ಗುವಾಹಟಿ: ಗಾಯಕ ಝುಬೀನ್ ಗರ್ಗ್‌ಗೆ ಗುಂಪಿನಿಂದ ಬೆದರಿಕೆ, ನಿಂದನೆ

Update: 2020-08-13 18:11 GMT
twitter.com

ಗುವಾಹಟಿ,ಆ.13: ಗುರುವಾರ ನಸುಕಿನಲ್ಲಿ ತನ್ನ ಕಾರನ್ನು ತಡೆದ ಕನಿಷ್ಠ ಆರು ಅಪರಿಚಿತ ವ್ಯಕ್ತಿಗಳು ತನಗೆ ಬೆದರಿಕೆಯೊಡ್ಡಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಖ್ಯಾತ ಗಾಯಕ ಝುಬೀನ್ ಗರ್ಗ್ ಅವರು ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪ್ರಬಲ ಧ್ವನಿಗಳಲ್ಲೊಂದಾಗಿದ್ದ ಗರ್ಗ್ ಇತ್ತೀಚಿಗೆ ಅಸ್ಸಾಂ ಕೃಷಿ ಸಚಿವಾಲಯದ ಬ್ರಾಂಡ್ ಅಂಬಾಸಡರ್ ಆಗಿ ಘೋಷಿಸಲ್ಪಟ್ಟ ನಂತರ ಅವರಿಗೆ ಕೆಲವು ವೈರಿಗಳು ಸೃಷ್ಟಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ನಸುಕಿನ 12:40ರ ಸುಮಾರಿಗೆ ತಾನು ಸ್ಟುಡಿಯೊದಿಂದ ಮನೆಗೆ ಮರಳುತ್ತಿದ್ದಾಗ ಬಿಳಿಯ ಮಾರುತಿ ಕಾರಿನಲ್ಲಿ ಬಂದಿದ್ದ ಆರೋಪಿಗಳು ತನ್ನ ಕಾರನ್ನು ತಡೆಗಟ್ಟಿದ್ದರು. ಅವರ ಕೈಗಳಲ್ಲಿ ಬಿಯರ್ ಬಾಟಲ್‌ಗಳಿದ್ದು, ತನ್ನನ್ನು ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ. ಈ ಸಂದರ್ಭ ತನ್ನೊಂದಿಗೆ ಕಾರಿನ ಚಾಲಕ ಮತ್ತು ರಾಜ್ಯ ಸರಕಾರವು ಒದಗಿಸಿರುವ ಇಬ್ಬರು ಭದ್ರತಾ ಅಧಿಕಾರಿಗಳು ಇದ್ದರು. ಆರೋಪಿಗಳು ಪಾನಮತ್ತರಾಗಿದ್ದರು ಮತ್ತು ಬಿಯರ್ ಬಾಟಲ್‌ಗಳಿಂದ ತನಗೆ ಹಲ್ಲೆ ನಡೆಸಿದ್ದಾರೆ ಎಂದು ಗರ್ಗ್ ದೂರಿನಲ್ಲಿ ತಿಳಿಸಿದ್ದಾರೆ.

ಅಸ್ಸಾಮಿನ ಪ್ರಸಿದ್ಧ ಗಾಯಕರಲ್ಲೊಬ್ಬರಾಗಿರುವ ಗರ್ಗ್ ಹಲವಾರು ಹಿಂದಿ, ಬಂಗಾಳಿ ಮತ್ತು ಅಸ್ಸಾಮಿ ಗೀತೆಗಳನ್ನು ಹಾಡಿದ್ದಾರೆ.

‘ಗರ್ಗ್ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ.ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ’ ಎಂದು ಸಚಿವ ಹಿಮಂತ ಬಿಸ್ವ ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News