ಇಬ್ಬರು ಹಿರಿಯ ಜೆಯುಡಿ ನಾಯಕರಿಗೆ ಒಂದು ವರ್ಷದ ಜೈಲು ಶಿಕ್ಷೆ ಅಮಾನತು: ಲಾಹೋರ್ ಕೋರ್ಟ್ ಆದೇಶ

Update: 2020-08-13 17:40 GMT

ಲಾಹೋರ್,ಆ.13: ಭಯೋತ್ಪಾದಕ ಚಟುವಟಿಕೆಗಳಿಗೆ ಅರ್ಥಿಕ ನೆರವು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಾತುದ್ದವಾ (ಜೆಯುಡಿ)ಗುಂಪಿನ ಇಬ್ಬರು ಹಿರಿಯ ನಾಯಕರಿಗೆ ವಿಧಿಸಲಾಗಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಪಾಕಿಸ್ತಾನದ ನ್ಯಾಯಾಲಯವೊಂದು ಗುರುವಾರ ಅಮಾನತಿನಲ್ಲಿರಿಸಿದೆ. ಇವರಿಬ್ಬರು 2008ರ ಮುಂಬೈ ದಾಳಿಯ ಸೂತ್ರಧಾರನೆನ್ನಲಾದ ಹಫೀಝ್ ಸಯೀದ್‌ನ ನಿಕಟವರ್ತಿ ಗಳೆನ್ನಲಾಗಿದೆ.

   ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಜೂನ್‌ನಲ್ಲಿ ನೀಡಿದ ತೀರ್ಪೊಂದರಲ್ಲಿ ಭಯೋತ್ಪಾದಕ ಚಟುವಟಿಕೆಳಿಗೆ ಆರ್ಥಿಕ ನೆರವು ಪೂರೈಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜೆಯುಡಿ ನಾಯಕರಾದ ಅಬ್ದುರ್ರಹ್ಮಾನ್ ಮಕ್ಕಿ ಹಾಗೂ ಅಬ್ದೂಸ್ ಸಲಾಂ ಅವರಿಗೆ ಒಂದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

 ಜೊತೆಗೆ ಇಬ್ಬರಿಗೂ ತಲಾ 50 ಸಾವಿರ ರೂ. ದಂಡ ವಿಧಿಸಿತ್ತು. ದಂಡ ಪಾವತಿಸಲು ವಿಫಲರಾದಲ್ಲಿ ಇನ್ನೂ ಆರು ತಿಂಗಳು ಹೆಚ್ಚುವರಿ ಕಾರಾಗೃಹ ವಾಸವನ್ನು ಅವರು ಅನುಭವಿಸಬೇಕಾಗುತ್ತದೆ. ಈ ಇಬ್ಬರು ಜೆಯುಡಿ ನಾಯಕರನ್ನು 1997ರ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತ್ತು.

  ನಿಷೇಧಿತ ಎಲ್‌ಇಟಿ ಸಂಘಟನೆಯ ಮೂಲಕ ಇವರಿಬ್ಬರೂ ಕಾನೂನುಬಾಹಿರವಾಗಿ ನಿಧಿ ಸಂಗ್ರಹಿಸುತ್ತಿದ್ದರೆನ್ನಲಾಗಿದೆ. ಇವರಿಬ್ಬರ ಆಸ್ತಿಗಳಿಗೆ ಮುಟ್ಟುಗೋಲು ಹಾಕುವಂತೆಯೂ ಎಟಿಸಿಯು ಆದೇಶಿಸಿತ್ತು.

 ತಮಗೆ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಇಬ್ಬರೂ ಲಾಹೋರ್ ಹೈಕೋರ್ಟ್‌ನ ಮೆಟ್ಟಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News