ಶೇ.43ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ, ಕೈತೊಳೆಯಲು ಸಾಬೂನಿಲ್ಲ

Update: 2020-08-13 17:58 GMT

ಜೊಹಾನ್ಸ್‌ಬರ್ಗ್,ಆ.13: ಜಗತ್ತಿನ ಶೇ.43ರಷ್ಟು ಶಾಲೆಗಳಲ್ಲಿ ಕುಡಿಯುವ ಕುಡಿಯುವ ನೀರು ಹಾಗೂ ಕೈತೊಳೆಯಲು ಸೋಪಿನ ಸೌಲಭ್ಯವಿಲ್ಲವೆಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ನಡುವೆ ಶಾಲೆಯನ್ನು ಪುನಾರಂಭಿಸುವುದು ಎಷ್ಟು ಸುರಕ್ಷಿತವೆಂದು ವಿವಿಧ ದೇಶಗಳು ಪೇಚಾಡುತ್ತಿರುವಂತೆಯೇ ವಿಶ್ವಸಂಸ್ಥೆಯ ಈ ವರದಿಯು ಇನ್ನಷ್ಟು ಆತಂಕ ಮೂಡಿಸಿದೆ.

ಜಗತ್ತಿನಾದ್ಯಂತ ಶಾಲೆಗಳಲ್ಲಿ ಕಲಿಯುತ್ತಿರುವ 81.80 ಕೋಟಿ ಮಕ್ಕಳಿಗೆ ಮೂಲಭೂತ ಕೈತೊಳೆಯುವ ಸೋಪಿನ ಸೌಲಭ್ಯ ಕೊರತೆಯಿದ್ದು, ಅವರಲ್ಲಿ ಮೂರನೆ ಒಂದರಷ್ಟು ಮಂದಿ ಸಬ್‌ಸಹರನ್ ಆಫ್ರಿಕಾ ಪ್ರದೇಶದಲ್ಲಿದ್ದಾರೆಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಶಾಲೆಗಳನ್ನು ಪುನಾರಂಭಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಸರಕಾರಗಳು ಸಾಮಾಜಿಕ ಹಾಗೂ ಆರ್ಥಿಕ ಅಂಶಗಳೊಂದಿಗೆ, ಆರೋಗ್ಯದ ಕುರಿತ ಕಾಳಜಿಯನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ವರದಿ ಹೇಳಿದೆ. ಶಾಲೆಗಳನ್ನು ದೀರ್ಘಾವಧಿಗೆ ಮುಚ್ಚುವುದರಿಂದ ಮಕ್ಕಳ ಮೇಲಾಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆಯೂ ವರದಿಯು ಗಮನಸೆಳೆದಿದೆ.

ಜಗತ್ತಿನಾದ್ಯಂತ ಸರಾಸರಿ ಪ್ರತಿ ಮೂರು ಶಾಲೆಗಳ ಪೈಕಿ ಒಂದರಲ್ಲಿ ಕುಡಿಯುವ ನೀರಿನ ಸೌಲಭ್ಯ ಅತ್ಯಂತ ಸೀಮಿತವಾಗಿದೆ ಅಥವಾ ಇರುವುದಿಲ್ಲವೆಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News