿ ಸಂಸ್ಥೆಗಳು ಇನ್ನಷ್ಟೇ ಮೂಲಭೂತ ಸೌಕರ್ಯಗಳನ್ನು ತನ್ನದಾಗಿಸಿಕೊಳ್ಳಬೇಕಾಗಿತ್ತು. ಆದರೆ ಸರಕಾರಿ ಟೆಲಿಕಮ್ಯೂನಿಕೇಶನ್ ಬಹಳಷ್ಟು ಮೂಲ ಸೌಕರ್ಯಗಳನ್ನು ಹೊಂದಿತ್ತು. ಅವನ್ನೇ ಬಳಸಿಕೊಂಡು ಮೊಬೈಲ್ ಟವರ್‌ಗಳನ್ನು ವಿಸ್ತರಿಸುತ್ತಾ ಹೋಗಿದ್ದರೆ ಇಂದು ಬಿಎಸ್ಸೆನ್ನೆಲ್, ಭಾರತದ ಏಕೈಕ ಸಂಸ್ಥೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ದುರದೃಷ್ಟವಶಾತ್ ಅದು ನಡೆಯಲಿಲ್ಲ. ಅದಕ್ಕೆ ಕಾರಣ ಸಂಸ್ಥೆಯೊಳಗಿರುವ ಸಿಬ್ಬಂದಿಯಲ್ಲ. ನಮ್ಮದೇ ಸರಕಾರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಿಎಸ್ಸೆನ್ನೆಲ್‌ಗೆ ಅವಕಾಶ ನೀಡಲಿಲ್ಲ.

ವಿದೇಶಿ ಕಂಪೆನಿಗಳು ಮತ್ತು ಖಾಸಗಿ ಕಂಪೆನಿಗಳು ಈ ನೆಲದಲ್ಲಿ ಬೇರೂರಿದ ಸುಮಾರು ಐದು ವರ್ಷಗಳ ಬಳಿಕ ಬಿಎಸ್ಸೆನ್ನೆಲ್ ಸಂಸ್ಥೆ ಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟಿತು. ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ ಎನ್ನುವ ಸಂಸದರ ಆರೋಪಗಳಿಗೂ ಇಲ್ಲೇ ಉತ್ತರಗಳಿವೆ. ಅದಕ್ಕೆ ಹೊಣೆ ಬಿಎಸ್ಸೆನ್ನೆಲ್‌ನ್ನು ಮುಂದುವರಿಸುವ ಇಚ್ಛಾಶಕ್ತಿಯಿಲ್ಲದ ಸರಕಾರದೊಳಗಿರುವ ನಾಯಕರೇ ಹೊರತು ಸಿಬ್ಬಂದಿಯಲ್ಲ. ಬಿಎಸ್ಸೆನ್ನೆಲ್ ಸಿಬ್ಬಂದಿ ಕುರಿತಂತೆ ಸಂಸದರು ಏನು ಆರೋಪ ಮಾಡುತ್ತಿದ್ದಾರೆಯೋ ಆ ಆರೋಪಗಳನ್ನು ಇತರ ಎಲ್ಲ ಸರಕಾರಿ ಸಿಬ್ಬಂದಿಯ ಕುರಿತಂತೆಯೂ ಮಾಡಲಾಗುತ್ತದೆ. ಹಾಗೆಂದು, ಎಲ್ಲೋ ನೆಟ್‌ವರ್ಕ್ ಸಿಗದೇ ಇರುವುದಕ್ಕೆ ಕೇವಲ ಸಿಬ್ಬಂದಿಯನ್ನು ಹೊಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಬಿಎಸ್ಸೆನ್ನೆಲ್ ಯಾಕೆ ಇನ್ನೂ 4ಜಿ ಸೇವೆ ನೀಡುತ್ತಿಲ್ಲ? ಇದಕ್ಕೆ ಅಡ್ಡಿಯಾಗಿರುವುದು ಬಿಎಸ್ಸೆನ್ನೆಲ್ ಸಿಬ್ಬಂದಿಯೋ ಅಥವಾ ಸರಕಾರವೋ? ಬಿಎಸ್ಸೆನ್ನೆಲ್‌ನ್ನು ಖಾಸಗಿಯ ಜೊತೆಗೆ ಸ್ಪರ್ಧಿಸುವುದಕ್ಕೆ ಬೇಕಾದ ಯಾವುದೇ ಸೌಕರ್ಯವನ್ನು, ಅವಕಾಶಗಳನ್ನು ನೀಡದೆ, ಇದೀಗ ಬಿಎಸ್ಸೆನ್ನೆಲ್ ನಾಶಕ್ಕೆ ಸಿಬ್ಬಂದಿಯನ್ನು ಹೊಣೆ ಮಾಡುವುದು ಎಷ್ಟು ಸರಿ?

