ಬ್ಯಾಂಕ್ ವಂಚನೆ ಹಗರಣ: ಬಾಂಗ್ಲಾ ಮಾಜಿ ನ್ಯಾಯಾಧೀಶ ಸಿನ್ಹಾ ಸಹಿತ 10 ಮಂದಿ ವಿರುದ್ಧ ದೋಷಾರೋಪ ದಾಖಲು

Update: 2020-08-13 17:54 GMT

ಢಾಕಾ,ಆ.13: ಬ್ಯಾಂಕೊಂದರಿಂದ 40 ದಶಲಕ್ಷ ಟಾಕಾ (ಬಾಂಗ್ಲಾ ಕರೆನ್ಸಿ) ಹಣವನ್ನು ಲಪಟಾಯಿಸಿದ ಆರೋಪದಲ್ಲಿ ಬಾಂಗ್ಲಾದ ಪ್ರಪ್ರಥಮ ಹಿಂದೂ ನ್ಯಾಯಾಧೀಶ ಸುರೇಂದ್ರ ಕುಮಾರ್ ಸಿನ್ಹಾ ಹಾಗೂ ಇತರ 10 ಮಂದಿ ವಿರುದ್ಧ ಢಾಕಾದ ನ್ಯಾಯಾಲಯವು ಗುರುವಾರ ದೋಷಾರೋಪ ಹೊರಿಸಿದೆ.

 ಬಾಂಗ್ಲಾದ ಮಾಜಿ ಮುಖ್ಯ ನ್ಯಾಯಾಧೀಶ 69 ವರ್ಷದ ಸುರೇಂದ್ರ ಕುಮಾರ್ ಸಿನ್ಹಾ ಸದ್ಯ ಅಮೆರಿಕದಲ್ಲಿ ವಾಸವಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಬಾಂಗ್ಲಾದ ಇನ್ನೊಂದು ನ್ಯಾಯಾಲಯವು ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು. ಇದಾದ ಆರು ತಿಂಗಳ ಬಳಿಕ ಢಾಕಾ ನ್ಯಾಯಾಲಯವು ಸಿನ್ಹಾ ವಿರುದ್ಧ ದೋಷಾರೋಪ ಹೊರಿಸಿದೆ. ಸಿನ್ಹಾ ತಲೆಮರೆಸಿಕೊಂಡ ಆರೋಪಿಯೆಂದು ಬಾಂಗ್ಲಾದ ಭ್ರಷ್ಟಾಚಾರ ನಿಗ್ರಹ ಆಯೋಗವು (ಎಸಿಸಿ) ಈಗಾಗಲೇ ಘೋಷಿಸಿದೆ.

  ರೈತರ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಎಸ್.ಕೆ. ಸಿನ್ಹಾ ಹಾಗೂ ಇತರ 10 ಮಂದಿಯ ವಿರುದ್ಧ ದೋಷಾರೋಪ ಹೊರಿಸಲಾಗಿದೆಯೆಂದು ಪ್ರಾಸಿಕ್ಯೂಶನ್ ವಕೀಲರು ತಿಳಿಸಿದ್ದಾರೆ.

 ಪ್ರಕರಣದ ಇತರ ಆರು ಮಂದಿ ಆರೋಪಿಗಳಲ್ಲಿ ಮೂವರು ಬ್ಯಾಂಕ್‌ನ ಮಾಜಿ ಅಧಿಕಾರಿಗಳಾಗಿದ್ದು, ಇನ್ನೋರ್ವ ಸಿನ್ಹಾ ಅವರ ಸಹಾಯಕನಾಗಿದ್ದನೆಂದು ಸರಕಾರಿ ಪರ ಅಭಿಯೋಜಕರು ತಿಳಿಸಿದ್ದಾರೆ.

ಸದ್ಯ ಮೂವರು ಆರೋಪಿಗಳು ಮಾತ್ರವೇ ಖುದ್ದಾಗಿ ವಿಚಾರಣೆಗೆ ಹಾಜರಾಗಿದ್ದು, ಉಳಿದವರು ವಿಚಾರಣೆಯಿಂದ ಪಾರಾಗಲು ಪಲಾಯನಗೈದಿದ್ದಾರೆಂದು ಅವರು ಹೇಳಿದ್ದಾರೆ.

ಢಾಕಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಶೇಖ್ ನಝ್ಮುಲ್ ಅಲಂ ಆರೋಪಿಗಳ ವಿರುದ್ಧದ ದೋಷಾರೋಪಗಳನ್ನು ಓದಿ ಹೇಳಿದ್ದರು ಹಾಗೂ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಿದ್ದಾರೆ.

    2016ರಲ್ಲಿ ಇಬ್ಬರು ಉದ್ಯಮಿಗಳು ನಕಲಿ ದಾಖಲೆಗಳನ್ನು ನೀಡಿ ರೈತರ ಬ್ಯಾಂಕ್ ನಿಂದ 40 ದಶಲಕ್ಷ ಟಾಕಾ (ಸುಮಾರು 3.52 ಕೋಟಿ ರೂ.) ಲಪಟಾಯಿಸಿದ್ದರು. ಆನಂತರ ಈ ಹಣವನ್ನು ಸಿನ್ಹಾ ಅವರ ಖಾತೆಗೆ ವರ್ಗಾಯಿಸಲಾಗಿತ್ತು. ಸಿನ್ಹಾ ಈಗ ಅಮೆರಿಕದಲ್ಲಿ ಆಶ್ರಯ ಕೋರಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News