ನೀಲಂ-ಝೀಲಂ ನದಿಗಳಿಗೆ ಅಣೆಕಟ್ಟು ನಿರ್ಮಾಣ: ಚೀನಾ ವಿರುದ್ಧ ಪಿಓಕೆಯಲ್ಲಿ ಬೃಹತ್ ಪ್ರತಿಭಟನೆ

Update: 2020-08-13 17:45 GMT

ಮುಝಫರಾಬಾದ್, ಆ.13: ನೀಲಂ-ಝೀಲಂ ನದಿಗೆ ಚೀನಿ ಕಂಪೆನಿಗಳು ಬೃಹತ್ ಅಣೆಕಟ್ಟು ನಿರ್ಮಿಸುತ್ತಿರುವುದನ್ನು ವಿರೋಧಿಸಿ ಪಾಕ್ ಆಕ್ರಮಿತ ಕಾಶ್ಮೀ ರದ ನಗರ ಮುಝಫರಬಾದ್‌ನಲ್ಲಿ ಬುಧವಾರ ರಾತ್ರಿ ದೀವಟಿಗೆ ಮೆರವಣಿಗೆ ನಡೆಯಿತು.

‘ದರಿಯಾ ಬಚಾವೊ, ಮುಝಫರಾಬಾದ್ ಬಚಾವೊ’ ( ನದಿ ರಕ್ಷಿಸಿ, ಮುಝಫರಾಬಾದ್ ರಕ್ಷಿಸಿ) ಸಮಿತಿಯ ಆಯೋಜಿಸಿದ ಈ ರ್ಯಾಲಿಯಲ್ಲಿ ಪ್ರತಿಭಟನಕಾರರು ‘ನೀಲಂ-ಝೀಲಂ ಬೆಹನೆ ದೋ, ಹಮ್ ಜಿಂದಾ ರೆಹೆನೆ ದೊ’ ( ನೀಲಂ ಹಾಗೂ ಜೀಲಂ ನದಿಗಳನ್ನು ಹರಿಯಲು ಬಿಡಿ, ನಮ್ಮನ್ನು ಬದುಕಲು ಬಿಡಿ) ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ್ದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಝಾದ್ ಪಟ್ಟಾನ್ ಹಾಗೂ ಕೊಹಲಾಗಳಲ್ಲಿ ಜಲವಿದ್ಯುತ್ ಸ್ಥಾವರಗಳ ನಿರ್ಮಾಣದ ಒಪ್ಪಂದಕ್ಕೆ ಇತ್ತೀಚೆಗೆ ಪಾಕಿಸ್ತಾನ ಹಾಗೂ ಚೀನಾ ಸಹಿಹಾಕಿದ್ದವು.

ಚೀನಾ-ಪಾಕ್ ಆರ್ಥಿಕ ಕಾರಿಡಾರ್ (ಸಿಪಿಇಸಿ)ನ ಭಾಗವಾಗಿ 700.7 ಮೆಗಾವ್ಯಾಟ್ ಸಾಮರ್ಥ್ಯದ ಆಝಾದ್ ಪಟ್ಟಾನ್ ಜಲ ವಿದ್ಯುತ್ ಯೋಜನೆಗೆ ಜುಲೈ 6ರಂದು ಸಹಿ ಹಾಕಲಾಗಿತ್ತು. ಸುಮಾರು 1.54 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯ ಪ್ರಾಯೋಜಕತ್ವವನ್ನು ಜೀನಾದ ಗೆಝ್‌ಹೂಬಾ ಉದ್ಯಮ ಸಮೂಹ (ಸಿಜಿಇಸಿ) ವಹಿಸಿಕೊಂಡಿದೆ. ಕೊಹಲಾ ಜಲವಿದ್ಯುತ್ ಯೋಜನೆಯನ್ನು ಜೀಲಂ ನದಿಯಲ್ಲಿ ನಿರ್ಮಿಸಲಾಗುವುದು. ಈ ಯೋಜನೆಯು 2026ರಲ್ಲಿ ಪೂರ್ಣಗೊಳ್ಳಲಿದೆ. ಚೀನಾದ ತ್ರಿ ಗೊರ್ಗಸ್ ಕಾರ್ಪೊರೇಶನ್, ಅಂತಾರಾಷ್ಟ್ರೀಯ ಹಣಕಾಸು ನಿಗಮ (ಐಎಫ್‌ಸಿ) ಹಾಗೂ ಸಿಲ್ಕ್ ರೋಡ್ ನಿಧಿಯು ಈ ಯೋಜನೆಯ ಪ್ರಾಯೋಜಕತ್ವ ಪಡೆದಿದೆ.

ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಚೀನಿಯರ ಉಪಸ್ಥಿತಿಯು ಸ್ಥಳೀಯರಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸಿದೆ. ಅಲ್ಲದೆ ಎರಡು ಬೃಹತ್ ಅಣೆಕಟ್ಟುಗಳ ನಿರ್ಮಾಣದಿಂದ ಹಾಗೂ ನದಿಗಳ ಹರಿವನ್ನು ತಿರುಗಿಸುವುದರಿಂದ ತಮ್ಮ ಅಸ್ತಿತ್ವಕ್ಕೆ ಸಂಚಕಾರ ಉಂಟಾಗಲಿದೆಯೆಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆಯೆಂದು ಪಿಓಕೆಯ ರಾಜಕೀಯ ಹೋರಾಟಗಾರ ಡಾ. ಅಮ್ಜದ್ ಅಯೂಬ್ ಮಿರ್ಝಾ ತಿಳಿಸಿದ್ದಾರೆ. ‘‘ಈ ಮೊದಲು ಬೋರ್ಗರೆಯುತ್ತಾ ಹರಿಯುತ್ತಿದ್ದ ನೀಲಂ ನದಿಯು ಈಗ ಸಣ್ಣ ಹೊಳೆಯಂತಾಗಿದೆ. ಸ್ಥಳೀಯ ನಿವಾಸಿಗಳಿಗೆ ಇದರಿಂದ ಭಾರೀ ತೊಂದರೆಯಾಗಿದ್ದು, ಅವರಿಗೆ ಕುಡಿಯಲು ನೀರು ಸಹ ಸಿಗುತ್ತಿಲ್ಲ. ಅಲ್ಲದೆ ನದಿಯಲ್ಲಿ ಕೊಳಚೆ ನೀರು ತುಂಬಿಕೊಂಡಿದೆ ’’ಎಂದು ಅವರು ಹೇಳಿದ್ದಾರೆ. ‘‘ಈ ಪ್ರದೇಶದಲ್ಲಿ ಚೀನಾವು ಭಾರೀ ಹಣವನ್ನು ಹೂಡಿಕೆ ಮಾಡುತ್ತಿದೆ. ಆದರೆ ಅದನ್ನು ಮರುಪಾವತಿಸುವವರು ಯಾರು?’’ ಎಂದು ಡಾ. ಅಮ್ಜದ್ ಪ್ರಶ್ನಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News