 50 ಸಾವಿರಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಹೊಂದಿರುವ, 89 ಸಾವಿರ ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿರುವ ಬಿಎಸ್ಸೆನ್ನೆಲ್ ನಷ್ಟದ ಹಾದಿ ಹಿಡಿಯುವುದಕ್ಕೆ ಕಾರಣ, ಸರಕಾರ ಕೆಲವು ನಿರ್ದಿಷ್ಟ ಕಾರ್ಪೊರೇಟ್ ಸಂಸ್ಥೆಗೆ ಬೆಂಗಾವಲಾಗಿ ನಿಂತಿರುವುದು. ಇದೇ ಸಂದರ್ಭದಲ್ಲಿ ಸರಕಾರದ ನೀತಿಯಿಂದಾಗಿ ಬಿಎಸ್ಸೆನ್ನೆಲ್ ದುರಂತದ ಹಾದಿ ಹಿಡಿಯುತ್ತಿರುವುದನ್ನು ಅದರೊಳಗಿರುವ ಹಿರಿಯ ಅಧಿಕಾರಿಗಳು ಮನಗಂಡು, ಅವರು ಒಬ್ಬೊಬ್ಬರಾಗಿ ಖಾಸಗಿ ಸಂಸ್ಥೆಗಳಿಗೆ ವಲಸೆ ಹೋದರು. ಹಾಗೆಯೇ ಬಿಎಸ್ಸೆನ್ನೆಲ್ ಮೂಲಕವೇ ಖಾಸಗಿ ಸಂಸ್ಥೆಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡವು. ಐದು ವರ್ಷದ ಹಿಂದೆ ರಿಲಯನ್ಸ್ ಕಂಪೆನಿ ಜಿಯೋ ಮೂಲಕ ಜನಪ್ರಿಯ ಯೋಜನೆಗಳನ್ನು ಮುಂದಿಟ್ಟಾಗ, ತನ್ನ ಯೋಜನೆಗಳಿಗೆ ‘ಮೋಡೆಲ್’ ಆಗಿ ಬಳಸಿಕೊಂಡಿದ್ದೇ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು.

ತನ್ನದೇ ಬಿಎಸ್ಸೆನ್ನೆಲ್ ಕಂಪೆನಿಯನ್ನು ಮೇಲೆತ್ತುವ ಬದಲು ಜಿಯೋ ಕಂಪೆನಿಗೆ ಸಕಲ ಸವಲತ್ತುಗಳನ್ನು ಒದಗಿಸಿದ್ದಲ್ಲದೆ, ತನ್ನ ಭಾವಚಿತ್ರವನ್ನು ಅಳವಡಿಸುವುದಕ್ಕೂ ಅವಕಾಶ ನೀಡಿದ ಪ್ರಧಾನಿಯವರ ಪಾತ್ರ ಬಿಎಸ್ಸೆನ್ನೆಲ್ ನಷ್ಟದ ಹಿಂದೆ ಬಹುದೊಡ್ಡದಿದೆ. ಬಿಎಸ್ಸೆನ್ನೆಲ್ ಸಿಬ್ಬಂದಿಯನ್ನು ದೇಶದ್ರೋಹಿ ಎಂದು ಕರೆಯುವ ಸಂಸದ ಅನಂತಕುಮಾರ್ ಇದನ್ನು ಮರೆಯಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಬಿಎಸ್ಸೆನ್ನೆಲ್ ಮಾತ್ರವಲ್ಲ, ಇನ್ನೂ ಹತ್ತು ಹಲವು ಪ್ರಮುಖ ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಬಲಿಕೊಡುವುದಕ್ಕೆ ಸರಕಾರ ಸಿದ್ಧತೆಗಳನ್ನು ನಡೆಸುತ್ತಿದೆೆ. ಅವುಗಳಲ್ಲಿ ಲಾಭದಾಯಕ ಸಂಸ್ಥೆಗಳೂ ಇವೆ. ಹಿಂದೂಸ್ತಾನ್ ಏರೋನಾಟಿಕ್ಸ್ ಭಾಗಿಯಾಗಬೇಕಾದ ರಫೇಲ್ ಒಪ್ಪಂದದಲ್ಲಿ, ಕೊನೆಯ ಕ್ಷಣದಲ್ಲಿ ರಕ್ಷಣಾ ವಲಯದಲ್ಲಿ ಯಾವ ಅನುಭವವೂ ಇಲ್ಲದ ರಿಲಯನ್ಸ್ ಕಂಪೆನಿ ಭಾಗಿಯಾದುದು ಹೇಗೆ? ಭಾರತದ ಹೆಮ್ಮೆಯಾಗಿರುವ ‘ಹಾಲ್(ಎಚ್‌ಎಎಲ್)’ ಕೂಡ ಸರಕಾರದ ನೀತಿಯಿಂದಾಗಿ ಹಾಳು ಬೀಳುವ ಹಂತದಲ್ಲಿದೆ. ಈಗಾಗಲೇ ಈ ಸಂಸ್ಥೆಯ ಸಿಬ್ಬಂದಿಗೆ ಪಾವತಿಯಾಗಬೇಕಾದ ವೇತನಗಳು ಸರಿಯಾಗಿ ವಿತರಣೆಯಾಗಿಲ್ಲ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯೊಳಗಿರುವ ಸಿಬ್ಬಂದಿಯನ್ನೂ ‘ದೇಶದ್ರೋಹಿ’ಗಳು ಎಂದು ಕರೆದು, ಸಂಸ್ಥೆಯನ್ನು ಸರಕಾರ ನಕಲಿ ಎನ್‌ಕೌಂಟರ್ ಮೂಲಕ ಕೊಂದು ಹಾಕುತ್ತದೆಯೇ? ಸಂಸದ ಅನಂತಕುಮಾರ್ ಹೆಗಡೆಯೇ ಉತ್ತರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News